ADVERTISEMENT

ಚುನಾವಣಾ ಬಾಂಡ್ ಮೂಲಕ ರಾಜಕೀಯ ಭ್ರಷ್ಟಾಚಾರ: ಪ್ರಕಾಶ್ ರಾಜ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 5:24 IST
Last Updated 19 ಮಾರ್ಚ್ 2024, 5:24 IST
ಪ್ರಕಾಶ್ ರಾಜ್
ಪ್ರಕಾಶ್ ರಾಜ್   

ಮಂಗಳೂರು: ಚುನಾವಣಾ ಬಾಂಡ್ ರಾಜಕೀಯ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ದೂರಿದ ನಟ, ರಂಗಕರ್ಮಿ ಪ್ರಕಾಶ್ ರಾಜ್ ಅವರು, ಬಾಂಡ್ ವಿಷಯದಲ್ಲಿ ಪ್ರಧಾನಮಂತ್ರಿ ಮತ್ತು ಗೃಹಸಚಿವರು ಮೌನ ವಹಿಸಿರುವುದು ಯಾಕೆ ಎಂದು ಪ್ರಶ್ನಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ಚುನಾವಣಾ ಬಾಂಡ್ ಮೂಲಕ ಲೂಟಿ ಮಾಡುತ್ತಿರುವ ವಿಷಯವನ್ನು ‘ಮನ್ ಕಿ ಬಾತ್‌’ನಲ್ಲಿ ಪ್ರಧಾನಮಂತ್ರಿ ಯಾಕೆ ಪ್ರಸ್ತಾಪಿಸುತ್ತಿಲ್ಲ ಎಂದು ಕೇಳಿದರು.

‘ಬಿಜೆಪಿ ಪಡೆದಿರುವ ಬಾಂಡ್ ಹಣವೆಲ್ಲಾ ಇ.ಡಿ ದಾಳಿಯ ಬಳಿಕ ಸಂಗ್ರಹಿಸಿದ್ದು. ಚುನಾವಣೆಗೆ ಎಂದು ₹ 500 ಕೋಟಿ ಲಂಚ ಕೊಟ್ಟವನಿಗೆ ₹ 2 ಸಾವಿರ ಕೋಟಿ ಮೊತ್ತದ ಗುತ್ತಿಗೆ ನೀಡಿದರೆ ಆ ಗುತ್ತಿಗೆ ಹಣ ಜನರದ್ದಲ್ಲವೇ, ಚುನಾವಣೆಗೆ ಹಣ ಬೇಕು ಎಂದು ದೇಶವನ್ನು ಕೆಡಿಸುವುದು ಸರಿಯೇ’ ಎಂದು ಪ್ರಶ್ನಿಸಿದ ಅವರು ಬಿಜೆಪಿಯವರು ಬಾಂಡ್ ಹಣದಲ್ಲೇ ಶಾಸಕರನ್ನು ಖರೀದಿ ಮಾಡಿದ್ದಿರಬೇಕು ಎಂದರು.

ADVERTISEMENT

‘ನಾವು ₹ 6000 ಕೋಟಿ ತೆಗೆದುಕೊಂಡಿದ್ದೇವೆ, ಆದರೆ, 330 ಸಂಸದರು ಇದ್ದಾರೆ. ಕಡಿಮೆ ಸಂಸದರು ಇರುವ ಪಕ್ಷಗಳು ಜಾಸ್ತಿ ತೆಗೆದುಕೊಂಡಿದ್ದಾರೆ ಎಂದು ಗೃಹಸಚಿವರು ಹೇಳುತ್ತಾರೆ. ಇದರರ್ಥ ಏನು? ಹೆಚ್ಚು ತೆಗೆದುಕೊಂಡು ಹಂಚಿಕೊಂಡರೆ ಶಿಕ್ಷೆ ಕಡಿಮೆ ಆಗಬೇಕು ಎಂದೇ’ ಎಂದ ಅವರು ‘ಲಾಟರಿ ಏಜೆಂಟ್‌ ಮಾರ್ಟಿನ್‌ನಿಂದ ಚುನಾವಣಾ ಬಾಂಡ್ ಮೂಲಕ ಹಣ ತೆಗೆದುಕೊಂಡಿರುವುದಾಗಿ ಡಿಎಂಕೆಯವರು ಹೇಳಿಕೊಂಡಿದ್ದಾರೆ. ಆದರೆ ಪ್ರಧಾನಮಂತ್ರಿ ಹೇಳದೇ ಇರುವುದು ಸರಿಯಲ್ಲ’ ಎಂದರು.

‘ಲೋಕಸಭೆ ಚುನಾವಣೆಯಲ್ಲಿ ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ‌. ಆಳುವ ಪಕ್ಷವನ್ನು ಪ್ರಶ್ನಿಸುವುದಷ್ಟೆ ನನ್ನ ಕೆಲಸ. ಜನರೂ ಅಷ್ಟೇ, ಪಕ್ಷ ನೋಡಿ ಮತ ಹಾಕಬಾರದು. ನಿಮ್ಮ ಆಶೋತ್ತರಗಳನ್ನು ಈಡೇರಿಸಬಲ್ಲ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸಬೇಕು. ಚುನಾವಣಾ ಸಮೀಕ್ಷೆ ವ್ಯಾಪಾರ ಆಗಿದ್ದು ಹಣ ಕೊಟ್ಟು ಮಾಡಿಸುತ್ತಿದ್ದಾರೆ ಎಂಬ ಸಂದೇಹ ಮೂಡುತ್ತಿದೆ’ ಎಂದು ಪ್ರಕಾಶ್ ರಾಜ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.