ADVERTISEMENT

ಮಂಗಳೂರು ಕಾರಾಗೃಹದ ಮೇಲೆ ಪೊಲೀಸರ ದಾಳಿ: 25 ಮೊಬೈಲ್‌, ಗಾಂಜಾ, ಡ್ರಗ್ಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 2:35 IST
Last Updated 25 ಜುಲೈ 2024, 2:35 IST
   

ಮಂಗಳೂರು: ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಕಾರಾಗೃಹದ ಮೇಲೆ ಮುಂಜಾನೆ ಪೊಲೀಸರು ದಾಳಿ ನಡೆಸಿದ್ದಾರೆ.

ಈ ವೇಳೆ 25 ಮೊಬೈಲ್ ಫೋನ್, ಒಂದು ಬ್ಲೂಟೂತ್ ಡಿವೈಸ್, ಐದು ಇಯರ್ ಫೋನ್‌ಗಳು, ಒಂದು ಪೆನ್ ಡ್ರೈವ್, ಐದು ಚಾರ್ಜರ್‌ಗಳು, ಕತ್ತರಿಗಳು, ಮೂರು ಕೇಬಲ್‌ಗಳು, ಜೊತೆಗೆ ಗಾಂಜಾ ಮತ್ತು ಡ್ರಗ್ಸ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ‌.

ಪೊಲೀಸ್ ಕಮಿಷನರ್ ಮಾರ್ಗದರ್ಶನದಲ್ಲಿ ಇಬ್ಬರು ಡಿಸಿಪಿ, ಮೂವರು ಎಸಿಪಿ, 15 ಇನ್‌ಸ್ಪೆಕ್ಟರ್, 150ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರತ್ಯೇಕ ತಂಡಗಳನ್ನು ರಚಿಸಿ ಜೈಲಿನ ವಿವಿಧ ಬ್ಲಾಕ್‌ಗಳಲ್ಲಿ ತಪಾಸಣೆ ನಡೆಸಲಾಯಿತು.‌ ದಾಳಿ ನಡೆಸುವ ಕೊನೆಯ ಕ್ಷಣದ‌ವರೆಗೂ ಗೋಪ್ಯತೆ ಕಾಪಾಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಸಾಕಷ್ಟು ಭದ್ರತೆ‌ಯ ನಡುವೆಯೂ ಮೊಬೈಲ್ ಫೋನ್ ಮತ್ತಿತರ ಸಾಮಗ್ರಿಗಳು, ಗಾಂಜಾ‌ ಮತ್ತು ಡ್ರಗ್ಸ್‌ಗಳನ್ನು ಜೈಲಿನೊಳಗೆ ಹೇಗೆ ಕೊಂಡೊಯ್ಯಲಾಯಿತು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.