ಮಂಗಳೂರು: ಹೆಚ್ಚುತ್ತಿರುವ ಮಕ್ಕಳ ದ್ವಿಚಕ್ರ ವಾಹನ ಚಾಲನೆ, ಹಿರಿಯ ನಾಗರಿಕರಿಗೆ ಬಸ್‌ನಲ್ಲಿ ಸೀಟ್ ಬಿಟ್ಟು ಕೊಡದಿರುವುದು, ವಾಹನಗಳಲ್ಲಿ ತರಕಾರಿ ಮಾರಾಟದ ವಿರುದ್ಧ ಕ್ರಮ ಜರುಗಿಸಬೇಕು ಸೇರಿದಂತೆ ಅನೇಕ ದೂರುಗಳನ್ನು ಸಾರ್ವಜನಿಕರು ನಗರ ಪೊಲೀಸ್ ಕಮಿಷನರ್ ಬಳಿ ಹೇಳಿಕೊಂಡರು.
ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಕುಲದೀಪ್‌ಕುಮಾರ್ ಜೈನ್ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಮಕ್ಕಳು (ಚಾಲನಾ ಪರವಾನಗಿಗೆ ಅರ್ಹತೆ ಹೊಂದಿರದ) ಹೆಲ್ಮೆಟ್ ಧರಿಸದೆ, ಮೂವರು ಕುಳಿತುಕೊಂಡು ದ್ವಿಚಕ್ರ ವಾಹನ ಚಲಾಯಿಸುವ ಪ್ರಕರಣಗಳು ಕಾಟಿಪಳ್ಳ ಪ್ರದೇಶದಲ್ಲಿ ಹೆಚ್ಚು ಕಂಡು ಬರುತ್ತಿವೆ. ಈ ಬಗ್ಗೆ ಪೊಲೀಸರು ನಿಗಾ ವಹಿಸಬೇಕು ಎಂದು ಕರೆ ಮಾಡಿದವರೊಬ್ಬರು ಒತ್ತಾಯಿಸಿದರು.
‘ಮಕ್ಕಳಿಗೆ ವಾಹನ ನೀಡಿದರೆ, ವಾಹನ ನೀಡಿದ ಮಾಲೀಕರ ವಿರುದ್ಧ ಕಠಿಣ ಕ್ರಮ ವಹಿಸಲಾಗುವುದು’ ಎಂದು ಕುಲದೀಪ್ ಕುಮಾರ್ ಜೈನ್ ಹೇಳಿದರು. ಸುರತ್ಕಲ್ ಪರಿಸರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ವಿಶೇಷ ನಿಗಾವಹಿಸಲಾಗಿದೆ. ಕಾನೂನು ಉಲ್ಲಂಘಿಸಿ ವಾಹನ ಚಲಾಯಿಸುವ ಮಕ್ಕಳ ಪಾಲಕರನ್ನು ಕರೆಸಿ ಎಚ್ಚರಿಕೆ ನೀಡಲಾಗುತ್ತಿದೆ. ಶಾಲೆಗಳಲ್ಲೂ ಜಾಗೃತಿ ಕಾರ್ಯ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.
ನಗರದಲ್ಲಿ ಕೆಲವು ಬಾರ್ ಮತ್ತು ವೈನ್‌ಶಾಪ್‌ಗಳಲ್ಲಿ ಸಮಯ ಪಾಲನೆ ಮಾಡುತ್ತಿಲ್ಲ. ನಿಗದಿತ ಸಮಯಕ್ಕೆ ಬಾಗಿಲು ಬಂದ್ ಆಗುತ್ತಿಲ್ಲ ಎಂದು ಸಾರ್ವಜನಿಕರೊಬ್ಬರು ದೂರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್, ‘ನಗರದ ಎಲ್ಲ ಬಾರ್ ಮತ್ತು ವೈನ್‌ಶಾಪ್‌ಗಳ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸುತ್ತಿದ್ದೇವೆ. ನಿಯಮ ಉಲ್ಲಂಘನೆ ಪ್ರಕರಣಗಳು ಕಂಡಲ್ಲಿ, ಕ್ರಮಕ್ಕೆ ಅಬಕಾರಿ ಇಲಾಖೆಗೆ ಮನವಿ ಮಾಡಿದ್ದೇವೆ’ ಎಂದರು.
‘ಕೆಪಿಟಿ– ಕಾವೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಘಾತಗಳು ಹೆಚ್ಚುತ್ತಿವೆ. 10 ವರ್ಷಗಳಲ್ಲಿ 30ಕ್ಕೂ ಹೆಚ್ಚು ಅಪಘಾತಗಳು ನಡೆದಿವೆ. ವಿಮಾನ ನಿಲ್ದಾಣ ರಸ್ತೆಯಲ್ಲಿ ವಿಐಪಿಗಳು ಸಂಚರಿಸುವುದರಿಂದ ವೇಗ ನಿಯಂತ್ರಕ ಅಳವಡಿಸಲು ಅವಕಾಶವಿಲ್ಲ. ಇದಕ್ಕೆ ಪರ್ಯಾಯ ಕ್ರಮದ ಬಗ್ಗೆ ಯೋಚಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್ ಒತ್ತಾಯಿಸಿದರು.
ಬಸ್‌ಗಳ ಕರ್ಕಶ ಹಾರನ್‌ಗಳ ಹಾವಳಿ ಮಿತಿ ಮೀರಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಕರೆ ಮಾಡಿದವರೊಬ್ಬರು ದೂರಿದರು. ‘ಈಗಾಗಲೇ ಬಸ್ ಮಾಲೀಕರ ಸಭೆ ನಡೆಸಿದ್ದು, ಸೂಚನೆ ನೀಡಲಾಗಿದೆ. ಪೊಲೀಸರು ಕೂಡ ನಿರಂತರ ಕಾರ್ಯಾಚರಣೆ ನಡೆಸಿ, ಕರ್ಕಶ ಹಾರನ್‌ಗಳ ತೆರವು ಕಾರ್ಯ ಮಾಡುತ್ತಿದ್ದಾರೆ’ ಎಂದು ಪೊಲೀಸ್ ಕಮಿಷನರ್ ಉತ್ತರಿಸಿದರು.
ವಾಹನಗಳಲ್ಲಿ ತರಕಾರಿ ಮಾರಾಟ ಮಾಡುವವರ ವಿರುದ್ಧ ಕ್ರಮವಹಿಸಬೇಕು, ಬಸ್‌ಗಳಲ್ಲಿ ಹಿರಿಯ ನಾಗರಿಕರು ಇದ್ದರೆ ಅವರಿಗೆ ಸೀಟ್ ಕೊಡಲು ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್, ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ, ಸಿಸಿಆರ್‌ಬಿ ಎಸಿಪಿ ರವೀಶ್ ನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.