ADVERTISEMENT

ಸ್ಮಾರ್ಟ್ ಸಿಟಿ: ಕಾಮಗಾರಿ ಬಗ್ಗೆ ಆಕ್ರೋಶ

ಮೇಯರ್ ಫೋನ್‌ ಇನ್ ಕಾರ್ಯಕ್ರಮ: ಬೀದಿಬದಿ ವ್ಯಾಪಾರ, ಫ್ಲೆಕ್ಸ್ ಬಗ್ಗೆಯೂ ನಾಗರಿಕರ ಬೇಸರ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 6:18 IST
Last Updated 29 ಜೂನ್ 2024, 6:18 IST
ನಾಗರಿಕರ ಫೋನ್‌ ಕರೆಗೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉತ್ತರಿಸಿದರು -ಪ್ರಜಾವಾಣಿ ಚಿತ್ರ
ನಾಗರಿಕರ ಫೋನ್‌ ಕರೆಗೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉತ್ತರಿಸಿದರು -ಪ್ರಜಾವಾಣಿ ಚಿತ್ರ   

ಮಂಗಳೂರು: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಕುರಿತು ಮೇಯರ್ ಬಳಿ ನಾಗರಿಕರು ಅಸಮಾಧಾನ ತೋಡಿಕೊಂಡರು. ನೇತ್ರಾವತಿ ರಿವರ್ ಫ್ರಂಟ್ ಯೋಜನೆಯಲ್ಲಿ ಭ್ರಷ್ಟಾಚಾರ ಎದ್ದು ಕಾಣುತ್ತಿದೆ ಎಂದೂ ಪಾರ್ಕಿಂಗ್‌ಗೆ ಸೌಲಭ್ಯ ಕಲ್ಪಿಸದೇ ಇದ್ದರೆ ಭವಿಷ್ಯದಲ್ಲಿ ತೊಂದರೆ ಆದೀತೆಂದೂ ಯೋಜನೆಯಿಂದ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ತೊಂದರೆ ಆಗುತ್ತಿದೆ ಎಂದೂ ದೂರಿದರು.

ಮಹಾನಗರಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಫುಟ್‌ಪಾತ್‌ಗಳಲ್ಲಿ ಆಹಾರ ಪದಾರ್ಥಗಳ ಮಾರಾಟದ ಬಗ್ಗೆ ಮತ್ತು ಅನಧಿಕೃತ ಫಲಕಗಳ ಬಗ್ಗೆಯೂ ಜನರು ದೂರಿದರು.

‘₹70 ಕೋಟಿ ವೆಚ್ಚದ ನೇತ್ರಾವತಿ ರಿವರ್ ಫ್ರಂಟ್ ಯೋಜನೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಪದೇಪದೇ ಕೇಳಿಬರುತ್ತಿದ್ದರೂ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳದೇ ಇರುವುದು ಬೇಸರದ ವಿಷಯ. ನಗರದಲ್ಲಿ ಈಗ ಸ್ಮಾರ್ಟ್ ಸಿಟಿಯ ಅಬ್ಬರದ ನಡುವೆ  ಜನಪ್ರತಿನಿಧಿಗಳು ದುರ್ಬಲರಾಗಿದ್ದಾರೆ‌. ಇದು ಒಳ್ಳೆಯ ಲಕ್ಷಣ ಅಲ್ಲ’ ಎಂದು ಜಯಪ್ರಕಾಶ್ ಎಕ್ಕೂರು ಕೋಪದಿಂದ ಹೇಳಿದರು.

ADVERTISEMENT

‘ಈ ಯೋಜನೆ ಹಳ್ಳ ಹಿಡಿದಿದೆ. ಹಾಗಿದ್ದರೆ ನಮ್ಮ ಎಂಜಿನಿಯರ್‌ಗಳು ಅಷ್ಟೊಂದು ಕಳಪೆಯೇ’ ಎಂದು ಅವರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಮೇಯರ್ ಸುಧೀರ್‌ ಶೆಟ್ಟಿ ಕಣ್ಣೂರು, ‘ಕಾಮಗಾರಿಗೆ ಡಿಪಿಆರ್ ಆಗಿ ಅನುಮೋದನೆ ನೀಡಲಾಗಿದೆ.‌ ಕಳಪೆ ಕಾಮಗಾರಿ ಬಗ್ಗೆ ಮಂಡಳಿ ಸಭೆಯಲ್ಲಿ ಪ್ರಸ್ತಾಪ ಆಗಿದೆ. ಈ ವಿಷಯ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವರೆಗೂ ಹೋಗಿದ್ದು  ಸದಸ್ಯ ಕಾಮಗಾರಿ ನಿಂತಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರರು ಕಳಪೆ ಕಾಮಗಾರಿಗೆ ಹೊಣೆ ಆಗಿದ್ದು. ಕಂಪನಿಯ ಚೇರ್ಮನ್‌ ಮೂಲಕ ಕ್ರಮ ಆಗಬೇಕು’ ಎಂದರು.

