ಮಂಗಳೂರು: ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ನೆಟ್ಟಾರುವಿನಲ್ಲಿರುವ ಅವರ ಮನೆಗೆ ಬಂದ ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರನ್ನು ಮೃತರ ಕುಟುಂಬಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು.
'ನಿಮ್ಮ ಸಾಂತ್ವನದ ಮಾತುಗಳು ನಮಗೆ ಬೇಕಿಲ್ಲ. ಮನೆಗೆ ಬಂದು ಸಾಂತ್ವನ ಹೇಳುವುದಿದ್ದರೆ ನಿನ್ನೆಯೇ ಬರಬೇಕಿತ್ತು. ನಿನ್ನೆ ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿಯೇ ಮನೆಗೆ ಬಂದಿಲ್ಲ. ಗಲಾಟೆ ಸೃಷ್ಟಿಸಿ ಲಾಭ ಮಾಡಿಕೊಳ್ಳುವುದಷ್ಟೇ ನಿಮ್ಮ ಉದ್ದೇಶ' ಎಂದು ಪ್ರವೀಣ್ ಅವರ ಚಿಕ್ಕಪ್ಪ ಜಯರಾಮ ಪೂಜಾರಿ ಅವರು ಆರೋಪಿಸಿದರು.
'ನಳಿನ್ ಕುಮಾರ್ ಕಟೀಲ್ ಹಾಗೂ ಸುನಿಲ್ ಕುಮಾರ್ ಅವರು ಬೆಳ್ಳಾರೆಗೆ ವರುವವರೆಗೂ ಯಾವುದೇ ಗಲಾಟೆ ಆಗಿರಲಿಲ್ಲ. ಪಾರ್ಥೀವ ಶರೀರದ ಮೆರವಣಿಗೆ ಬರುವಾಗ ನಿಂತಿಕಲ್ಲುವಿನಲ್ಲಿ ಸಾವಿರಾರು ಕಾರ್ಯಕರ್ತರು ಸೇರಿದ್ದರು. ಆದರೂ ಯಾವುದೇ ಗೊಂದಲ ಉಂಟಾಗಿರಲಿಲ್ಲ. ನಾಯಕರು ಬಂದ ಬಳಿಕ ಕಾರ್ಯಕರ್ತರು ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ದುಡಿದ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿಸುವ ಮೂಲಕ ಅವರನ್ನು ಪಕ್ಷವು ಹೇಗೆ ನಡೆಸಿಕೊಳ್ಳುತ್ತದೆ ಎಂದು ತೋರಿಸಿಕೊಟ್ಟಿದ್ದೀರಿ' ಎಂದು ನೋವಿನಿಂದ ಹೇಳಿದರು.
'ನಾಯಕರು ದಯವಿಟ್ಟು ಮನೆಗೆ ಬರಬೇಡಿ. ಹಂತಕರಿಗೆ ಶಿಕ್ಷೆ ಕೊಡಿಸುವ ಮೂಲಕ ಪ್ರವೀಣ್ ಸಾವಿಗೆ ನ್ಯಾಯಕೊಡಿಸಿ ಸಾಕು. ದಯವಿಟ್ಟು ಇನ್ನಾದರೂ ಪಕ್ಷಕ್ಕಾಗಿ ದುಡಿದ ಇತರ ಕಾರ್ಯಕರ್ತರಿಗೆ ಪ್ರವೀಣ್ ಗೆ ಬಂದ ಸ್ಥಿತಿ ಬಾರದಂತೆ ನೋಡಿಕೊಳ್ಳಿ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.