ADVERTISEMENT

ಮಂಗಳೂರು | ವಿಮಾನ ಪ್ರಯಾಣಿಕನ ಬ್ಯಾಗ್‌ನಿಂದ ಹಣ ಕಳವು: ಸಮಗ್ರ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 6:40 IST
Last Updated 20 ಜೂನ್ 2024, 6:40 IST
ಜೆದ್ದಾಕ್ಕೆ ಪ್ರಯಾಣಿಸುವಾಗ ಹಣ ಕಳವಾದ ಬ್ಯಾಗ್‌ ಅನ್ನು ಬದ್ರುದ್ದೀನ್‌ ಕದಂಬಾರ್ ಅವರು ಸುದ್ದಿಗೋಷ್ಠಿಯಲ್ಲಿ ಬುಧವಾರ ಪ್ರದರ್ಶಿಸಿದರು
ಜೆದ್ದಾಕ್ಕೆ ಪ್ರಯಾಣಿಸುವಾಗ ಹಣ ಕಳವಾದ ಬ್ಯಾಗ್‌ ಅನ್ನು ಬದ್ರುದ್ದೀನ್‌ ಕದಂಬಾರ್ ಅವರು ಸುದ್ದಿಗೋಷ್ಠಿಯಲ್ಲಿ ಬುಧವಾರ ಪ್ರದರ್ಶಿಸಿದರು   

ಮಂಗಳೂರು: ಮಂಜೇಶ್ವರದ ಬದ್ರುದ್ದೀನ್ ಕದಂಬಾರ್ ಈಚೆಗೆ ಉಮ್ರಾ ಯಾತ್ರೆ ಸಲುವಾಗಿ ವಿಮಾನ ಯಾನ ಕೈಗೊಂಡಾಗ ಅವರ ಬ್ಯಾಗ್‌ನಲ್ಲಿದ್ದ ಸೌದಿ ಅರೇಬಿಯಾದ 26,432 ರಿಯಾಲ್ (ಭಾರತೀಯ ಮೌಲ್ಯ ಸುಮಾರು ₹ 6 ಲಕ್ಷ ) ನಗದು ಕಳವಾಗಿದೆ. ಈ ಬಗ್ಗೆ ದೂರು ನೀಡಿದ್ದರೂ ಆರೋಪಿಗಳ ಪತ್ತೆಗೆ ಕ್ರಮವಾಗಿಲ್ಲ ಎಂದು ತುಳುನಾಡ ರಕ್ಷಣಾ ವೇದಿಕೆ ಆರೋಪಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ ಬದ್ರುದ್ದೀನ್‌, ‘ನಾನು 25 ವರ್ಷ ಸೌದಿಯಲ್ಲಿ ಕೆಲಸ ಮಾಡಿದ್ದು, ಅಲ್ಲಿನ ಪ್ರದೇಶಗಳ ಪರಿಚಯವಿದೆ. ಅರೇಬಿಕ್ ಭಾಷೆಯೂ ತಿಳಿದಿದೆ. ಇಲ್ಲಿಂದ ಉಮ್ರಾ ಯಾತ್ರೆ ಕೈಗೊಂಡ 11 ಪ್ರಯಾಣಿಕರ ಜೊತೆ ನನ್ನನ್ನು ಮಾರ್ಗದರ್ಶಕನಾಗಿ ಅತ್ತಾವರದ ಅಜ್ಯಾದ್‌ ಟ್ರಾವೆಲ್ಸ್‌ ಮಾಲೀಕ ಇಕ್ಬಾಲ್‌ ಕಳುಹಿಸಿದ್ದರು’ ಎಂದು ತಿಳಿಸಿದರು.