‘ಸ್ಮಾರ್ಟ್ ಸಿಟಿ ಯೋಜನೆಯಲ್ಲಿ  ಪಾರ್ಕಿಂಗ್‌ನದೇ ದೊಡ್ಡ ಸಮಸ್ಯೆ. ಪೇ ಆ್ಯಂಡ್ ಪಾರ್ಕ್ ಮಾಡುವುದೊಂದೇ ಇದಕ್ಕೆ ಪರಿಹಾರ. ಇಲ್ಲವಾದರೆ ನಮ್ಮ ಮಳಿಗೆಗಳ ಮುಂದೆ ನಮ್ಮ ವಾಹನಗಳನ್ನು ನಿಲ್ಲಿಸುವುದಕ್ಕೂ ಜಾಗ ಸಿಗುವುದಿಲ್ಲ’ ಎಂದು ಕಿರಣ್ ಹೇಳಿದರು.

ಇಗ್ನೇಶಿಯಸ್ ಕರೆ ಮಾಡಿ ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ವಾಣಿಜ್ಯ ಮಳಿಗೆಗೆ ತೊಂದರೆ ಆಗುತ್ತಿದೆ ಎಂದರು. ಕಚೇರಿಗೆ ಬಂದರೆ  ಅಧಿಕಾರಿಗಳ ಸಮಕ್ಷಮದಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಮೇಯರ್ ಭರವಸೆ ನೀಡಿದರು.

ಫುಟ್‌ಪಾತ್‌ನಲ್ಲಿ ಆಹಾರ ಪದಾರ್ಥ ಮಾರುವುದರ ಬಗ್ಗೆ ದೂರಿದ ಕಂಕನಾಡಿಯ ಜೋಸೆಫ್ ಡಿಸೋಜ ಅಂಗಡಿಗಳನ್ನು ಹಾಕಿದವರು ತ್ಯಾಜ್ಯವನ್ನು ಅಲ್ಲೇ ಎಸೆಯುತ್ತಾರೆ, ಆಹಾರ ಸೇವಿಸುವವರು ಕೂಡ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಹಿಂದೆಯೂ ಅನೇಕ ಬಾರಿ ಈ ಕುರಿತು ದೂರಿದ್ದು ಅಧಿಕಾರಿಗಳು ಇಷ್ಟೊಂದು ನಿರ್ಲಕ್ಷ್ಯ ವಹಿಸಿದರೆ ಹೇಗೆ ಎಂದು ಪ್ರಶ್ನಿಸಿದರು. ಅನಧಿಕೃತ ಫಲಕಗಳ ಬಗ್ಗೆಯೂ ಅವರು ದೂರಿದರು. ಜ್ಯೋತಿ ವೃತ್ತದಿಂದ ಫಲ್ನೀರ್ ಕಡೆಗೆ ಹೋಗುವ ದಾರಿಯಲ್ಲಿ ಬೆಳಿಗ್ಗೆ ಕ್ಯಾಂಟೀನ್‌ ತೆರೆಯುತ್ತಿದ್ದು ಅಲ್ಲಿ ಓಡಾಡಲು ಕಷ್ಟವಾಗುತ್ತಿದೆ ಎಂದು ಬಲ್ಮಠದ ಕರುಣಾಕರ ಶೆಟ್ಟಿ ಹೇಳಿದರು. ಕೆಪಿಟಿಯಿಂದ ಯೆಯ್ಯಾಡಿ ವರೆಗೆ ಫುಟ್‌ಪಾತ್‌ ಆಕ್ರಮಣ ಆಗಿದೆ ಎಂದು ಶಾಂತಿ ದೂರಿದರು. ಬೀದಿಬದಿಯ ಅನಧಿಕೃತ ಅಂಗಡಿಗಳನ್ನು ತೆಗೆಲು ಆರೋಗ್ಯಾಧಿಕಾರಿಗೆ ಆದೇಶ ನೀಡಲಾಗಿದೆ ಎಂದು ಮೇಯರ್ ತಿಳಿಸಿದರು.

ಮಳೆಯಿಂದ ತಡೆಗೋಡೆ ಬಿದ್ದಿರುವುದರ ಬಗ್ಗೆ ಅನೇಕ ದೂರುಗಳು ಬಂದವು. ಸಿಟಿ ಆಸ್ಪತ್ರೆ ಬಳಿ ರಸ್ತೆಬದಿಯಲ್ಲಿ ಮೂತ್ರ ವಿಸರ್ಜನೆ ಬಗ್ಗೆ ಕೃಷ್ಣಪ್ಪ, ಸುರತ್ಕಲ್ ಸಮೀಪದ ಹೊನ್ನೆಕಟ್ಟೆಯಲ್ಲಿ ಬಸ್ ತಂಗುದಾಣ ಇಲ್ಲದ್ದರ ಬಗ್ಗೆ ರಮೇಶ್ ದೂರಿದರು.

