ADVERTISEMENT

ಲೈಂಗಿಕ ಕಿರುಕುಳ: ಅಪರಾಧಿ ಶಿಕ್ಷಕನಿಗೆ 5 ವರ್ಷ ಸಜೆ

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 7:58 IST
Last Updated 20 ಅಕ್ಟೋಬರ್ 2024, 7:58 IST

ಮಂಗಳೂರು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಶಿಕ್ಷಕನಿಗೆ ಇಲ್ಲಿನ ಜಿಲ್ಲಾ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ತ್ವರಿತಗತಿ ವಿಶೇಷ ನ್ಯಾಯಾಲಯವು (ಪೊಕ್ಸೊ ಎಫ್‌ಟಿಎಸ್‌ಸಿ–1) 5 ವರ್ಷ ಸಜೆ ಹಾಗೂ ₹ 10ಸಾವಿರ  ದಂಡ ವಿಧಿಸಿದೆ.

ಹತ್ಯಡ್ಕ ಅರಸಿನಮಕ್ಕಿ ಪಡ್ಡಾಯಿಬೆಟ್ಟುವಿನ ಗುರುವ ಮೊಗೇರ ಯಾನೆ ಗುರುವ ಎಂ.ಪಿ. (49) ಶಿಕ್ಷೆಗೊಳಗಾದ ವ್ಯಕ್ತಿ. ಈ ಪ್ರಕರಣದಲ್ಲಿ ದೂರು ದಾಖಲಾದ ಕೇವಲ 7 ತಿಂಗಳಲ್ಲೇ ತೀರ್ಪು ಪ್ರಕಟವಾಗಿದೆ. 

ವಿದ್ಯಾರ್ಥಿನಿಯರಿಗೆ ರಜೆ ಬೇಕಿದ್ದರೆ ಅಥವಾ ಪಠ್ಯಕ್ಕೆ ಸಂಬಂಧಿಸಿದ ಸಂದೇಹವಿದ್ದರೆ ಶಾಲೆಯ ಪ್ರತ್ಯೇಕ ಕೊಠಡಿಗೆ ಬನ್ನಿ ಎಂದು ಶಿಕ್ಷಕ ಗುರುವ  ಹೇಳುತ್ತಿದ್ದ. ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕರೆಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ವಿದ್ಯಾರ್ಥಿನಿಯೊಬ್ಬಳಿಗೆ  ಎರಡು ಸಲ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ವಿದ್ಯಾರ್ಥಿನಿಯರು ಶಾಲೆಯ ಮುಖ್ಯಶಿಕ್ಷಕರಿಗೆ ತಿಳಿಸಿದ್ದರು. ವಿದ್ಯಾರ್ಥಿನಿಯೊಬ್ಬರು 2024 ಮಾ.12ರಂದು ದೂರು ನೀಡಿದ್ದು ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಬಳಿಕ ನಾಲ್ವರು ವಿದ್ಯಾರ್ಥಿನಿಯರು ಈ ಬಗ್ಗೆ ದೂರಿದ್ದರು.

ADVERTISEMENT

ಜಿಲ್ಲಾ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ತ್ವರಿತ ಗತಿ ವಿಶೇಷ ನ್ಯಾಯಾಲಯದ (ಪೊಕ್ಸೊ ಎಫ್‌ಟಿಎಸ್‌ಸಿ–1) ನ್ಯಾಯಾಧೀಶರಾದ ಡಿ.ವಿನಯ್ ಅವರು, ಶಿಕ್ಷಕನಿಗೆ ಲೈಂಗಿಕ  ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸೆಕ್ಷನ್ 10ರಡಿ  5ವರ್ಷ ಸಾದಾ ಸಜೆ ಮತ್ತು ₹ 5ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 1ವರ್ಷ ಸಜೆ, ಪೊಕ್ಸೊ ಕಾಯ್ದೆಯ ಸೆಕ್ಷನ್‌ 12ರಡಿ 3ವರ್ಷ ಸಾದಾ ಸಜೆ ಮತ್ತು ₹ 3 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 1ವರ್ಷ ಶಿಕ್ಷೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 354ರ (ಲೈಂಗಿಕ ಕಿರುಕುಳ) ಅಡಿ 1ವರ್ಷ ಸಾದಾ ಸಜೆ ಮತ್ತು ₹ 2ಸಾವಿರ  ದಂಡ, ದಂಡ ತೆರಲು ತಪ್ಪಿದಲ್ಲಿ 3 ತಿಂಗಳು ಸಜೆ  ವಿಧಿಸಿದ್ದಾರೆ. ಅಪರಾಧಿಯು ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬಹುದಾಗಿದೆ. ಸಂತ್ರಸ್ತೆಗೆ ಕಾನೂನು ಸೇವಾ ಪ್ರಾಧಿಕಾರವು ₹1ಲಕ್ಷ  ಪರಿಹಾರ ನೀಡಬೇಕೆಂದು ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.

ಮಹಿಳಾ ಠಾಣೆಯ ಎಸ್‌ಐ ಶಿವರುದ್ರಮ್ಮ ಎಸ್. ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆ ಪರವಾಗಿ  ವಕೀಲರಾದ ಸಹನಾದೇವಿ ಬೋಳೂರು ವಾದಿಸಿದ್ದರು. ಆರೋಪಿಗೆ ಮದುವೆಯಾಗಿದ್ದು ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.