ADVERTISEMENT

ಪೆಟ್ರೋಲ್‌, ಡೀಸೆಲ್ ದರ ಹೆಚ್ಚಳ ಜಾರಿ; ಗ್ರಾಹಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 4:43 IST
Last Updated 16 ಜೂನ್ 2024, 4:43 IST

ಬೆಂಗಳೂರು: ರಾಜ್ಯ ಸರ್ಕಾರ, ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಹೆಚ್ಚಳ ಮಾಡಿ ಶನಿವಾರ ಆದೇಶ ಹೊರಡಿಸಿದ ಬೆನ್ನಲ್ಲೇ ನಗರದ ಕೆಲ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳವಾಗಿದೆ.

ನಗರದ ಪೆಟ್ರೋಲ್ ಬಂಕ್‌ ಒಂದರಲ್ಲಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಪ್ರತಿ ಲೀಟರ್‌ ಡೀಸೆಲ್‌ ₹ 88.15, ಪೆಟ್ರೋಲ್‌ ₹ 102.03, ಎಕ್ಟ್ರಾ ಪ್ರೀಮಿಯಂ ಪೆಟ್ರೋಲ್‌ ₹ 160, ಎಕ್ಟ್ರಾ ಗ್ರೀನ್‌ ಡೀಸೆಲ್‌ ₹ 91.76 ದರ  ಇತ್ತು. ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ದರ ಹೆಚ್ಚಳ ಜಾರಿ ಆಗಿರಲಿಲ್ಲ.

ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕುವ ನಿರ್ಧಾರ ಕೈಗೊಂಡಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ನಾನು ಶನಿವಾರ ಬೆಳಿಗ್ಗೆ ಬೈಕಿಗೆ ಪೆಟ್ರೋಲ್‌ ಹಾಕಿಸಿದಾಗ ದರ ಲೀಟರ್‌ಗೆ ₹ 100 ಇತ್ತು. ಸಂಜೆ ಕಾರಿಗೆ ಪೆಟ್ರೋಲ್‌ ಹಾಕಿಸಿದಾಗ ದರ ₹ 102 ಆಗಿದೆ. ಮೊದಲೇ  ತರಕಾರಿ ಹಾಗೂ ಇತರ ದಿನಬಳಕೆ ಸಾಮಗ್ರಿಗಳ ದರ ಏರಿಕೆಯಿಂದ ತತ್ತರಿಸಿದ್ದೆವು. ಚುನಾವಣೆ ಮುಗಿದ ಬೆನ್ನಲ್ಲೇ ಸರ್ಕಾರಿ ಜನರ ಜೇಬಿಗೆ ಕತ್ತರಿ ಹಾಕಬಾರದಿತ್ತು’ ಎಂದು ಪಂಪ್‌ವೆಲ್‌ನ ಹರೀಶ್‌ ತಿಳಿಸಿದರು.

‘ದರ ಏರಿಕೆ ಮಾಮೂಲಿ ಆಗಿ ಬಿಟ್ಟಿದೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರು ಪೆಟ್ರೋಲ್‌ ಮತ್ತು ಡೀಸೆಲ್‌ ದರ ದುಬಾರಿ ಆಗಿರುವ ಬಗ್ಗೆ ಭಾಷಣ ಮಾಡಿದ್ದರು. ಬಡವರು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಹೇಳಿದ್ದರು. ಈಗ ಪೆಟ್ರೋಲ್‌ ಮತ್ತು ಡೀಸೆಲ್‌  ಮೇಲಿನ ತೆರಿಗೆ ಹೆಚ್ಚಿಸಿ, ಜನರ ಕಿಸೆಯಿಂದ ಕಿತ್ತುಕೊಂಡ ಹಣವನ್ನು ಜನರಿಗೆ ಮರಳಿಸುವುದರಲ್ಲಿ ಏನರ್ಥವಿದೆ’ ಎಂದು ಲೋಕೇಶ್‌ ಪ್ರಶ್ನಿಸಿದರು. 

ಡಿವೈಎಫ್ಐ ಖಂಡನೆ: ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ನ  (ಡಿವೈಎಫ್ಐ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಕೆ ಇಮ್ತಿಯಾಜ್ ಹಾಗೂ ಕಾರ್ಯದರ್ಶಿ ಸಂತೋಷ್ ಬಜಾಲ್ ಖಂಡಿಸಿದ್ದಾರೆ. ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.