ಮಂಗಳೂರು: ನಗರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕಳವು ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ, ನೆಲಕ್ಕೆ ಕೆಡವಿದ ವಿಡಿಯೊ ವೈರಲ್ ಆಗಿದೆ.
ಸ್ಟೇಟ್‌ಬ್ಯಾಂಕ್ ಬಳಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಈ ಮೂಲಕ ನಗರದ ಪ್ರಮುಖ ಸ್ಥಳಗಳಲ್ಲಿ ಪಿಕ್ ಪಾಕೆಟ್, ಮೊಬೈಲ್ ಕಳವು ಮಾಡುತ್ತಿದ್ದ ತಂಡದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
‘ನೀರುಮಾರ್ಗ ಹರೀಶ್ ಪೂಜಾರಿ (32), ಅತ್ತಾವರ ನಿವಾಸಿ ಶಮಂತ (20) ಬಂಧಿತರು. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕಮಿಷನರೇಟ್ ಕಚೇರಿಯ ಎಎಸ್‌ಐ ವರುಣ್ ಅವರನ್ನು ಗೌರವಿಸಿ, ಬಹುಮಾನ ನೀಡಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಏನಿದು ಘಟನೆ: ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯ ಮುಂಭಾಗದಲ್ಲಿರುವ ನೆಹರೂ ಮೈದಾನದಲ್ಲಿ ರಾಜಸ್ಥಾನದ ಡೋಲಾಪುರ ನಿವಾಸಿ, ಗ್ರಾನೈಟ್ ಕೆಲಸ ಮಾಡಿಕೊಂಡಿದ್ದ ಪ್ರೇಮ್ ನಾರಾಯಣ ತ್ಯಾಗಿ ಎಂಬುವರ ಮೊಬೈಲ್ ಕಳವಾಗಿದೆ. ತಕ್ಷಣವೇ ಪ್ರೇಮ್ ನಾರಾಯಣ ಎಚ್ಚೆತ್ತುಕೊಂಡು ಹತ್ತಿರದಲ್ಲೇ ಅನುಮಾನಾಸ್ಪದವಾಗಿ ಹೋಗುತ್ತಿದ್ದ ವ್ಯಕ್ತಿಯನ್ನು ಬೆನ್ನತ್ತಿದ್ದಾರೆ. ಒಬ್ಬರ ಹಿಂದೆ ಮತ್ತೊಬ್ಬರು ಓಡುವುದನ್ನು ಕಂಡು ಸಮೀಪದಲ್ಲೇ ಇದ್ದ ಎಎಸ್‌ಐ ವರುಣ್ ಕಾರ್ಯಾಚರಣೆಗೆ ಇಳಿಸಿದ್ದಾರೆ. ಹ್ಯಾಮಿಲ್ಟನ್ ಸರ್ಕಲ್ ಬಳಿ ವರುಣ್ ಅವರು ಆರೋಪಿ ಹರೀಶ್ ಪೂಜಾರಿಯನ್ನು ನೆಲಕ್ಕೆ ಕೆಡವಿ ಸ್ಥಳೀಯರ ಸಹಕಾರದಲ್ಲಿ ಬಂಧಿಸಿದ್ದಾರೆ.
ಹರೀಶ್‌ನ ಕೈಯಲ್ಲಿ ಕಳವಾದ ಮೊಬೈಲ್ ದೊರೆತಿರಲಿಲ್ಲ. ಆತನನ್ನು ತೀವ್ರ ವಿಚಾರಣೆ ನಡೆಸಿದಾಗ ಕೃತ್ಯದಲ್ಲಿ ಮತ್ತಿಬ್ಬರು ಭಾಗಿಯಾಗಿರುವುದು ಗೊತ್ತಾಗಿದೆ. ಕಳವಾದ ಮೊಬೈಲ್ ಕೂಡ ಅವರೊಂದಿಗೆ ಇರುವುದಾಗಿ ಹರೀಶ್ ತಿಳಿಸಿದ್ದ. ವಶದಲ್ಲಿದ್ದ ಹರೀಶ್‌ನನ್ನು ಬಳಸಿ ಮತ್ತಿಬ್ಬರನ್ನು ಬಂಧಿಸಲು ಪೊಲೀಸರು ತಂತ್ರ ರೂಪಿಸಿದ್ದಾರೆ. ಅದರಂತೆ ರೈಲ್ವೆ ಸ್ಟೇಷನ್ ಬಳಿ ಮತ್ತೊಬ್ಬ ಆರೋಪಿ ಶಮಂತ್‌ನನ್ನು ಪೊಲೀಸರು ಬಂಧಿಸಿದ್ದಾರೆ.
‘ಕಳ್ಳತನದಲ್ಲಿ ಮೂವರು ಭಾಗಿಯಾಗಿದ್ದು, ಮತ್ತೊಬ್ಬ ಆರೋಪಿ ರಾಜೇಶ್ ಎಂಬಾತ ಪರಾರಿಯಾಗಿದ್ದಾನೆ. ಆರೋಪಿಗಳಿಂದ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ವಿಡಿಯೊವನ್ನು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಕೂಡ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.