ಮುಡಿಪು: ಸರ್ಕಾರವು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣದ ಯೋಜನೆ ರೂಪಿಸಿದ್ದರೂ, ಮುಡಿಪು ವ್ಯಾಪ್ತಿಯ ಬೆರಳೆಣಿಕೆಯ ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಘಟಕಗಳು ನಿರ್ಮಾಣಗೊಂಡಿವೆ. ಕೆಲವು ಪಂಚಾಯಿತಿಗಳಲ್ಲಿ ನಿರ್ಮಾಣ ಹಂತದಲ್ಲಿವೆ.
ಕೆಲವು ಪಂಚಾಯತಿಗಳಲ್ಲಿ ತ್ಯಾಜ್ಯ ವಿಲೇವಾರಿ ಬಗ್ಗೆ ಸರಿಯಾದ ಸ್ಪಂದನೆ ದೊರಕದ ಕಾರಣ ರಸ್ತೆಯ ಇಕ್ಕೆಲಗಳಲ್ಲಿಯೂ ತ್ಯಾಜ್ಯದ ರಾಶಿಯೇ ಎದ್ದು ಕಾಣುತ್ತಿದೆ. ಉಳ್ಳಾಲ ತಾಲ್ಲೂಕಿನ ಮುಡಿಪು ವ್ಯಾಪ್ತಿಯಲ್ಲಿ ಇರಾ, ಬಾಳೆಪುಣಿ, ನರಿಂಗಾನ, ಕುರ್ನಾಡು, ಕೊಣಾಜೆ, ಹರೇಕಳ, ಬೋಳಿಯಾರು, ಪಾವೂರು, ಪಜೀರು, ಮಂಜನಾಡಿ ಗ್ರಾಮ ಪಂಚಾಯಿತಿಗಳ ಪೈಕಿ ಮೂರು ಗ್ರಾಮಗಳಲ್ಲಿ (ಬಾಳೆಪುಣಿ, ಕುರ್ನಾಡು ಹಾಗೂ ಪಾವೂರು) ಮಾತ್ರ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಗೊಂಡಿದೆ.
ಘಟಕ ನಿರ್ಮಾಣಗೊಂಡಿರುವ ಮೂರು ಗ್ರಾಮಗಳಲ್ಲಿ ಸಹ ಆರಂಭದ ಹಂತದಲ್ಲಿ ಜನರ ಸಹಭಾಗಿತ್ವದಲ್ಲಿ ಕಾರ್ಯ ನಡೆದು, ಮಾದರಿಯಾಗಿತ್ತು. ಆದರೆ ಇತ್ತೀಚೆಗೆ ಈ ಘಟಕಗಳಲ್ಲಿಯೂ ನಿರ್ವಹಣೆ ಕುಂಠಿತಗೊಂಡಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಇತ್ತೀಚಿನ ದಿನಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ಈ ಸಂಬಂಧ ಕಾರ್ಯಚಟುವಟಿಕೆಗಳು ಆರಂಭವಾಗಿವೆ. ಕುರ್ನಾಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಹಳ ವರ್ಷಗಳ ಹಿಂದೆಯೇ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲಾಗಿದ್ದು, ಜನರ ಸಹಕಾರದೊಂದಿಗೆ ವಿಲೇವಾರಿ ಮಾಡುತ್ತ ಬಂದಿದೆ. ಕೊಣಾಜೆ ಪಂಚಾಯಿತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಗುರುತಿಸಿದ್ದು, ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಕುತ್ತಾರು, ದೇರಳಕಟ್ಟೆ, ನಾಟೆಕಲ್, ಅಸೈಗೋಳಿ, ಕೊಣಾಜೆ, ಪಜೀರು, ಕುರ್ನಾಡು, ಮುಡಿಪು ರಸ್ತೆಯ ಉದ್ದಕ್ಕೂ ಇತ್ತೀಚೆಗೆ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿಯ ದರ್ಶನವಾಗುತ್ತಿದೆ. ಈ ಭಾಗದಲ್ಲಿ ಗುಡ್ಡ ಪ್ರದೇಶಗಳಿಗೆ ಬೆಂಕಿ ಬಿದ್ದು ಮರ–ಗಿಡಗಳು ಆಹುತಿಯಾಗುತ್ತಿದ್ದು, ಜತೆಗೆ ರಸ್ತೆ ಬದಿಯಲ್ಲಿರುವ ಪ್ಲಾಸ್ಟಿಕ್ ಕೂಡ ಈ ಬೆಂಕಿಗೆ ಸಿಲುಕಿ ವಿಷಕಾರಿ ಹೊಗೆ ಉಗುಳುತ್ತದೆ. ಇದರಿಂದ ಸ್ಥಳೀಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ವಾಹನಗಳಲ್ಲಿ ರಾತ್ರಿ ವೇಳೆಯಲ್ಲಿ ತ್ಯಾಜ್ಯ ತಂದು ರಸ್ತೆ ಬದಿಯಲ್ಲಿ ಎಸೆದು ಹೋಗುವುದು ಸಾಮಾನ್ಯವಾಗಿದೆ. ಪಂಚಾಯಿತಿ ಅಲ್ಲಲ್ಲಿ ಹಾಕಿರುವ ‘ತ್ಯಾಜ್ಯ ಎಸೆಯದಿರಿ’ ಎಂಬ ನಾಮಫಲಕಗಳ ಬಳಿಯೇ ತ್ಯಾಜ್ಯ ತುಂಬಿಕೊಂಡಿವೆ.