‘ಒಟ್ಟು 11 ಮಂದಿಗೆ ಒಂದೇ ಪಿಎನ್‌ಆರ್‌ ಸಂಖ್ಯೆಯಲ್ಲಿ ಟಿಕೆಟ್ ಕಾಯ್ದಿರಿಸಲಾಗಿತ್ತು. ಏ.30ರಂದು ಇಂಡಿಗೊ ಸಂಸ್ಥೆಯ ವಿಮಾನದಲ್ಲಿ ನಾವು  ಇಲ್ಲಿಂದ ಮುಂಬೈಗೆ ತೆರಳಿ, ಅಲ್ಲಿಂದ ಜೆದ್ದಾಕ್ಕೆ ಪ್ರಯಾಣಿಸಿದ್ದೇವೆ. ಇವರ ಯಾತ್ರೆಯ ಖರ್ಚಿಗಾಗಿ  26,432 ರಿಯಾಲ್‌ಗಳನ್ನು ಒಂದು ಪುಟ್ಟ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದೆ. ಆ ಚೀಲವನ್ನು ಸ್ಕ್ಯಾನ್‌ ಮಾಡಿದ ಬಳಿಕ, ಅದರ ತೂಕ ಹೆಚ್ಚಿದೆ ಎಂಬ ಕಾರಣಕ್ಕೆ ಅದನ್ನು ದೊಡ್ಡ ಬ್ಯಾಗ್‌ನಲ್ಲೇ ಇಡುವಂತೆ ವಿಮಾನಯಾನ ಸೇವಾ ಸಂಸ್ಥೆಯ ಸಿಬ್ಬಂದಿ ಸೂಚಿಸಿದರು. ಹಣವಿದ್ದ ಸಣ್ಣ ಬ್ಯಾಗನ್ನು ಎರಡನೇ ಸಲ ಸ್ಕ್ಯಾನ್‌ ಮಾಡಿದಾಗ, ಸಂಶಯಗೊಂಡು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೆ. ಆದರೂ ಅವರು ಹಣವಿದ್ದ ಚೀಲವನ್ನು ದೊಡ್ಡ ಬ್ಯಾಗ್‌ನಲ್ಲಿ ಇಡುವಂತೆ ಬಲವಂತಪಡಿಸಿದರು’ ಎಂದು ಬದ್ರುದ್ದೀನ್‌ ಆರೋಪಿಸಿದರು.

ADVERTISEMENT

‘ಜೆದ್ದಾ ವಿಮಾನನಿಲ್ದಾಣದಿಂದ ಹೊರಬಂದು ನೋಡಿದಾಗ ಬ್ಯಾಗಿನಲ್ಲಿದ್ದ ಹಣ ಕಳವಾಗಿದ್ದು ಗೊತ್ತಾಯಿತು. ಯಾತ್ರೆ ಮುಗಿಸಿ ಮೇ 30ರಂದು ಊರಿಗೆ ಮರಳಿದ ಬಳಿಕ ಈ ಬಗ್ಗೆ ಬಜಪೆ ಠಾಣೆಯಲ್ಲಿ ದೂರು ನೀಡಿದ್ದೇವೆ. ಆದರೆ ಈ ವರೆಗೂ ಹಣ ವಶಪಡಿಸಿಕೊಂಡ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ವಿಮಾನ ಯಾನ ಸಂಸ್ಥೆಯ ಸಿಬ್ಬಂದಿ ಮೇಲೇಯೇ ನನಗೆ ಸಂಶಯವಿದೆ’ ಎಂದರು.

ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ‘ಅ ಇಂತಹ ಘಟನೆಗಳು ಬಜಪೆಯ ‘ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ಕ್ಕೆ ಕೆಟ್ಟ ಹೆಸರು ತರುತ್ತವೆ. ಆದ ಕಾರಣ, ತಪ್ಪಿತಸ್ಥರನ್ನು ಆದಷ್ಟು ಬೇಗ ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ವಿಮಾನನಿಲ್ದಾಣದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಈ  ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಮೂಲಕ ಕೇಂದ್ರ ವಿಮಾನಯಾನ ಸಚಿವರಿಗೂ ದೂರು ನೀಡಿದ್ದೇವೆ’ ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಟ್ರಾವೆಲ್‌ ಏಜೆಂಟ್‌ ಇಕ್ಬಾಲ್, ತುಳುನಾಡ ರಕ್ಷಣಾ ವೇದಿಕೆಯ ಪ್ರಶಾಂತ್ ಭಟ್ ಕಡಬ,  ಶೇಖ್‌ ಭಾವ, ಸುಕೇಶ್ ಉಚ್ಚಿಲ್ ಜಿ.ಕೆ, ಜಾಕೀರ್ ಇಕ್ಲಾಸ್ ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.