ADVERTISEMENT

Paris Olympics 2024: ಆಳ್ವಾಸ್‌ನಲ್ಲಿ ಬೆಳೆದ ಐವರು ಅಥ್ಲೆಟಿಕ್ಸ್‌ ಕಣದಲ್ಲಿ

ಒಲಿಂಪಿಕ್ಸ್‌: ರಿಯೊದಲ್ಲೂ ಸ್ಪರ್ಧಿಸಿದ್ದ ಪೂವಮ್ಮ; ಟ್ರ್ಯಾಕ್‌ನಲ್ಲಿ ನಾಲ್ವರು, ಫೀಲ್ಡ್‌ನಲ್ಲಿ ಒಬ್ಬರು

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 5:31 IST
Last Updated 26 ಜುಲೈ 2024, 5:31 IST

ಪೂವಮ್ಮ

ಪೂವಮ್ಮ

ಮೂಡುಬಿದಿರೆ: ಪ್ಯಾರಿಸ್‌ನಲ್ಲಿ ಶುಕ್ರವಾರ ಆರಂಭವಾಗಲಿರುವ ಒಲಿಂಪಿಕ್ಸ್‌ನ ಪುರುಷ ಮತ್ತು ಮಹಿಳೆಯರ 4x400 ಮೀಟರ್ಸ್ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ತಂಡಗಳಲ್ಲಿ ಒಟ್ಟು ನಾಲ್ವರು ಮತ್ತು ಟ್ರಿಪಲ್ ಜಂಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಒಬ್ಬರು ಇಲ್ಲಿನ ಆಳ್ವಾಸ್‌ ಕಾಲೇಜಿನಲ್ಲಿ ಅಭ್ಯಾಸ ಮಾಡಿದವರು.

ADVERTISEMENT

ಪುರುಷರ ರಿಲೆ ತಂಡದ ಸಂತೋಷ್ ಕುಮಾರ್ ಮತ್ತು ಮಿಜೊ ಚಾಕೊ ಕುರಿಯನ್‌, ಮಹಿಳೆಯರ ತಂಡದ ಪೂವಮ್ಮ ರಾಜು ಮತ್ತು ಶುಭಾ ವೆಂಕಟೇಶನ್‌, ಟ್ರಿಪಲ್ ಜಂಪ್‌ನಲ್ಲಿ ಸ್ಪರ್ಧಿಸುತ್ತಿರುವ ಪ್ರವೀಣ್ ಚಿತ್ರವೇಲ್ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ದತ್ತು ಶಿಕ್ಷಣ ಯೋಜನೆಯಲ್ಲಿದ್ದವರು. ಪೂವಮ್ಮ ಈಗ ಒಎನ್‌ಜಿಸಿಯಲ್ಲಿ, ಸಂತೋಷ್‌ ಭಾರತೀಯ ಸೇನೆಯಲ್ಲಿ, ಮಿಜೊ ಚಾಕೊ ಭಾರತೀಯ ವಾಯುಸೇನೆಯಲ್ಲಿ ಮತ್ತು ಶುಭಾ ತಮಿಳುನಾಡು ಪೊಲೀಸ್‌ನಲ್ಲಿದ್ದಾರೆ.

ಮಿಜೊ ಚಾಕೊ ಕುರಿಯನ್

ಪೂವಮ್ಮ ರಾಜು 2016ರ ಒಲಿಂಪಿಕ್ಸ್‌ನಲ್ಲೂ ಭಾರತ ರಿಲೆ ತಂಡದಲ್ಲಿದ್ದರು. ಏಷ್ಯನ್ ಗೇಮ್ಸ್‌, ಏಷ್ಯನ್ ಚಾಂಪಿಯನ್‌ಷಿಪ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪದಕಗಳನ್ನು ಗೆದ್ದಿರುವ ಅವರು ಆಳ್ವಾಸ್ ಕಾಲೇಜ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿ ದ್ದರು. 2012ರ ಅಖಿಲ ಭಾರತ ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ 400 ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದರು.

ಸುಭಾ ವೆಂಕಟೇಶನ್

ಸಂತೋಷ್ ತಮಿಳರಸನ್ ತಮಿಳುನಾಡಿನವರು. ಗುಂಟೂರಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದ 400 ಮೀಟರ್ಸ್‌ ಹರ್ಡಲ್ಸ್ ಮತ್ತು 400 ಮೀಟರ್ಸ್‌ ರಿಲೇಯಲ್ಲಿ ಮಂಗಳೂರು ವಿವಿಗೆ ಚಿನ್ನದ ಪದಕ ತಂದುಕೊಟ್ಟಿದ್ದರು. ಶುಭಾ ವೆಂಕಟೇಶನ್ ಕೂಡ ತಮಿಳುನಾಡಿನವರು. ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್‌ನ 400ಮೀ ಓಟ ಮತ್ತು ರಿಲೇಯಲ್ಲಿ ಮಂಗಳೂರು ವಿವಿಗೆ ಚಿನ್ನದ ಪದಕ ತಂದುಕೊಟ್ಟಿದ್ದರು.

ಪ್ರವೀಣ್ ಚಿತ್ರವೇಲ್

ಮಿಜೊ ಚಾಕೊ ಕುರಿಯನ್ ಜನಿಸಿದ್ದು ಮತ್ತು ಬೆಳೆದದ್ದು ಮಂಗಳೂರಿನಲ್ಲಿ. ತಂದೆ ಮತ್ತು ತಾಯಿ ಕೇರಳದವರು. 2022ರ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ 4x400 ಮೀಟರ್ಸ್ ರಿಲೇ ತಂಡದಲ್ಲಿದ್ದರು. 2016ರಲ್ಲಿ ಆಳ್ವಾಸ್ ಕಾಲೇಜಿನಲ್ಲಿ ಪದವಿ ಓದಿದ್ದ ಅವರು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದ 800ಮೀ ಮತ್ತು 400ಮೀ ಓಟದಲ್ಲಿ ಪದಕ ಗೆದ್ದಿದ್ದರು.

ಸಂತೋಷ್ ತಮಿಳರಸನ್

ತಮಿಳುನಾಡಿನವರಾದ ಪ್ರವೀಣ್ ಚಿತ್ರವೇಲ್ 2018ರ ಯೂತ್ ಒಲಿಂಪಿಕ್ಸ್, 2022ರ ಕಾಮನ್ವೆಲ್ತ್ ಗೇಮ್ಸ್, 2022ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್ ಕೂಟದ ಟ್ರಿಪಲ್ ಜಂಪ್‌ನಲ್ಲಿ ಚಿನ್ನದ ಪದಕ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.