ಮುಡಿಪುವಿನ ಜನಶಿಕ್ಷಣ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಇತ್ತೀಚಗೆ ಕುತ್ತಾರಿನಿಂದ ಮುಡಿಪುವರೆಗೆ ಸ್ವಚ್ಛತಾ ಅಭಿಯಾನ, ಸಂವಾದ, ವೀಕ್ಷಣೆ ಕಾರ್ಯ ನಡೆದಿದೆ. ರಸ್ತೆಯ ಬದಿಯಲ್ಲಿರುವ ತ್ಯಾಜ್ಯ ರಾಶಿ ತೆರವಿಗೆ ಸಂಘ ಸಂಸ್ಥೆಗಳು ಹಾಗೂ ಸಮುದಾಯದ ಸಹಕಾರದೊಂದಿಗೆ ಸಮರ್ಪಕವಾದ ಕ್ರಮ ತೆಗೆದುಕೊಳ್ಳುವಂತೆ ಜನಶಿಕ್ಷಣ ಟ್ರಸ್ಟ್ ಮೂಲಕ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಅವರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಬೋಳಿಯಾರ್ ಗ್ರಾಮ ಪಂಚಾಯಿತಿಯಲ್ಲಿ ಕಸ ವಿಲೇವಾರಿ ಘಟಕವು ಕಾರ್ಯಾಚರಣೆಗೆ ಸಿದ್ಧಗೊಂಡಿದೆ. ತ್ಯಾಜ್ಯ ಸಂಗ್ರಹಿಸಲು ವಾಹನ ವ್ಯವಸ್ಥೆ ಮಾಡಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಸಮರ್ಪಕವಾಗಿ ಆರಂಭಗೊಳ್ಳಲಿದೆ ಎಂದು ಬೋಳಿಯಾರ್ ಗ್ರಾಮ ಪಂಚಾಯಿತಿ ಪಿಡಿಒ ಕೃಷ್ಣ ಕುಮಾರ್ ಕೆ. ತಿಳಿಸಿದರು.
‘ತ್ಯಾಜ್ಯ ವಿಲೇವಾರಿ ಆದ್ಯತೆ ಆಗಲಿ’
‘ತ್ಯಾಜ್ಯ ವಿಲೇವಾರಿ ಆದ್ಯತೆಯ ವಿಷಯವಾಗಬೇಕು. ಪ್ರತಿ ಪಂಚಾಯಿತಿಯೂ ಈ ಬಗ್ಗೆ ಹೆಚ್ಚಿನ ಜವಾಬ್ದಾರಿಯಿಂದ ಜನರ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಬೇಕು. ಈ ವಿಷಯದಲ್ಲಿ ತರಬೇತಿ, ಚರ್ಚೆಗಳು, ಮೇಲ್ವಿಚಾರಣೆ ಹೆಚ್ಚೆಚ್ಚು ನಡೆಯಬೇಕು. ಸ್ವಚ್ಛ, ಆರೋಗ್ಯಕರ ಪರಿಸರ ಹಾಗೂ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಪಣತೊಡಬೇಕು’ ಎಂದು ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.