ADVERTISEMENT

ಸಾಂತ್ವನ ಹೇಳಲು ಸಾಲು ಸಾಲು ಜನ; ರೋಸಿಹೋದ ಪ್ರವೀಣ್ ನೆಟ್ಟಾರು ಕುಟುಂಬ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 4:50 IST
Last Updated 30 ಜುಲೈ 2022, 4:50 IST
ಸಿಎಂ ಬೊಮ್ಮಾಯಿ ಭೇಟಿ ಸಂದರ್ಭ ಪ್ರವೀಣ್‌ ನೆಟ್ಟಾರು ಅವರ ಪತ್ನಿ ಮತ್ತು ತಾಯಿ
ಸಿಎಂ ಬೊಮ್ಮಾಯಿ ಭೇಟಿ ಸಂದರ್ಭ ಪ್ರವೀಣ್‌ ನೆಟ್ಟಾರು ಅವರ ಪತ್ನಿ ಮತ್ತು ತಾಯಿ   

ಬೆಳ್ಳಾರೆ: ಪ್ರವೀಣ್ನೆಟ್ಟಾರು ಅವರ ಸಾವಿನ ಬಳಿಕ ಸಾಂತ್ವನ ಹೇಳಲು ಮನೆಗೆ ಬರುವವರೇ ಅವರ ಬಂಧುಗಳ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ರೋಸಿಹೋದ ಮನೆಯವರು, ‘ದಯವಿಟ್ಟು ಇನ್ನು ಯಾರೂ ಸಾಂತ್ವನ ಹೇಳಲು ಬರಬೇಡಿ‘ ಎಂದು ಅಂಗಲಾಚಿದ್ದಾರೆ.

’ಪ್ರವೀಣ್‌ ಅವರ ತಂದೆ ಶೇಖರ ಪೂಜಾರಿ ಅವರು ಹೃದ್ರೋಗದಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯವೂ ಪದೇ ಪದೇ ಏರುಪೇರಾಗುತ್ತಿದೆ. ಮಗನ ಸಾವಿನ ಬಗ್ಗೆ ಸಾಂತ್ವನ ಹೇಳುವಾಗಲೆಲ್ಲಾ ಅವರು ಮತ್ತಷ್ಟು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ತಾಯಿ ರತ್ನಾವತಿ ಅವರೂ ಅಧಿಕ ರಕ್ತದೊತ್ತಡದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಡುವೆ ಮನೆ ತುಂಬಾ ಜನಜಂಗುಳಿ ಸೇರುತ್ತಿರುವುದರಿಂದ ಅವರ ಆರೋಗ್ಯ ಮತ್ತಷ್ಟು ಹದಗೆಡಬಹುದು‘ ಎಂದು ಹತ್ತಿರದ ಬಂಧುಗಳು ಕಳವಳ ವ್ಯಕ್ತಪಡಿಸಿದರು.

ಸಾವು ಸಂಭವಿಸಿದ ಮೂರು ದಿನಗಳ ಬಳಿಕವೂ ಸಾಂತ್ವನ ಹೇಳಲು ಬರುವವರ ಸಂಖ್ಯೆ ಕಡಿಮೆ ಆಗದಿರುವುದು ಪ್ರವೀಣ್ ಅವರ ಚಿಕ್ಕಪ್ಪ ಜಯರಾಮ ಪೂಜಾರಿ ಅವರ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿದೆ.

ADVERTISEMENT

’ನಾವು ಯಾರೂ ನಿಮ್ಮನ್ನು ಕರೆದಿಲ್ಲ. ನಮ್ಮ ಮನೆಯವರ ಪರಿಸ್ಥಿತಿಯನ್ನೂ ಅರಿತುಕೊಳ್ಳಿ. ಪ್ರವೀಣನ ಅಪ್ಪ ಅಮ್ಮ ಇಬ್ಬರೂ ಮೂರು ದಿನಗಳಿಂದ ನಿದ್ದೆ ಮಾಡಿಲ್ಲ. ದಯವಿಟ್ಟು ಸಾಂತ್ವನ ಹೇಳುವುದಕ್ಕೆ ಯಾರೂ ಮನೆಗೆ ಬರುವುದ ಬೇಡ. ಬೇಕಿದ್ದರೆ ಪ್ರವೀಣನ ಉತ್ತರಕ್ರಿಯೆಯ ದಿನ ಬನ್ನಿ’ ಎಂದು ಜಯರಾಮ ಪೂಜಾರಿ ಅವರು ಏರು ಧ್ವನಿಯಲ್ಲೇ ಹೇಳಿದರು.

ಮಾಧ್ಯಮದವರಿಗೂ ಅವರು ವಿನಾಯಿತಿ ನೀಡಲಿಲ್ಲ. ಮನೆಯಂಗಳದಲ್ಲಿದ್ದ ವರದಿಗಾರರನ್ನೂ ಹೊರಗೆ ಕಳುಹಿಸುವಂತೆ ಸ್ಥಳದಲ್ಲಿದ್ದ ಪೊಲೀಸ್‌ ಸಿಬ್ಬಂದಿಗೆ ಹೇಳಿದರು. ಭದ್ರತೆಗೆ ನಿಯೋಜಿಸಿದ್ದ ಪೊಲೀಸರನ್ನೂ ಉದ್ದೇಶಿಸಿ, ‘ದಯವಿಟ್ಟು ನೀವು ಇಲ್ಲಿರುವುದು ಬೇಡ’ ಎಂದರು.

ಸಂಸದ ತೇಜಸ್ವಿ ಸೂರ್ಯ ಅವರ ಜೊತೆ 20ಕ್ಕೂ ಹೆಚ್ಚು ಮಂದಿ ಬೆಂಗಳೂರಿನಿಂದ ಶುಕ್ರವಾರ ನೆಟ್ಟಾರಿನಲ್ಲಿರುವ ಪ್ರವೀಣ್‌ ಅವರ ಮನೆಗೆ ಬಂದಿದ್ದರು. ಅವರಲ್ಲಿ ಕೇವಲ ನಾಲ್ವರಿಗೆ ಮಾತ್ರ ಮನೆಯೊಳಗೆ ಹೋಗಲು ಅವಕಾಶ ಕಲ್ಪಿಸಲಾಯಿತು.

ದೂರದ ಯಾದಗಿರಿ ಜಿಲ್ಲೆಯಿಂದ ಹತ್ತಕ್ಕೂ ಅಧಿಕ ಯುವಕರು ಶುಕ್ರವಾರ ಪ್ರವೀಣ್ ಅವರ ಮನೆಗೆ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.