ADVERTISEMENT

ಪಕ್ಷಿಕೆರೆ ಕೊಲೆ ಪ್ರಕರಣ: ಕಾರ್ತಿಕ್‌ ಭಟ್‌ ತಾಯಿ, ಅಕ್ಕ ಬಂಧನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 5:21 IST
Last Updated 13 ನವೆಂಬರ್ 2024, 5:21 IST
ಶ್ಯಾಮಲಾ ಭಟ್
ಶ್ಯಾಮಲಾ ಭಟ್   

ಮೂಲ್ಕಿ: ಪಕ್ಷಿಕೆರೆಯಲ್ಲಿ ಈಚೆಗೆ ನಡೆದ ಅವಳಿ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣ ಸಂಬಂಧ ಮೃತ ಕಾರ್ತಿಕ್ ಭಟ್‌ ತಾಯಿ ಶ್ಯಾಮಲಾ ಭಟ್‌ (61) ಹಾಗೂ ಅಕ್ಕ, ಸುರತ್ಕಲ್ ಬಾಳ ನಿವಾಸಿ ಕಣ್ಮಣಿ ರಾವ್‌ (36) ಅವರನ್ನು ಮೂಲ್ಕಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಶ್ಯಾಮಲಾ ಭಟ್‌ ಹಾಗೂ ಕಣ್ಮಣಿ ರಾವ್‌ ನೀಡಿದ ಮಾನಸಿಕ ಕಿರುಕುಳದಿಂದಾಗಿಯೇ ಕಾರ್ತಿಕ್ ಭಟ್‌ ಈ ಕೃತ್ಯವೆಸಗಿದ್ದಾನೆ ಎಂದು ಆರೋಪಿಸಿ ಕಾರ್ತಿಕ್‌ ಭಟ್ ಪತ್ನಿ ಪ್ರಿಯಾಂಕಾ ಅವರ ತಾಯಿ ಸಾವಿತ್ರಿ ಮೂಲ್ಕಿ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕುರಿತು ಪ್ರಕರಣ ದಾಖಲಾಗಿದ್ದು ಇಬ್ಬರು ಆರೋಪಿಗಳನ್ನು ಮೂಲ್ಕಿ ಪೊಲೀಸರು ಬಂಧಿಸಿ ಮೂಡುಬಿದಿರೆ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. 

ಪಕ್ಷಿಕೆರೆ ಜಲಜಾಕ್ಷಿ ರೆಸಿಡೆನ್ಸಿ ಬಹುಮಹಡಿ ವಸತಿ ಸಂಕೀರ್ಣದ ಕಟ್ಟಡದಲ್ಲಿ ವಾಸ್ತವ್ಯವಿದ್ದ ಕಾರ್ತಿಕ್ ಭಟ್ (32) ಮೃತದೇಹ ರೈಲಿನಡಿ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಬೆಳ್ಳಯೂರು ಗ್ರಾಮದಲ್ಲಿ ರೈಲ್ವೆ ಹಳಿಯಲ್ಲಿ ಶುಕ್ರವಾರ ರಾತ್ರಿ ಪತ್ತೆಯಾಗಿತ್ತು. ಅವರ  ಪತ್ನಿ ಪ್ರಿಯಾಂಕ (28) ಮಗು ಹೃದಯ್ (4) ಮೃತದೇಹ ಪಕ್ಷಿಕೆರೆಯಲ್ಲಿ ಅವರು ವಾಸವಾಗಿದ್ದ ‘ಜಲಜಾಕ್ಷಿ ರೆಸಿಡೆನ್ಸಿ’ಯ ‘ಮಾತಾ ಅನುಗ್ರಹ’ ಫ್ಲ್ಯಾಟ್‌ನಲ್ಲಿ ಶನಿವಾರ ಪತ್ತೆಯಾಗಿತ್ತು. 

