ADVERTISEMENT

ಬೇಸಿಗೆ ಶಿಬಿರದಿಂದ ಪ್ರತಿಭೆ ಪೋಷಣೆ: ಮನೋಜ್ ವಾಮಂಜೂರು

‘ಆಟ–ಪಾಠ’ ಮಕ್ಕಳ ಸಂತಸ ಕಲಿಕಾ ಬೇಸಿಗೆ ಶಿಬಿರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 6 ಮೇ 2024, 4:54 IST
Last Updated 6 ಮೇ 2024, 4:54 IST
ಕಾರ್ಯಕ್ರಮದಲ್ಲಿ ಮನೋಜ್ ವಾಮಂಜೂರು ಮಾತನಾಡಿದರು. ಸಂತೋಷ್ ಬಜಾಲ್, ದೀಪಕ್ ಬಜಾಲ್, ನಾಗರಾಜ್ ಬಜಾಲ್, ಮನೋಜ್ ವಾಮಂಜೂರು, ಆನಂದ ಎನೆಲ್ಮಾರ್ ಹಾಗೂ ಚಂಚಲಾಕ್ಷಿ ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ಮನೋಜ್ ವಾಮಂಜೂರು ಮಾತನಾಡಿದರು. ಸಂತೋಷ್ ಬಜಾಲ್, ದೀಪಕ್ ಬಜಾಲ್, ನಾಗರಾಜ್ ಬಜಾಲ್, ಮನೋಜ್ ವಾಮಂಜೂರು, ಆನಂದ ಎನೆಲ್ಮಾರ್ ಹಾಗೂ ಚಂಚಲಾಕ್ಷಿ ಭಾಗವಹಿಸಿದ್ದರು   

ಮಂಗಳೂರು: ‘ಮಕ್ಕಳ ಸುಪ್ತ ಪ್ರತಿಭೆಯನ್ನು ಪೋಷಿಸುವುದಕ್ಕೆ ಬೇಸಿಗೆ ಶಿಬಿರ ಸಹಕಾರಿ’ ಎಂದು ಸಮುದಾಯ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮನೋಜ್ ವಾಮಂಜೂರು  ಹೇಳಿದರು

ಪಕ್ಕಲಡ್ಕ ಯುವಕ ಮಂಡಲ  ಹಾಗೂ ಡಿವೈಎಫ್ಐನ ಬಜಾಲ್ ಪಕ್ಕಲಡ್ಕ ಘಟಕದ ಆಶ್ರಯದಲ್ಲಿ ಪಕ್ಕಲಡ್ಕದಲ್ಲಿ ಹಮ್ಮಿಕೊಂಡ ‘ಆಟ–ಪಾಠ’ ಮಕ್ಕಳ ಸಂತಸ ಕಲಿಕಾ ಬೇಸಿಗೆ ಶಿಬಿರವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಭಾನುವಾರ ಮಾತನಾಡಿದರು.

