ಪುತ್ತೂರು: ‘ಏಕಬಳಕೆ ಪ್ಲಾಸ್ಟಿಕ್ ನಿಷೇಧ ಕಾನೂನನ್ನು ಕಟ್ಟುನಿಟ್ಟಿನ ಜಾರಿಗೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಮುಂದಾಗಿವೆ. ಜುಲೈ 1ರಿಂದಲೇ ಅದರ ಅನುಷ್ಠಾನಕ್ಕೆ ಮಾರ್ಗಸೂಚಿ ಬಿಡುಗಡೆಯಾಗಿದೆ. ಈ ಕುರಿತ ಜಾಗೃತಿ ಕಾರ್ಯ ಹಾಗೂ ಪಾಲನೆಯಲ್ಲಿ ಎಲ್ಲ ವಾರ್ಡ್‌ಗಳ ಸದಸ್ಯರು ಸಹಕಾರ ನೀಡಬೇಕು’ ಎಂದು ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮನವಿ ಮಾಡಿದರು.
ಶುಕ್ರವಾರ ನಡೆದ ನಗರಸಭಾ ಸಾಮಾನ್ಯಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘2016ರಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಆದೇಶ ಬಂದಿತ್ತು. ಆಗ ಮನೆಮನೆಗಳಿಗೆ ಮಾಹಿತಿ ನೀಡಲಾಗಿದೆ. ಆ ಸಂದರ್ಭದಲ್ಲಿ ವರ್ತಕರು ಸಮಯಾವಕಾಶ ಕೇಳಿದ್ದರು. ಇದೀಗ ಸರ್ಕಾರವು ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚನೆ ನೀಡಿದೆ. ಈಗಾಗಲೇ ನಗರಸಭೆಯಿಂದ ಹಲವು ರೀತಿಯಲ್ಲಿ ಜಾಗೃತಿ ಮೂಡಿಸುವ, ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ. ಮುಂದಕ್ಕೆ ದಂಡ ರೂಪದ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
50 ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಹಾಳೆ ಅಥವಾ ಅದೇ ತರದ ವಸ್ತು, ಬಹುಪದರ ಪ್ಲಾಸ್ಟಿಕ್‌ನಿಂದ ಮಾಡಿದ ಪ್ಯಾಕೇಜಿಂಗ್ ಮತ್ತು ಕವರ್, ಸುತ್ತುವಿಕೆಗೆ ಬಳಸುವ ಹಾಳೆಗಳ ಸರಕುಗಳ ತಯಾರಿಸುವವರಿಂದ ಆರಂಭದಲ್ಲಿ ಉತ್ಪನ್ನಗಳ ವಶಪಡಿಸಿಕೊಳ್ಳುವಿಕೆ, ನಂತರ ಘಟಕದ ಮುಚ್ಚುವಿಕೆ, ಪರವಾನಗಿ ರದ್ದು ಮಾಡಲಾಗುವುದು. ಮುಂದುವರಿದು ಪ್ರತಿ ಟನ್ ಪ್ಲಾಸ್ಟಿಕ್ ಬಳಸಲಾದ ತಂಬಾಕು ಉತ್ಪನ್ನಗಳ ಪ್ಯಾಕೇಜಿಂಗ್ ಮೊದಲ ಬಾರಿಗೆ ಉಲ್ಲಂಘನೆಗೆ ₹ 5 ಸಾವಿರ, 2ನೇ ಬಾರಿಗೆ ₹10ಸಾವಿರ, 3ನೇ ಬಾರಿಗೆ ₹20 ಸಾವಿರ, ಅನಂತರದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ಲಾಸ್ಟಿಕ್ ಕೊಂಡೊಯ್ಯುವ ಸಾರ್ವಜನಿಕರಿಗೂ ದಂಡ ವಿಧಿಸುವಂತೆ ವರ್ತಕರು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಬಸ್ ನಿಲ್ದಾಣ, ಮಾರುಕಟ್ಟೆಗಳಲ್ಲಿ ಹೆಚ್ಚಿನ ಜಾಗೃತಿ ಮಾಡಲಾಗುವುದು. ಮುಂದಿನ ಪೀಳಿಗೆಗೂ ಒಳ್ಳೆಯ ಪರಿಸರ ಉಳಿಸುವ ಜವಾಬ್ದಾರಿ ಎಲ್ಲರದ್ದೂ ಆಗಿರುವುದರಿಂದ ಈ ಪ್ರಕ್ರಿಯೆಯನ್ನು ಸಂಘಟಿತ ಪ್ರಯತ್ನದ ಮೂಲಕ ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು.
