ಪುತ್ತೂರು: ‘ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವವರೆಗೆ, ಅವರ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ನಾವು ವಿರಮಿಸುವುದಿಲ್ಲ. ಈ ಕೊಲೆ ವ್ಯರ್ಥ ಮಾಡಲು ಬಿಡುವುದಿಲ್ಲ’ ಎಂದುಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮೀನಿನ ವ್ಯಾಪಾರ ಹಾಗೂ ಅಡಕೆ ವ್ಯಾಪಾರದ ಲಾಭಿ ಕೆಲಸ ಮಾಡಿದೆ. ಮುಸ್ಲಿಂ ಸಮುದಾಯದವರೊಟ್ಟಿಗೆ ವ್ಯಾಪಾರ ಮುಕ್ತವಾದರೆ ಮಾತ್ರ ಹಿಂದೂ ಸಮಾಜಕ್ಕೆ ಒಳಿತು ಸಾಧ್ಯ’ ಎಂದು ಹೇಳಿದರು.
‘ಲವ್ ಜಿಹಾದ್ ಹೆಸರಲ್ಲಿ ಹಿಂದೂ ಯುವತಿಯರನ್ನು ಬಲೆಗೆ ಬೀಳಿಸುತ್ತಿರುವ ಮುಸ್ಲಿಂ ಯುವಕರನ್ನು ಅವರ ಸಮುದಾಯದವರು ಹಸ್ತುಬಸ್ತಿನಲ್ಲಿಡಬೇಕು. ಇಲ್ಲವಾದಲ್ಲಿ ತಿರುಗೇಟು ನೀಡುವುದು ಅನಿವಾರ್ಯವಾಗುತ್ತದೆ’ ಎಂದು ಹೇಳಿದರು.
‘ಕೆಲವೊಂದು ತಪ್ಪುಗಳು ಬಿಜೆಪಿಯಿಂದ ಆಗುತ್ತಿದೆ. ಹಿಂದೂ ಸಂಘಟನೆಗಳ ಬೆವರು- ಪರಿಶ್ರಮದ ಫಲವಾಗಿ ಬಂದಿರುವ ಬಿಜೆಪಿ ಸರ್ಕಾರ ಮುಂದಿನ 6 ತಿಂಗಳೊಳಗೆ ಹಂತಹಂತವಾಗಿ ಸುಧಾರಿಸಿಕೊಳ್ಳಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಹಿಂದೂ ವಿರೋಧಿ ಮಾತ್ರವಲ್ಲದೆ ದೇಶ ವಿರೋಧಿಗಳಾಗಿವೆ. ದೇಶ ದ್ರೋಹಿಗಳನ್ನು ನಿರ್ಮಾಣ ಮಾಡುತ್ತಿರುವ ಕಾಂಗ್ರೆಸನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ’ ಎಂದರು.
ಶ್ರೀರಾಮಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರು, ವಿಭಾಗಾಧ್ಯಕ್ಷ ಮೋಹನ್ ಭಟ್, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಜಯರಾಮ್ ಅಂಬೆಕಲ್ಲು, ಮುಖಂಡರಾದ ಧನ್ಯಕುಮಾರ್ ಬೆಳಂದೂರು ಇದ್ದರು.
‘ಪ್ರವೀಣ್ ಹತ್ಯೆ: ಎನ್‌ಐಎ ತನಿಖೆ ಒಪ್ಪಲಾಗದು’
‘ಪ್ರವೀಣ್ ನೆಟ್ಟಾರು ಹತ್ಯೆಯನ್ನು ರಾಷ್ಟ್ರೀಯ ತನಿಖಾ ಏಜೆನ್ಸಿಗೆ (ಎನ್‌ಐಎ) ವಹಿಸಿದ್ದನ್ನು ಒಪ್ಪುವುದಿಲ್ಲ. ಪರೇಶ್ ಮೇಸ್ತ ಕೊಲೆ ತನಿಖೆಯನ್ನೂ ಎನ್‌ಐಎಗೆ ವಹಿಸಲಾಗಿತ್ತು. ಎನ್‌ಐಎ ಅಧಿಕಾರಿಗಳು ಅವರ ಮನೆಗೆ ಹೋಗಿ ವಿಚಾರಣೆಯನ್ನೂ ಮಾಡಿಲ್ಲ’ ಎಂದು ಮುತಾಲಿಕ್ ಹೇಳಿದರು.
‘ಪ್ರವೀಣ್ ಹತ್ಯೆ ಹುಡುಗಿ ಅಥವಾ ಆಸ್ತಿ ವಿಚಾರಕ್ಕಾಗಿ ನಡೆದದ್ದಲ್ಲ. ಹಿಂದೂ ಧರ್ಮಕ್ಕಾಗಿ ಕೆಲಸ ಮಾಡಿದ್ದ ವ್ಯಕ್ತಿಯ ಕೊಲೆ ಇದು. ಹಿಂದೂಗಳು ಯಾರೂ ತೊಂದರೆ ಕೊಟ್ಟಿಲ್ಲ. ಆದರೂ, ಶಾಂತವಾಗಿದ್ದ ಹಿಂದೂ ಸಮಾಜವನ್ನು ಕೆರಳಿಸಿ ದ್ದೀರಿ. ಸೌಹಾರ್ದದ ಕಾಲ ಮುಗಿದಿದೆ. ಇನ್ನೇನಿದ್ದರೂ ಸಂಘರ್ಷ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.