ADVERTISEMENT

‘ರಾಮಮಂದಿರವಾಯಿತು– ಇನ್ನು ರಾಮರಾಜ್ಯ ನಿರ್ಮಾಣ’

ಷಷ್ಠ್ಯಬ್ಧ– ಅಭಿವಂದನಾ ಕಾರ್ಯಕ್ರಮದಲ್ಲಿ ಪೇಜಾವರಶ್ರೀ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 6:00 IST
Last Updated 31 ಮಾರ್ಚ್ 2024, 6:00 IST

ಮಂಗಳೂರು: ಆಯೋಧ್ಯೆಯಲ್ಲಿ ಶ್ರೀ ರಾಮದೇವರಿಗೆ ಮಂದಿರ ನಿರ್ಮಾಣವಾಯಿತು.  ಮಂದಿರ ಕಟ್ಟುವಲ್ಲಿ ಎಲ್ಲರೂ ಕೈಜೋಡಿಸಿದ್ದೇವೆ. ಅದರಂತೆಯೇ ರಾಮರಾಜ್ಯ ನಿರ್ಮಾಣ ಮಾಡಲು ನಾವು– ನೀವೂ ಕೈಜೋಡಿಸಬೇಕಿದೆ’ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥಸ್ವಾಮೀಜಿ ಹೇಳಿದರು.

ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಇಲ್ಲಿ ಶನಿವಾರ ಏರ್ಪಡಿಸಿದ್ದ ತಮ್ಮ ‘ಷಷ್ಠ್ಯಬ್ಧ– ಅಭಿವಂದನಾ’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 60 ಸಾಧಕರಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.

‘ಪ್ರಜೆಗಳಲ್ಲಿ ಯಾರೊಬ್ಬರಿಗೆ ಕಷ್ಟವಿದ್ದರೂ ರಾಮ ದೇವರು ದುಃಖ ಪಡುತ್ತಿದ್ದರು.  ಮಂದಿರದಲ್ಲಿ ಕೂರಿಸಿ ಮಗಳಾರತಿ ಮಾಡಿದ ಮಾತ್ರಕ್ಕೆ ‌ರಾಮದೇವರು ಸಂತೃಪ್ತರಾಗುವುದಿಲ್ಲ. ರಾಮರಾಜ್ಯದ ಆಶಯ ಈಡೇರಿದರೆ ಮಾತ್ರ ಸಂತೃಪ್ತರಾಗುತ್ತಾರೆ. ರಾಮ ದೇವರಿಗೆ ಮನೆಯಾಯಿತು,  ನನಗೊಂದು ಮನೆ ಇಲ್ಲ ಎಂದು ಪ್ರಜೆ ದುಖಿಸಿದರೆ ರಾಮ ದೇವರು ಸಂತೋಷಪಡುವುದಿಲ್ಲ. ನಾವೆಲ್ಲರೂ ನಮ್ಮಿಂದಾದಷ್ಟು ಸೇವೆಯನ್ನು ಮಾಡಿ ಎಲ್ಲರಿಗೂ ಸೂರು ನಿರ್ಮಿಸಬೇಕು’ ಎಂದರು.  

ADVERTISEMENT

‘ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ದೇವರ ಪ್ರಾಣ ಪ್ರತಿಷ್ಠೆ ಹಾಗೂ ಮಂಡಲೋತ್ಸವ ನೆರವೇರಿಸುವ ಅವಕಾಶ ಒದಗಿದ್ದು ನನ್ನ ಗುರುಗಳಾದ ವಿಶ್ವೇಶತೀರ್ಥರ ಹಾಗೂ  ಉಡುಪಿಯ ಎಲ್ಲ ಗುರುಗಳ ಅನುಗ್ರಹದಿಂದ. ನಮ್ಮ ಸಂಸ್ಕೃತಿಯ ಪ್ರಕಾರ ರಾಮ ದೇವರಿಗೆ ಸೇವೆ ಸಮರ್ಪಿಸಿದ್ದೇವೆ. ಇಲ್ಲಿಂದ ಅಯೋಧ್ಯೆಗೆ ಬಂದ ಅನೇಕರು ಇಲ್ಲಿನ ಮಲ್ಲಿಗೆ ಹೂವನ್ನು ತಂದು ದೇವರ ಸೇವೆ ಮಾಡಿದ್ದಾರೆ. ಅದರ ಪುಣ್ಯ ಎಲ್ಲರಿಗೂ ಸಲ್ಲಲಿದೆ’ ಎಂದರು.

ಉಡುಪಿ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥರು, ‘ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯಲ್ಲಿ ಭಾಗಿಯಾಗುವ ಹಕ್ಕು ವಿಶ್ವೇಶತೀರ್ಥರಿಗೆ ಇತ್ತು.‌ ರಾಮಜನ್ಮ ಭೂಮಿಗಾಗಿ ಹೊರಾಡಿದ್ದ ಅವರು ಜೈಲಿಗೂ ಹೋಗಿದ್ದಾರೆ.‌ ಸಂತ ಶ್ರೇಷ್ಠರ ಸಾಲಿನಲ್ಲಿ ನಿಲ್ಲುವ ವಿಶ್ವೇಶತೀರ್ಥರ ಅನುಗ್ರಹದಿಂದ ಅವರ ಶಿಷ್ಯನಿಗೂ ರಾಮಮಂದಿರ ನಿರ್ಮಾಣ  ಟ್ರಸ್ಟ್‌ನಲ್ಲಿ ಸ್ಥಾನ ಸಿಕ್ಕಿದೆ’ ಎಂದರು.

‘ಶಿಷ್ಯನ ಒತ್ತಾಯದಿಂದಲೇ ವಿಶ್ವೇಶತೀರ್ಥರು ಐದನೇ ಪರ್ಯಾಯವನ್ನು ಹಾಗೂ ಶ್ರೀಕೃಷ್ಣನ ಪೂಜೆಯನ್ನು ನೆರವೇರಿಸಿದ್ದರು. ಕೃಷ್ಣ ಪೂಜೆ ಕೈಗೊಳ್ಳುವ ಅವಕಾಶವನ್ನು ತ್ಯಾಗ ಮಾಡಿದವರು ವಿಶ್ವಪ್ರಸನ್ನ ತೀರ್ಥರು. ಅವರ ಷಷ್ಠ್ಯಬ್ಧ ಎಲ್ಲೆಡೆ ಆಚರಿಸಬೇಕು’ ಎಂದರು.

ಪ್ರದೀಪ ಕುಮಾರ್ ಕಲ್ಕೂರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.