‘ಖಾಸಗೀಕರಣಗೊಂಡಿರುವ ಶಿಕ್ಷಣ ವ್ಯವಸ್ಥೆ ಬರೀ ವ್ಯಾಪಾರದ ದೃಷ್ಟಿಯನ್ನು ಹೊಂದಿದೆ. ವಿದ್ಯಾರ್ಥಿಗಳನ್ನು ವ್ಯಾಪಾರದ ಸರಕನ್ನಾಗಿಸುತ್ತಿದೆ.  ಪರೀಕ್ಷಾ ಫಲಿತಾಂಶದ ಗುಮ್ಮವನ್ನು ಮಾತ್ರ ತಲೆಯಲ್ಲಿ ತುಂಬಿ, ಮಕ್ಕಳ ಬದುಕನ್ನು ಯಾಂತ್ರಿಕಗೊಳಿಸಲಾಗುತ್ತದೆ. ಅವಕಾಶಗಳೇ ಇಲ್ಲದೇ ಅವರ  ಸುಪ್ತ ಪ್ರತಿಭೆಗಳು ಕಮರುತ್ತಿರುವುದು ದುರಂತ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಶಿಕ್ಷಣದ ಒತ್ತಡಕ್ಕೆ ಒಳಗಾದ ಮಕ್ಕಳು ಇಂದು ಆಟದ ಮೈದಾನ ಕಡೆಗೆ ಮುಖಮಾಡುತ್ತಿಲ್ಲ. ಕ್ರೀಡೆ ಮತ್ತಿತ್ತರ ಪಠ್ಯೇತರ ಚಟುವಟಿಕೆ ಕುರಿತೂ ಆಸಕ್ತಿ ವಹಿಸುತ್ತಿಲ್ಲ. ಅದಕ್ಕೆ ಪೂರಕವಾದ ವಾತಾವರಣವೂ ಇಲ್ಲ. ಹಾಗಾಗಿ ಮಕ್ಕಳು  ಮೊಬೈಲ್ ದಾಸರಾಗುತ್ತಿದ್ದಾರೆ. ಚಿಣ್ಣರನ್ನು ಇದರಿಂದ ಹೊರತರಲು ಬೇಸಿಗೆ ಶಿಬಿರ ಪರಿಣಾಮಕಾರಿ‘ ಎಂದರು.

‘ಶಿಕ್ಷಣದ ಜೊತೆ ಬೇಸಿಗೆ ಶಿಬಿರಗಳೂ ವ್ಯಾಪಾರಿಕರಣಗೊಂಡಿವೆ. 25 ವರ್ಷಗಳಿಂದ ಬೇಸಿಗೆ ಶಿಬಿರಗಳನ್ನು ಉಚಿತವಾಗಿ ಆಯೋಜಿಸುತ್ತಿರುವ ಪಕ್ಕಲಡ್ಕ ಯುವಕ ಮಂಡಲದ ನಡೆ ಅನುಕರಣೀಯ’ ಎಂದರು. 

ಸಂತ ಜೋಸೆಫರ ಪ್ರೌಢಶಾಲೆಯ ಶಿಕ್ಷಕಿ ಚಂಚಲಾಕ್ಷಿ, ‘ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಪರಿಸರ ಕಾಳಜಿ, ಜನಪರ ಕಾಳಜಿಗಳನ್ನೆಲ್ಲಾ ಬೆಳೆಸುತ್ತಿವೆ. ಸಮಾಜದಲ್ಲಿ ಬದುಕುವ ಬಗೆಯನ್ನು ಕಲಿಸುತ್ತಿವೆ’ ಎಂದರು.

ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಪಕ್ಕಲಡ್ಕ ಯುವಕ ಮಂಡಲದ   ದೀಪಕ್ ಬಜಾಲ್, ಡಿವೈಎಫ್ಐ ನಗರ ಘಟಕದ ಅಧ್ಯಕ್ಷ ಜಗದೀಶ್ ಬಜಾಲ್,  ಪಕ್ಕಲಡ್ಕ ಘಟಕದ ಕಾರ್ಯದರ್ಶಿ ಆನಂದ ಎನೆಲ್ಮಾರ್  ಮಾತನಾಡಿದರು.

ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷ ನಾಗರಾಜ್ ಬಜಾಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರೀತೇಶ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಡಿವೈಎಫ್ಐ ಮುಖಂಡ ಧೀರಜ್ ಬಜಾಲ್ ವಂದಿಸಿದರು.

ಸ್ಥಳೀಯ ಮುಖಂಡರಾದ ಪ್ರಕಾಶ್ ಶೆಟ್ಟಿ, ಅಶೋಕ್ ಎನೆಲ್ಮಾರ್, ವರಪ್ರಸಾದ್, ಸಿಂಚನ್, ಅಶ್ವಿನಿ ಬಜಾಲ್, ನವೀನ್ ನಾಯಕ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.