ADVERTISEMENT

ಅಪಾಯಕ್ಕೆ ಬಾಯ್ತೆರೆದ ಕಲ್ಲು ಕ್ವಾರಿ, ಆಳ ಹೊಂಡಗಳು

ಸತೀಶ್ ಕೊಣಾಜೆ
Published 28 ಆಗಸ್ಟ್ 2018, 14:35 IST
Last Updated 28 ಆಗಸ್ಟ್ 2018, 14:35 IST
28ಎಂಡಿಪಿ1/ ಕಲ್ಲುಕ್ವಾರಿಯಲ್ಲಿ ಮಕ್ಕಳು ಈಜಾಟ ನಡೆಸುತ್ತಿರುವುದು.
28ಎಂಡಿಪಿ1/ ಕಲ್ಲುಕ್ವಾರಿಯಲ್ಲಿ ಮಕ್ಕಳು ಈಜಾಟ ನಡೆಸುತ್ತಿರುವುದು.   

ಮುಡಿಪು: ಈ ಬಾರಿ ಭಾರಿ ಮಳೆಯಿಂದಾಗಿ ಹಲವಾರು ಅವಘಡಗಳು ಸಂಭವಿಸಿವೆ. ಈ ಮಧ್ಯೆ ಗ್ರಾಮೀಣ ಪ್ರದೇಶಗಳಲ್ಲಿ ಕೆಂಪು ಕಲ್ಲಿನ ಕ್ವಾರಿಗಳು, ಇತರ ಆಳವಾದ ಹೊಂಡಗಳು ನೀರು ತುಂಬಿಕೊಂಡು ಬಾಯ್ತೆರೆದು ನಿಂತಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಮುಡಿಪು ಸಮೀಪದ ಬಾಳೆಪುಣಿ ಗ್ರಾಮದ ಹೂಹಾಕುವಕಲ್ಲು ಎಂಬಲ್ಲಿನ ನವಗ್ರಾಮ ಸೈಟ್ ಬಳಿ ಕಾರ್ಯಸ್ಥಗಿತಗೊಂಡಿರುವ ಹಲವು ಕಲ್ಲುಕ್ವಾರಿಗಳಿವೆ. ಈ ಆಳವಾದ ಕಲ್ಲುಕ್ವಾರಿಗಳಲ್ಲಿ ಇದೀಗಅಪಾಯಮಟ್ಟದಲ್ಲಿ ನೀರು ತುಂಬಿ ಹರಿಯುತ್ತಿದೆ. ತಡೆಗೋಡೆ ಇಲ್ಲದ ಈ ಕಲ್ಲುಕ್ವಾರಿಗಳ ನಡುವೆ ಜನರು ಸಂಚರಿಸುವ ರಸ್ತೆಯೂ ಇದೆ. ಇವುಗಳಲ್ಲಿ ರೋಗಕಾರಕ ತ್ಯಾಜ್ಯ ಸುರಿದಿದ್ದರೂ ಯುವಕರು, ಮಕ್ಕಳಿಗೆ ಈಜುಕೊಳವಾಗಿಯೂ ರೂಪುಗೊಂಡಿರುವುದು ಅಪಾಯದ ಪ್ರಮಾಣವನ್ನು ಹೆಚ್ಚಿಸಿದೆ.

ಕೆಂಪುಕಲ್ಲು ಕ್ವಾರಿಗಳು: ಮುಡಿಪು ಪರಿಸರದಲ್ಲಿ ಸಿಗುವ ಕೆಂಪುಕಲ್ಲುಗಳಿಗೆ ಹಿಂದೆಲ್ಲ ಭಾರಿ ಬೇಡಿಕೆ ಇತ್ತು. 15-20 ವರ್ಷಗಳ ಹಿಂದೆ ಈ ಪರಿಸರದಲ್ಲಿ ಕೆಂಪುಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿತ್ತು. ಸರ್ಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿಯೂ ಇದು ನಿರಂತರವಾಗಿ ನಡೆಯುತ್ತಿದ್ದವು. ಸಮಸ್ಯೆಗಳು ಎದುರಾದಾಗ ಇಲ್ಲಿಯ ಕಲ್ಲುಕ್ವಾರಿಗಳನ್ನು ಸ್ಥಗಿತವಾಗಿದ್ದುವು. ಇದೀಗ ಇಲ್ಲಿರುವ ಹಲವು ಕ್ವಾರೆಗಳಿಗೆ ಮಣ್ಣು ತುಂಬಿದ್ದರೂ ನವಗ್ರಾಮ ಸೈಟ್ ಬಳಿನೀರು ತುಂಬಿಕೊಂಡು ಬಾಯ್ತೆರೆದು ನಿಂತಿದೆ.

