ಬಂಟ್ವಾಳ (ದಕ್ಷಿಣ ಕನ್ನಡ ಜಿಲ್ಲೆ): ಇಲ್ಲಿನ ಕೆದಿಲ ಹಾರ್ದಿಕ್ ಹರ್ಬಲ್ಸ್ ಸಂಸ್ಥೆಯು ಹಣ್ಣಡಿಕೆ ಸಿಪ್ಪೆ ರಸದಿಂದ ತಯಾರಿಸಿದ ‘ಸತ್ವಂ’ ಹರ್ಬಲ್ ಸ್ನಾನದ ಸಾಬೂನಿಗೆ ಕೇಂದ್ರ ಸರ್ಕಾರವು ಸೆ. 13ರಂದು ಪೇಟೆಂಟ್ ನೀಡಿದೆ.
ಈ ಕೋಕಾರೇಕ ಹರ್ಬಲ್ ಸ್ನಾನದ ಸಾಬೂನು ಮೂರು ವರ್ಷದಿಂದ ಮಾರುಕಟ್ಟೆಯಲ್ಲಿದೆ.
‘ಬಾಲ್ಯದಲ್ಲಿ ಬೆವರಿನಿಂದ ಉಂಟಾಗುವ ತುರಿಕೆಗೆ ಹಿರಿಯರು ಹಣ್ಣಡಿಕೆ ಸಿಪ್ಪೆ ರಸ ಸವರುವ ಮೂಲಕ ತುರಿಕೆ ಗುಣಪಡಿಸುತ್ತಿದ್ದರು. ಇದನ್ನೇ ಮುಂದಿಟ್ಟುಕೊಂಡು ಸಂಶೋಧನೆಗೆ ಒಳಪಡಿಸಿ ಸಾಬೂನು ತಯಾರಿಸಿದ್ದೇವೆ. ಇಲ್ಲಿನ ಸಂಶೋಧಕ ಬದನಾಜೆ ಶಂಕರ ಭಟ್, ಶ್ರೀಕುಮಾರ್ ಅವರು ಮಾರ್ಗದರ್ಶನ ನೀಡಿದ್ದಾರೆ ಎಂದು ಸಂಸ್ಥೆಯ ಸಿಇಒ ಮುರಳೀಧರ ಕೆ. ತಿಳಿಸಿದ್ದಾರೆ.
‘ಹಣ್ಣಡಿಕೆ ಸಿಪ್ಪೆ ರಸದೊಂದಿಗೆ ಕೊತ್ತಂಬರಿ, ಲಾವಂಚ, ಅಲೊವೆರಾ, ಸಾಗುವಾನಿ ಎಲೆ, ಅರಿಸಿನ, ತೆಂಗಿನ ಎಣ್ಣೆ ಸೇರಿಸಿ ಸಾಬೂನು ತಯಾರಿಸಲಾಗಿದೆ. 2021ರಲ್ಲಿ ಪೇಟೆಂಟ್ ಪಡೆಯುವ ಕಾರ್ಯ ಆರಂಭಿಸಿದ್ದು, ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರದ ಅನುಮೋದನೆ ಪಡೆದ ಬಳಿಕ ಭಾರತದ ಹಕ್ಕುಸ್ವಾಮ್ಯ ಕಾರ್ಯಾಲಯವು ಪೇಟೆಂಟ್ ನೀಡಿದೆ’ ಎಂದು ತಿಳಿಸಿದ್ದಾರೆ.
ಈಗಾಗಲೇ, ಅಡಿಕೆ ಚೊಗರಿನಿಂದ ತಯಾರಿಸಲಾದ ಬಣ್ಣವನ್ನು ಬಟ್ಟೆಗಳಿಗೆ ಬಳಸಲಾಗುತ್ತಿದೆ. ಅಡಿಕೆಯಿಂದ ಐಸ್‌ಕ್ರೀಂ, ಚಹಾ ಪುಡಿ, ತಂಪು ಪಾನೀಯ ಉತ್ಪಾದಿಸಿ ಅಡಿಕೆಯ ಮೌಲ್ಯವರ್ಧನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.