ಮಂಗಳೂರು: ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ನಗರಕ್ಕೆ ಬಂದು ರೋಡ್ ಶೋ ನಡೆಸುವ ಹಿನ್ನೆಲೆಯಲ್ಲಿ ಭರದ ಸಿದ್ಧತೆಗಳು ಸಾಗಿವೆ.
ನಾರಾಯಣಗುರು ವೃತ್ತದಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಪ್ರತಿಮೆಯನ್ನು ಶುಕ್ರವಾರ ತೊಳೆದು ಸ್ವಚ್ಛಗೊಳಿಸುವ ಕಾರ್ಯ ನಡೆಯಿತು. ಇದೇ ವೃತ್ತದಿಂದ ರೋಡ್ ಶೋ ಆರಂಭವಾಗುವುದರಿಂದ ಎಸ್‌ಪಿಜಿ ಭದ್ರತಾ ವಿಭಾಗದ ಅಧಿಕಾರಿಗಳು, ಸ್ಥಳೀಯ ಪೊಲೀಸರ ತಂಡ ಸಿದ್ಧತೆಯ ಬಗ್ಗೆ ವಿಶೇಷ ನಿಗಾವಹಿಸಿವೆ.
ಲಾಲ್‌ಬಾಗ್, ಪಿವಿಎಸ್ ವೃತ್ತದ ಮಾರ್ಗವಾಗಿ ನವಭಾರತ ಸರ್ಕಲ್‌ವರೆಗೆ ರೋಡ್ ಶೋ ಮಾರ್ಗವನ್ನು ನಿಗದಿಪಡಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಈ ವ್ಯಾಪ್ತಿಯಲ್ಲಿರುವ ಎಲ್ಲ ಕಟ್ಟಡಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪ್ರತಿ ಕಟ್ಟಡ, ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳು, ಉದ್ಯೋಗದಲ್ಲಿರುವವರ ಗುರುತುಪತ್ರ, ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಮಾರ್ಗದುದ್ದಕ್ಕೂ ಬ್ಯಾರಿಕೇಡ್ ಅಳವಡಿಸಲಾಗಿದೆ.
ಕರಾವಳಿಯ ಕಲೆ ಪ್ರದರ್ಶನ: ಮೋದಿ ಅವರಿಗೆ ಕರಾವಳಿಯ ವಿಶೇಷತೆ ಪರಿಚಯಿಸುವ ಉದ್ದೇಶದಿಂದ ರಸ್ತೆ ಬದಿಯಲ್ಲಿ ಅಲ್ಲಿಲ್ಲಿ ಸಣ್ಣ ವೇದಿಕೆ ನಿರ್ಮಿಸಿಲು ಸಿದ್ಧತೆ ನಡೆಯುತ್ತಿದೆ. ಮೋದಿ ಅವರು ತೆರೆದ ವಾಹನದಲ್ಲಿ ಸಾಗುವಾಗ ರಸ್ತೆ ಬದಿಯಲ್ಲಿ ನಿರ್ಮಿಸಿರುವ ವೇದಿಕೆಗಳಲ್ಲಿ ಕಂಬಳದ ಚಿತ್ರಣ, ತುಳುನಾಡಿನ ಪಿಲಿ ವೇಷ, ದೈವಾರಾಧನೆಯ ದೃಶ್ಯಗಳನ್ನು ಪ್ರದರ್ಶಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.