ADVERTISEMENT

‘ಆ ಫ್ಲ್ಯಾಟ್‌ನಲ್ಲಿ ಸಿಕ್ಕಿದ್ದ ನಾಲ್ಕು ಪುಟಗಳ ಡೆತ್ ನೋಟ್‌ನಲ್ಲಿ ಮೃತ ಕಾರ್ತಿಕ್‌ ಭಟ್‌, ತನ್ನ ತಾಯಿ ಹಾಗೂ ಅಕ್ಕ    ಕಿರುಕುಳ ನೀಡಿದ್ದರ ಬಗ್ಗೆ ಪ್ರಸ್ತಾಪ ಮಾಡಿದ್ದರು. ಕಾರ್ತಿಕ್‌ ಭಟ್‌ ವಾಸವಾಗಿದ್ದ ಪಕ್ಷಿಕೆರೆಯ ಜಲಜಾಕ್ಷಿ ರೆಸಿಡೆನ್ಸಿಯ ಮಾತಾ ಅನುಗ್ರಹ ‘ಫ್ಲ್ಯಾಟ್‌’ ಅನ್ನು ತೆರವು ಮಾಡುವಂತೆ ಅಕ್ಕ ಹಾಗೂ ತಾಯಿ ಒತ್ತಡ ಹೇರಿದ್ದರು. ತಾಯಿ ಮತ್ತು ಅಕ್ಕ ತನಗೆ ತೊಂದರೆ ಕೊಟ್ಟಿದ್ದಾರೆ ಎಂದು ಬರೆದುಕೊಂಡಿದ್ದರಿಂದ  ಅವರಿಬ್ಬರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  

ಮೂಡುಬಿದಿರೆಯ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಆರೋಪಿಗಳು ತಲೆ ತಿರುಗಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಮಂಗಳವಾರ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಪೊಲೀಸರು  ಸಿದ್ಧತೆ ನಡೆಸಿದ್ದಾರೆ.

ಕೊಲೆ ನಡೆದ ಫ್ಲ್ಯಾಟ್‌ ಅನ್ನು ಪೊಲೀಸರು ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿದ್ದರು. ಮಂಗಳವಾರದಿಂದ ಅಲ್ಲಿ ಮತ್ತೆ ಕುಟುಂಬದ ಸದಸ್ಯರ ವಾಸಕ್ಕೆ ಅವಕಾಶ ಕಲ್ಪಿಸಿದ್ದಾರೆ. ಪ್ರಿಯಾಂಕ್ ಭಟ್ ಅವರ ತಂದೆ ತಾಯಿ ಹಾಗೂ ಸಹೋದರ ಮಂಗಳೂರಿನಲ್ಲಿಯೇ ಉಳಿದಿದ್ದಾರೆ. 

ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಕಾರ್ತಿಕ್ ಉತ್ತಮ ವೇತನವನ್ನು ಪಡೆಯುತ್ತಿದ್ದ. ಊರಿನಲ್ಲೇ ನೆಲೆಸಿದ ಬಳಿಕ ಹಿಂದಿನಂತೆ ಐಷಾರಾಮಿ ಬದುಕು ನಡೆಸಲು ಆಗದೇ  ಸಾಲದ ಸುಳಿಯಲ್ಲಿ ಸಿಲುಕಿದ್ದ ಎನ್ನಲಾಗಿದ್ದು, ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

‘ಕಣ್ಮಣಿ ಪತಿ ಹೆಸರಿನಲ್ಲಿದೆ ಫ್ಲ್ಯಾಟ್‌’

‘ಪಕ್ಷಿಕೆರೆಯ ಜನಾರ್ದನ ‌ಭಟ್ ಅವರ ಮಗ ಕಾರ್ತಿಕ್ ಭಟ್‌ಗೆ ಮಗಳು ಪ್ರಿಯಾಂಕಾಳನ್ನು 2018ರ ನ 14ರಂದು ಮದುವೆ ಮಾಡಿಕೊಟ್ಟಿದ್ದೆವು. ದಂಪತಿ ಅನ್ಯೋನ್ಯವಾಗಿದ್ದು ಅವರಿಗೆ 4 ವರ್ಷ ಪ್ರಾಯದ ಗಂಡು ಮಗುವಿತ್ತು. ಮದುವೆಯಾದಾಗ ‌‌ ಕಾರ್ತಿಕ್‌ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದ. ಆತ ಊರಿಗೆ ಮರಳಿದ ನಂತರ ಅಸೌಖ್ಯದಿಂದ ಇದ್ದ ತಂದೆ–ತಾಯಿ ಜೂತೆ ವಾಸಮಾಡಿಕೊಂಡಿದ್ದ.

