ಉಜಿರೆ: ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿರುವ ಪಟ್ಲ ಫೌಂಡೇಷನ್ ಕಾರ್ಯ ಶ್ಲಾಘನೀಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಉಜಿರೆಯಲ್ಲಿ ಪಟ್ಲ ಫೌಂಡೇಷನ್ ಆಶ್ರಯದಲ್ಲಿ ಶನಿವಾರ ರಾತ್ರಿ ನಡೆದ ಯಕ್ಷ ಸಂಭ್ರಮ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಭಾವನೆಯ ಆಧಾರದಲ್ಲಿ ಜೀವನ ನಿರ್ವಹಣೆ ಮಾಡುವ ಕಲಾವಿದರಿಗೆ ಅನಿರೀಕ್ಷಿತ ತೊಂದರೆಗಳಾದಾಗ ಸಹೃದಯಿ ಕಲಾಭಿಮಾನಿಗಳು ಸೂಕ್ತ ಸಹಕಾರ ನೀಡಿ ಪ್ರೋತ್ಸಾಹಿಸಬೇಕು ಎಂದು ಅವರು ಸಲಹೆ ನೀಡಿದರು.
ಯಕ್ಷಧ್ರುವ ಫೌಂಡೇಷನ್ ಕೇಂದ್ರ ಘಟಕದ ಸಂಚಾಲಕ ಪುರುಶೋತ್ತಮ ಭಂಡಾರಿ ಮಾತನಾಡಿ, 2015ರಲ್ಲಿ ಆರಂಭವಾದ ಯಕ್ಷಧ್ರುವ ಫೌಂಡೇಷನ್ ದೇಶ-ವಿದೇಶಗಳಲ್ಲಿ 38 ಘಟಕಗಳನ್ನು ಹೊಂದಿದ್ದು, 50 ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಿದೆ ಎಂದರು.
ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರನ್ನು ಗೌರವಿಸಲಾಯಿತು.
ಯಕ್ಷಗಾನ ಕಲಾವಿದ ವೇಣೂರು ಮನೋಜ್ ಕುಮಾರ್ ಅವರ ಮನೆ ನಿರ್ಮಾಣಕ್ಕೆ ₹2 ಲಕ್ಷ ನೆರವು ನೀಡಲಾಯಿತು. ಪಾವಂಜೆ ಮೇಳದ ಕಲಾವಿದರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು. ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಸಿಂಹ ನಾಯಕ್ ಮತ್ತು ಕೆ. ಹರೀಶ್ ಕುಮಾರ್, ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಇದ್ದರು.
ಮುರಳಿಕೃಷ್ಣ ಆಚಾರ್ ಸ್ವಾಗತಿಸಿದರು. ಪಟ್ಲ ಸತೀಶ್ ಶೆಟ್ಟಿ ವಂದಿಸಿದರು.
ಅದಾಲತ್
ಉಜಿರೆ: ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ ಡಿಸೆಂಬರ್ 2 ರಂದು ಪುತ್ತೂರು ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದೆ. ಹೆಬ್ರಿ, ಕಾರ್ಕಳ, ಬೆಳ್ತಂಗಡಿ, ಮೂಡುಬಿದಿರೆ, ಕಡಬ ಮತ್ತು ಸುಳ್ಯ ತಾಲ್ಲೂಕುಗಳ ವ್ಯಾಪ್ತಿಯ ಅಂಚೆ ಸೇವೆಗೆ ಸಂಬಂಧಿಸಿದ ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಶೀಲಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.