ADVERTISEMENT

ನೀರಿನಲ್ಲಿ ತ್ಯಾಜ್ಯ ರಾಶಿ: ಕಳೆದ ಹಲವಾರು ವರ್ಷಗಳಿಂದ ಕಾರ್ಯಸ್ಥಗಿತ ಗೊಂಡು ಹಾಗೇ ಉಳಿದುಕೊಂಡಿರುವ ಆಳವಾದ ಕಲ್ಲುಕ್ವಾರಿಗಳಲ್ಲಿ ಇದೀಗ ಮಳೆ ನೀರು, ತ್ಯಾಜ್ಯದ ರಾಶಿಯೂ ತುಂಬಿಕೊಂಡಿದೆ. ಇಲ್ಲಿಯೇ ಕೆಲವು ಕೊಳಚೆ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಇದರಿಂದ ನವಗ್ರಾಮ ಸೈಟ್ ಬಳಿಯ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ.

ಮಕ್ಕಳ ಈಜಾಟ: ಮಳೆಗಾಲವಾಗಿರುವುದರಿಂದ ಇಲ್ಲಿಯ ಕಲ್ಲುಕ್ವಾರಿಗಳು ನೀರಿನಿಂದ ತುಂಬಿ ಹರಿಯುತ್ತಿವೆ. ಕೆಲವು ಕ್ವಾರಿಗಳು ಸುಮಾರು 15 ಅಡಿಗಳಷ್ಟು ಆಳ ಇವೆ. ಯುವಕರು , ಸಣ್ಣ ಸಣ್ಣ ಮಕ್ಕಳು ಕೂಡಾ ಈಜಾಟ ನಡೆಸುತ್ತಿದ್ದಾರೆ. ವರ್ಷಗಳ ಹಿಂದೆ ಇಲ್ಲಿಯ ಕಲ್ಲುಕ್ವಾರಿಯಲ್ಲಿ ಯುವಕ ಬಿದ್ದು ಅವಘಡ ಸಂಭವಿಸಿತ್ತು ಎಂದು ನೆನಪಿಸುತ್ತಾರೆ.

ಸ್ಥಳೀಯಾಡಳಿತ ಕ್ರಮ: ಮುಡಿಪು ವ್ಯಾಪ್ತಿಯ ಇರಾ, ಬಾಳೆಪುಣಿ, ನರಿಂಗಾನ ಗ್ರಾಮ ಸೇರಿದಂತೆ ಹಲವಾರು ಕಡೆ ಇಂತಹ ತೆರದುಕೊಂಡಿದ್ದ ಕಲ್ಲುಕ್ವಾರಿಗಳಿಗೆ ಬಿದ್ದು ಹಲವು ಪ್ರಾಣಾಪಾಯ ಸಂಭವಿಸಿದ ಉದಾಹರಣೆಗಳಿವೆ.

ತೆರೆದ ನಿಷ್ಕ್ರಿಯ ಕಲ್ಲುಕ್ವಾರಿಗಳನ್ನು ಮುಚ್ಚುವಂತೆ ಅಥವಾ ತಡೆಗೋಡೆ ನಿರ್ಮಿಸುವಂತೆ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿತ್ತು. ಆದರೂ ಕೂಡಾ ಈ ಕಾನೂನು ಕ್ರಮಗಳನ್ನು ಗಾಳಿಗೆ ತೂರಿ ಇನ್ನೂ ಕೂಡಾ ಹಲೆವೆಡೆ ಇಂತಹ ತಡೆಗೋಡೆಯಿಲ್ಲದೆ ನೀರು ತುಂಬಿಕೊಂಡಿರುವ ಕಲ್ಲುಕ್ವಾರಿಗಳಿದ್ದು ಪ್ರಾಣಾಪಾಯ ಸಂಭವಿಸುವ ಮುನ್ನ ಸ್ಥಳಿಯಾಡಳಿತ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ಹಾಗೂ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲುಕ್ವಾರಿಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.