ಉಳ್ಳಾಲ: ‘ಕಡಲ್ಕೊರೆತ ತಡೆಗೆ ಮುಂದಿನ ವರ್ಷ ಶಾಶ್ವತ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಹಾಗೂ ಅಧಿಕಾರಿಗಳ ಜತೆಗೆ ಭಾನುವಾರ ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಉಚ್ಚಿಲ ಬಟ್ಟಪ್ಪಾಡಿಯಲ್ಲಿರುವ ಅತಿಥಿ ಗೃಹ ಶೇ 25ರಷ್ಟು ಭಾಗ ಸಮುದ್ರ ಪಾಲಾಯಿತು. ಸಮುದ್ರ ಅಂಚಿನಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ತೆಂಗಿನಮರಗಳು ಸಮುದ್ರ ಪಾಲಾಗಿದೆ.
ಜಿಲ್ಲಾಧಿಕಾರಿ ರವಿಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ಜಿ.ಪಂ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಸಹಾಯಕ ಆಯುಕ್ತ ರಾಜು, ಉಳ್ಳಾಲ ತಾಲೂಕು ತಹಶೀಲ್ದಾರ್ ಪ್ರಭಾಕರ್ ಖಜೂರೆ, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಇದ್ದರು.
ಪರಿಹಾರ ಈವರೆಗೆ ಸಿಕ್ಕಿಲ್ಲ
ಕಳೆದ ವರ್ಷ ಮನೆ ಕಡಲಿನ ಅಬ್ಬರಕ್ಕೆ ಭಾಗಶ: ಹೋಗಿದೆ. ಸೋಮೇಶ್ವರದ ಅಧಿಕಾರಿಗಳು ನೋಟಿಸ್ ನೀಡಿ ಬಾಡಿಗೆ ಮನೆಗೆ ಕಳುಹಿಸಿದ್ದಾರೆ. ಪರಿಹಾರ ₹90 ಸಾವಿರ ನೀಡುವುದಾಗಿ ಆಶ್ವಾಸನೆ ನೀಡಿದ್ದರೂ ಈವರೆಗೆ ಸಿಕ್ಕಿಲ್ಲ. ಬಾಡಿಗೆ ಹಣವನ್ನು ಕೈಯಿಂದಲೇ ನೀಡುತ್ತಾ ಬಂದಿರುತ್ತೇನೆ. ಮುಂದಿನ ದಿನಗಳಲ್ಲಾದರೂ ಶಾಶ್ವತ ಪರಿಹಾರವನ್ನು ನೀಡಬೇಕು ಎಂದು ಬೆಟ್ಟಂಪಾಡಿ ಮನೆ ಕಳೆದುಕೊಂಡ ರಾಜೀವಿ ಉಸ್ತುವಾರಿ ಸಚಿವ ರಲ್ಲಿ ಮನವಿ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.