ಬಯೋ ಸಿಎನ್‌ಜಿ ಘಟಕ ನಿರ್ಮಾಣ: ಬನ್ನೂರಿನ ನೆಕ್ಕಿಲಿನಲ್ಲಿರುವ ಘನತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ ಸ್ಥಳದಲ್ಲಿ ರೋಟರಿ ಈಸ್ಟ್ ಸಹಯೋಗದ ಸ್ವಚ್ಛ ಭಾರತ ಟ್ರಸ್ಟ್ ವತಿಯಿಂದ ಬಯೋ - ಸಿಎನ್‌ಜಿ ಘಟಕ ಸ್ಥಾಪನೆ ಕಾಮಗಾರಿ ನಡೆಯುತ್ತಿದ್ದು, ಮೂರು ತಿಂಗಳೊಳಗೆ ಲೋಕಾರ್ಪಣೆಗೊಳ್ಳಲಿದೆ. ರೋಟರಿ ಸಂಸ್ಥೆಯವರೇ ಸುಮಾರು ₹ 4 ಕೋಟಿ ಹೂಡಿಕೆ ಮಾಡಿ ನಿರ್ಮಿಸಲಾಗುತ್ತಿರುವ ಘಟಕ ರಾಜ್ಯದಲ್ಲೇ ಮಾದರಿಯೆನಿಸಲಿದೆ ಎಂದು ಜೀವಂದರ್ ಜೈನ್ ತಿಳಿಸಿದರು.
ಮಳೆಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ನಗರಸಭೆಯಿಂದ ರಚಿಸಲಾದ ತಂಡಗಳ ಚಟುವಟಿಕೆ ಕುರಿತು ಮೆಚ್ಚುಗೆ ವ್ಯಕ್ತವಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಉಪಾಧ್ಯಕ್ಷೆ ವಿದ್ಯಾ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆ ಇದ್ದರು. ನಗರಸಭಾ ಅಧಿಕಾರಿ ರವೀಂದ್ರ ಕಲಾಪ ನಿರ್ವಹಿಸಿದರು.
‘ಇಂಟರ್ನ್‌ಷಿಪ್ ಆಧಾರದಲ್ಲಿ ನೇಮಕ’
ನಗರ ಸ್ಥಳೀಯಾಡಳಿತಗಳಲ್ಲಿ ಮಾನವ ಸಂಪನ್ಮೂಲ ಕಡಿಮೆ ಆಗಿರುವುದರಿಂದ ಪಿಯುಸಿ ಅಥವಾ ಪದವಿ ಪೂರೈಸಿದವರನ್ನು ಇಂಟರ್ನ್‌ಷಿಪ್ ಆಧಾರದಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಲು ಸರ್ಕಾರ ಆದೇಶ ನೀಡಿದೆ. ನಗರಸಭೆಗೆ 4 ಮಂದಿಯನ್ನು ಅಯ್ಕೆ ಮಾಡಲು ಅವಕಾಶ ನೀಡಲಾಗಿದ್ದು, ಕನಿಷ್ಠ 3 ತಿಂಗಳಿನಿಂದ 1 ವರ್ಷ ತನಕ ಅವರಿಗೆ ನಗರಸಭೆಯ ಯಾವುದೇ ವಿಭಾಗದಲ್ಲಿ ಕೆಲಸ ನೀಡಬಹುದು. ತಿಂಗಳಿಗೆ ₹ 6ರಿಂದ ₹7 ಸಾವಿರದಷ್ಟು ವೇತನ ನೀಡಲು ಅವಕಾಶವಿದೆ. ಅರ್ಬನ್ ಇಂಟರ್ನ್‌ಷಿಪ್‌ಪ್ರೋಗ್ರಾಮ್‌ನ ಅನ್‌ಲೈನ್‌ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಅವಧಿ ಮುಗಿದ ಬಳಿಕ ಅವರಿಗೆ ಪ್ರಮಾಣಪತ್ರವನ್ನೂ ನೀಡಲಾಗುತ್ತದೆ ಎಂದು ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.