ನಾರಾಯಣಗುರು ಜಯಂತಿಗೆ ಪ್ರೋತ್ಸಾಹ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾರಾಯಣ ಗುರು ಜಯಂತಿ ಆಚರಿಸುವ ಗುರುಮಂದಿರಗಳಿಗೆ ತಲಾ ₹ 15 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮ ಆಯೋಜಿಸಿದ ನಂತರ ಬಿಲ್ ತಂದುಕೊಟ್ಟು ಹಣ ಪಡೆದುಕೊಳ್ಳಬಹುದು ಎಂದರು. ಪಾಲಿಕೆ ವ್ಯಾಪ್ತಿಯ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಉತ್ತಮ ಅಂಕ ಗಳಿಸಿದವರಿಗೆ ಆರ್ಥಿಕ ಕೊಡುಗೆ ನೀಡಲಾಗುವುದು. ಇದಕ್ಕಾಗಿ ₹ 5 ಲಕ್ಷ ಮೊತ್ತ ತೆಗೆದಿರಿಸಲಾಗಿದ್ದು ಶೇಕಡ 95ಕ್ಕಿಂತ ಅಧಿಕ ಅಂಕ ಪಡೆದವರಿಗೆ ಸಮಾನವಾಗಿ ಹಂಚಲಾಗುವುದು. ಜುಲೈ ಕೊನೆಯ ವರೆಗೆ ಅರ್ಜಿ ಸಲ್ಲಿಸಬಹುದು ಎಂದರು. ಸಾಲುಮರದ ತಿಮ್ಮಕ್ಕ ಅವರ ಜನ್ಮದಿನವಾದ ಜುಲೈ 8ರಂದು ಪುರಭವನದಲ್ಲಿ ಆಯೋಜಿಸುವ ಕಾರ್ಯಕ್ರಮದಲ್ಲಿ 10 ಸಾವಿರ ಸಸಿಗಳನ್ನು ವಿತರಿಸಲಾಗುವುದು. ಬಡಾವಣೆಗಳಲ್ಲಿ ಓವರ್ ಹೆಡ್ ಟ್ಯಾಂಕ್‌ಗಳ ಕೆಳಭಾಗದ ಖಾಲಿ ಜಾಗದಲ್ಲಿ ಸಸಿ ನೆಟ್ಟು ಡ್ರಿಪ್ ಇರಿಗೇಷನ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು. ‘ಫಾಸ್ಟ್ ಫುಡ್ ಅಂಗಡಿಗಳ ಬಗ್ಗೆ ದೂರುಗಳು ಕೇಳಿಬರುತ್ತಿದ್ದು ಜನರಿಗೆ ತೊಂದರೆ ಆಗುವಲ್ಲಿ ಇವುಗಳನ್ನು ತೆರವುಗೊಳಿಸಲಾಗುವುದು. ಬೀದಿಬದಿ ವ್ಯಾಪಾರದ ಬಗ್ಗೆ ಮಾಹಿತಿ ಕಲೆ ಹಾಕಲು ಆರೋಗ್ಯಾಧಿಕಾರಿಗೆ ಸೂಚಿಸಲಾಗಿದೆ’ ಎಂದ ಮೇಯರ್‌ ‘ಫ್ಲೆಕ್ಸ್ ತೆರವಿಗೆ ಧಾರ್ಮಿಕ ಮತ್ತು ರಾಜಕೀಯ ವಿಷಯ ಕೆಲವೊಮ್ಮೆ ಅಡ್ಡಿಯಾಗುತ್ತದೆ. ಸರ್ಕಾರಿ ಜಾಗದಲ್ಲಿ ಹೋರ್ಡಿಂಗ್ ಅಳವಡಿಸಲು ಟೆಂಡರ್‌ ಕರೆಯುವುದರ ಬಗ್ಗೆ ಚಿಂತನೆ ಇದ್ದು ಸರ್ವೆ ಮಾಡಲು ಸೂಚಿಸಲಾಗಿದೆ’ ಎಂದರು.

ಡೆಂಗಿ ತಡೆಗೆ ಕ್ರಮ

ನಗರದಲ್ಲಿ ಡೆಂಗಿ ತಡೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ವಾರ್ಡಿನಲ್ಲೂ ವಿಶೇಷ ಕಾಳಜಿ ವಹಿಸುವ ತಂಡ ಇದ್ದು ನೀರು ಕಟ್ಟಿನಿಂತಿರುವುದು ಕಂಡುಬಂದಲ್ಲಿ ತೆಗೆಯುತ್ತಿದ್ದಾರೆ. ಡೆಂಗಿ ಕಂಡುಬಂದರೆ ಆ ವಠಾರದಲ್ಲಿ ರಕ್ತ ಪರೀಕ್ಷೆ ಮತ್ತು ಫಾಗಿಂಗ್‌ಗೆ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ನಿರೀಕ್ಷಕರು ಮತ್ತು ಸಿಬ್ಬಂದಿ ಜೊತೆ ಒಬ್ಬರು ಸೂಪರ್‌ವೈಸರ್ ಜಾಗೃತರಾಗಿರುವಂತೆ ಸೂಚಿಸಲಾಗಿದೆ ಎಂದು ಮೇಯರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.