ADVERTISEMENT

ಗಾಯತ್ರಿ ಮಂತ್ರ ಜಪಿಸದವರು ಬ್ರಾಹ್ಮಣರಾಗಲು ಅರ್ಹರಲ್ಲ: ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 4:28 IST
Last Updated 29 ಅಕ್ಟೋಬರ್ 2024, 4:28 IST
ಚಿತ್ರಾಪುರದಲ್ಲಿ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞವು ಭಾನುವಾರ ನೆರವೇರಿತು
ಚಿತ್ರಾಪುರದಲ್ಲಿ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞವು ಭಾನುವಾರ ನೆರವೇರಿತು   

ಸುರತ್ಕಲ್: ‘ಗಾಯತ್ರಿ ಮಂತ್ರ ಜಪಿಸದವರು ಬ್ರಾಹ್ಮಣರು ಎನಿಸಿಕೊಳ್ಳಲು ಯಾವುದೇ ಅರ್ಹತೆಯನ್ನೂ ಹೊಂದಿರಲಾರರು. ಋಷಿಗಳಿಂದ,  ಹಿರಿಯರಿಂದ ಬಂದ ಈ ಅನುಷ್ಠಾನವನ್ನು ನಾವು ಪಾಲಿಸುವುದರ ಜೊತೆಗೆ,  ಮುಂದಿನ ಪೀಳಿಗೆಗೂ ಮುಂದುವರಿಸಬೇಕಿದೆ’ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಚಿತ್ರಾಪುರ ಮಠದ ಆಶ್ರಯದಲ್ಲಿ ಚಿತ್ರಾಪುರಲ್ಲಿ ನಡೆದ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞದ `ಧರ್ಮ ಸಭೆಯಲ್ಲಿ ಅವರು ಭಾನುವಾರ ಆಶೀರ್ವವಚನ ನೀಡಿದರು.

‘ರಾಷ್ಟ್ರ ಗೀತೆಯಂತೆ ಬ್ರಾಹ್ಮಣ ಸಮುದಾಯಕ್ಕೆ ಗಾಯತ್ರಿ ಮಂತ್ರವೇ ಎಲ್ಲರನ್ನೂ ಒಂದುಗೂಡಿಸುವ ಗೀತೆ.  ಎಲ್ಲರಿಗೂ ಒಳ್ಳೆಯ ಬುದ್ಧಿ, ಒಳ್ಳೆಯ ಚಿಂತನೆ  ಕೊಡು ಎನ್ನುವ ಗಾಯತ್ರಿ ಮಂತ್ರದ ಮೂಲಕ ಬ್ರಾಹ್ಮಣ ಸಮಾಜ  ಒಂದಾಗಬೇಕು’ ಎಂದರು.

ADVERTISEMENT

ಎಡನೀರು ಮಠದ  ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ, ‘ಮಕ್ಕಳಲ್ಲಿ ಸಂಸ್ಕಾರವನ್ನು ಬಿತ್ತಬೇಕು. ನಿತ್ಯವೂ 108 ಸಲ ಗಾಯತ್ರಿ ಮಂತ್ರ ಪಠಿಸಿ ಬ್ರಾಹ್ಮಣತ್ವದ ಶಕ್ತಿ ವೃದ್ಧಿಸಿಕೊಳ್ಳಬೇಕು’ ಎಂದರು.

ಕಟೀಲು ಕ್ಷೇತ್ರದ  ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಹಾಗೂ ಸುರೇಶ್ ರಾವ್ ಕಟೀಲು ಅವರನ್ನು ಸನ್ಮಾನಿಸಲಾಯಿತು.

ಚಿತ್ರಾಪುರ ಮಠದ ವಿದ್ಯೇಂದ್ರ ತೀರ್ಥ ಸ್ವಾಮೀಜಿ,  ಡಾ. ಬಿ.ಎಸ್ ರಾಘವೇಂದ್ರ ಭಟ್,  ಸೂರ್ಯನಾರಾಯಣ ಭಟ್ ಕಶೆಕೋಡಿ, ಕಟೀಲು ಹರಿನಾರಾಯಣ ದಾಸ ಆಸ್ರಣ್ಣ, ಸುರೇಶ್ ರಾವ್ ಚಿತ್ರಾಪುರ, ಕೃಷ್ಣ ಭಟ್ ಕದ್ರಿ, ಎಂ.ಟಿ ಭಟ್, ಸುಬ್ರಹ್ಮಣ್ಯ ಕೋರಿಯಾರ್ ಭಾಗವಹಿಸಿದ್ದರು.

ಗಾಯತ್ರಿ ಸಂಗಮ ಅಧ್ಯಕ್ಷ ಮಹೇಶ್ ಕಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಡಿ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ವಂದಿಸಿದರು.

‘ಮಾತನಾಡುವ ಹಕ್ಕು ರಾಜಕಾರಣಿಗಳಿಗೆ ಸೀಮಿತವೇ? ’

ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕು ರಾಜಕಾರಣಿಗಳಿಗೆ ಸೀಮಿತವೇ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನಿಸಿದರು. ‘ಲೋಕದ ಅನಿಷ್ಟಗಳಿಗೆ ಬ್ರಾಹ್ಮಣ ಸಮಾಜ ಕಾರಣ ಎಂದು ದೂಷಿಸುವ ಪ್ರವೃತ್ತಿ ಬೆಳೆಯುತ್ತಿದೆ. ಜಾತ್ಯತೀತ ಎನ್ನುತ್ತಲೇ ಪ್ರತಿಯೊಂದಕ್ಕೂ ಜಾತಿಯನ್ನು ಮುಂದಿಟ್ಟು ಜಾತಿ ಲೆಕ್ಕಾಚಾರ ಮಾಡಲೂ ಮುಂದಾಗಿದ್ದಾರೆ. ಈ ಬಗ್ಗೆ ಪ್ರಜಾಪ್ರಭುತ್ವದ ನೆಲೆಯಲ್ಲಿ ಪ್ರಶ್ನಿಸಿದರೆ ನಿಂದಿಸಲಾಗುತ್ತದೆ’ ಎಂದರು. ಅಶೋಕ ಹಾರನಹಳ್ಳಿ ‘ಎಲ್ಲಾ ಸಮುದಾಯಗಳಲ್ಲಿರುವ  ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವವರಿದ್ದಾರೆ. ಅವರ ಕುರಿತು  ಅಧ್ಯಯನ ನಡೆಸಿ ಸೌಲಭ್ಯ ಒದಗಿಸಬೇಕು. ಜಾತಿ ಜನಗಣತಿಯಿಂದ ಯಾವ  ಪ್ರಯೋಜನವೂ ಇಲ್ಲ. ಸನಾತನ ಧರ್ಮವನ್ನು ಒಡೆದು ಒಟು ಪಡೆಯುವ ಲೆಕ್ಕಾಚಾರ ಇದರ ಹಿಂದಿದೆ’ ಎಂದರು. 

ಪೇಜಾವರಶ್ರೀ ಕುರಿತ ಹೇಳಿಕೆ– ಖಂಡನಾ ನಿರ್ಣಯ ಮಂಡನೆ

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರ ಕುರಿತು ಕಾಂಗ್ರೆಸ್ ಮುಖಂಡರೊಬ್ಬರು ನೀಡಿರುವ ಹೇಳಿಕೆಯನ್ನು ಖಂಡಿಸಿ ಧರ್ಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.  ನಿರ್ಣಯ ಮಂಡಿಸಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ ಹಾರನಹಳ್ಳಿ ‘ಈ ಬಗ್ಗೆ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.