ಅವರ ವಾಸದ ಮನೆಯು ಆತನ ಅಕ್ಕ ಕಣ್ಮಣಿಯವರ ಗಂಡ ಗುರುಪ್ರಸಾದ ಎಂಬವರ ಹೆಸರಿನಲ್ಲಿದೆ. ಕಾರ್ತಿಕ ವಿದೇಶದಲ್ಲಿದ್ದಾಗ ಆ ಮನೆಯನ್ನು ಆತನ ತಂದೆಯ ಹೆಸರಿನಲ್ಲಿ ಖರೀದಿಸಿರುವುದಾಗಿ ಹೇಳಿ ಅವರು ಹಣವನ್ನು ಪಡೆದುಕೊಂಡಿದ್ದರು. ಆ ಮನೆಯ ಸಾಲವನ್ನೂ ಕಾರ್ತಿಕ ತೀರಿಸುತ್ತಿದ್ದ. ಆದರೂ ಆ ಮನೆಯು ಕಣ್ಮಣಿಗೆ ಸೇರಿದ್ದು ಎಂದು ಆತನ ಅಮ್ಮ ಎಲ್ಲರಲ್ಲಿ ಹೇಳುತ್ತಿದ್ದರು.

ಇದು ಆತನಿಗೆ ಮಾನಸಿಕ ಕಿರಿಕಿರಿ ಮಾಡುತ್ತಿತ್ತು. ಈ ಬಗ್ಗೆ ಆತನೇ ನನ್ನ‌ಲ್ಲಿ ತಿಳಿಸಿದ್ದ’ ಎಂದು ಸಾವಿತ್ರಿ ದೂರಿನಲ್ಲಿ ಆರೋಪಿಸಿದ್ದಾರೆ ‘ನನ್ನ ಮಗಳು ಮತ್ತು ಅಳಿಯ ಬೇರೆ ಮನೆ ಮಾಡಬೇಕು. ಪ್ರಿಯಾಂಕಾಳೂ ಕೆಲಸಕ್ಕೆ ಹೋಗಬೇಕು. ಕಾರ್ತಿಕ್ ಮತ್ತೆ ವಿದೇಶಕ್ಕೆ ಹೋಗಬೇಕು ಎಂದು ಶ್ಯಾಮಲಾ ಒತ್ತಾಯಿಸಿದ್ದರು. ಕಣ್ಮಣಿ ಮಾತು ಕೇಳಿ ಅವರು ಈ ರೀತಿ ಹೇಳಿದ್ದರು.

ಆದರೆ ಕಾರ್ತಿಕ್ ಅದಕ್ಕೆ ಒಪ್ಪಿರಲಿಲ್ಲ. ದಂಪತಿ ಎರಡು ವರ್ಷಗಳಿಂದ ಮನೆಯಲ್ಲಿ ಬೇರೆ ಅಡುಗೆ ಮಾಡಿಕೊಂಡಿದ್ದರು. ಒಂದೇ ಮನೆಯಲ್ಲಿದ್ದರೂ ಆತನ ತಂದೆ ತಾಯಿ ಮಗುವಿನಲ್ಲಾಗಲಿ ಪ್ರಿಯಾಂಕಾಳ ಬಳಿಯಾಗಲೀ ಪ್ರೀತಿಯಿಂದ ಮಾತನಾಡಿಸುತ್ತಿರಲಿಲ್ಲ. ಕಣ್ಮಣಿಯ ಮಾತು ಕೇಳಿ ಮಗ ಮತ್ತು ಸೊಸೆಯನ್ನು ಹಿಯಾಳಿಸುತ್ತಿದ್ದರು. ಮಾನಸಿಕ ಕಿರುಕುಳ ನೀಡಿದ್ದರಿಂದ  ಕಾರ್ತಿಕನು ಈ ಕೃತ್ಯ ನಡೆಸಿದ್ದಾನೆ’ ಎಂದು ಅವರು ಆರೋಪಿಸಿದ್ದಾರೆ.

ಮೋಡ್‌ನಲ್ಲಿ ಮೊಬೈಲ್‌ಗಳು ಪತ್ತೆ

ಈ ನಡುವೆ ಕಾರ್ತಿಕ್ ಭಟ್‌ ಹಾಗೂ ಆತನ ಪತ್ನಿ ಪ್ರಿಯಾಂಕಾ ಅವರ ಮೊಬೈಲ್‌ಗಳು ಕೊಲೆ ನಡೆದ ಮನೆಯ ಶೌಚಾಲಯದ ಕಮೋಡ್‌ನಲ್ಲಿ ಪತ್ತೆಯಾಗಿದ್ದು ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಆ ಮೊಬೈಲ್‌ಗಳಿಗೆ ಬಂದ ಹಾಗೂ ಅವುಗಳಿಂದ ಹೊರ ಹೋಗಿರುವ ಕರೆಗಳ ವಿವರಗಳನ್ನೂ ಪೊಲೀಸರು ಸಂಗ್ರಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.