ADVERTISEMENT

ಮಂಗಳೂರು: ಸೇಕ್ರೆಡ್ ಹಾರ್ಟ್ಸ್ ಶಾಲೆಯಲ್ಲಿ ರೇಬಿಸ್ ‘ಪಾಠ’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 4:29 IST
Last Updated 9 ನವೆಂಬರ್ 2024, 4:29 IST
<div class="paragraphs"><p>ಜಿಲ್ಲಾ ಮುಖ್ಯ ಪಶುವೈದ್ಯಾಧಿಕಾರಿ ಡಾ.ವಸಂತ ಕುಮಾರ್ ಶೆಟ್ಟಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು </p></div>

ಜಿಲ್ಲಾ ಮುಖ್ಯ ಪಶುವೈದ್ಯಾಧಿಕಾರಿ ಡಾ.ವಸಂತ ಕುಮಾರ್ ಶೆಟ್ಟಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು

   

ಪ್ರಜಾವಾಣಿ ಚಿತ್ರ

ಮಂಗಳೂರು: ರೇಬಿಸ್ ಕಾಯಿಲೆ ಬರುವುದು ಹೇಗೆ, ಬಂದ ನಂತರ ಅದು ಮನುಷ್ಯ ಅಥವಾ ಪ್ರಾಣಿಗಳನ್ನು ಯಾವ ರೀತಿ ಬಾಧಿಸುತ್ತದೆ, ಕಾಯಿಲೆಯನ್ನು ತಡೆಗಟ್ಟಬಹುದೇ...?

ADVERTISEMENT

ಕುಲಶೇಖರದ ಸೇಕ್ರೆಡ್ ಹಾರ್ಟ್ಸ್ ಹೈಸ್ಕೂಲ್‌ನಲ್ಲಿ 'ಪ್ರಜಾವಾಣಿ' ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹ‌, ನೀರುಮಾರ್ಗ ಸೇವಾ ಸಹಕಾರಿ ನಿಯಮಿತದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ದಿಕ್ಸೂಚಿ’ ಕಾರ್ಯಕ್ರಮದಲ್ಲಿ ಈ ಎಲ್ಲ ಪ್ರಶ್ನೆಗಳಿಗೆ ಸವಿಸ್ತಾರವಾದ ಉತ್ತರ ಸಿಕ್ಕಿತು. ಜಿಲ್ಲಾ ಮುಖ್ಯ ಪಶುವೈದ್ಯಾಧಿಕಾರಿ ಡಾ.ವಸಂತ ಕುಮಾರ್ ಶೆಟ್ಟಿ ಅವರಿಂದ ‘ಪಾಠ’ ಕೇಳಿಸಿಕೊಂಡ ವಿದ್ಯಾರ್ಥಿಗಳು ಖುಷಿಪಟ್ಟರು.

‘ಸಾಕುಪ್ರಾಣಿಗಳೆಲ್ಲವೂ ಮೂಲತಃ ವನ್ಯಜೀವಿಗಳು. ಈಗ ಅವುಗಳೆಲ್ಲವೂ ಮನುಷ್ಯನಿಗೆ ಹತ್ತಿರವಾಗಿವೆ. ಕೆಲವರಿಗೆ ಅವುಗಳನ್ನು ಬಿಟ್ಟು ಇರಲು ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದರೆ ಸಾಂಕ್ರಾಮಿಕ ರೋಗಗಳ ಪೈಕಿ ಹೆಚ್ಚಿನವು ಸಾಕುಪ್ರಾಣಿಗಳಿಂದ ಹರಡುತ್ತವೆ ಎಂಬುದನ್ನು ಮರೆಯಬಾರದು’ ಎಂದು ಹೇಳಿದ ಅವರು ‘ರೇಬಿಸ್ ಬಗ್ಗೆ ಶಾಲೆಗಳಲ್ಲಿ ಅರಿವು ಮೂಡಿಸಲು ಸರ್ಕಾರ ವಿಶೇಷ ಯೋಜನೆ ಹಮ್ಮಿಕೊಂಡಿದೆ’ ಎಂದರು.

‘ರೇಬಿಸ್ ಕಾಡಿದರೆ ಔಷಧಿ ಇಲ್ಲ. ಆದ್ದರಿಂದ ಸಾವು ಖಚಿತ. ಹೀಗಾಗಿ ಪ‍್ರಾಣಿಗಳು ಕಡಿಯದಂತೆ ಅಥವಾ ಪರಚದಂತೆ ಎಚ್ಚರ ವಹಿಸಬೇಕು. ಕಡಿದರೂ ಪರಚಿದರೂ ರೇಬಿಸ್ ಬಗ್ಗೆ ಸಂದೇಹ ಇದ್ದರೆ ಲಸಿಕೆ ಪಡೆದುಕೊಳ್ಳಲು ತಡಮಾಡಬಾರದು. ರೇಬಿಸ್ ಇದ್ದ ಪ್ರಾಣಿಗಳು ಹತ್ತು ದಿನಗಳ ಒಳಗೆ ಸಾಯುತ್ತವೆ. ಅದಕ್ಕೂ ಮೊದಲು ಕೆಲವು ವಿಚಿತ್ರ ವರ್ತನೆ ತೋರುತ್ತವೆ. ಆಹಾರ ಸೇವಿಸದೇ ಇರುವುದು ಮೊದಲ ಲಕ್ಷಣ. ಪರಿಚಿತರು ಕರೆದಾಗ ಹತ್ತಿರ ಬಾರದೇ ಇದ್ದರೆ, ನಿತ್ಯವೂ ಜೊತೆ ಇರುವ ಇತರ ಪ್ರಾಣಿಗಳನ್ನು ಕಚ್ಚಿದರೆ, ಸಮೀಪದಲ್ಲಿ ಸಿಗುವ ವಸ್ತುಗಳನ್ನು ಕಡಿದರೆ ರೇಬಿಸ್ ಇದೆ ಎಂದು ಸಂದೇಹಪಡಬೇಕು’ ಎಂದು ಅವರು ಹೇಳಿದರು. 

‘ರೇಬಿಸ್ ವೈರಾಣು ಮೊದಲು ನರಮಂಡಲವನ್ನು ಕಾಡುತ್ತದೆ. ನಂತರ ನಿಧಾನವಾಗಿ ಮಿದುಳು ಪ್ರವೇಶಿಸುತ್ತದೆ. ಗಂಟಲ ಸ್ನಾಯುಗಳಿಗೆ ಪಾರ್ಶ್ವವಾಯು ಬಡಿಯುವುದರಿಂದ ಆಹಾರ ಮತ್ತು ಎಂಜಲು ನುಂಗುವುದು ಕಷ್ಟವಾಗುತ್ತದೆ. ಆದ್ದರಿಂದ ರೇಬಿಸ್ ಬಾಧಿಸಿದ ಪ್ರಾಣಿಗಳು ಮೂರನೇ ದಿನದಿಂದ ಜೊಲ್ಲು ಸುರಿಸಲು ಶುರುಮಾಡುತ್ತವೆ. ರೇಬಿಸ್ ಇದ್ದರೆ ಯಾವುದೇ ಪ್ರಾಣಿಯೂ ವಿಶಿಷ್ಟ ರೀತಿಯಲ್ಲಿ ಕೂಗುತ್ತದೆ’ ಎಂದು ಡಾ.ವಸಂತ ಕುಮಾರ್ ಶೆಟ್ಟಿ ವಿವರಿಸಿದರು.

‘ರೇಬಿಸ್‌ಗೆ ವೈರಾಣು ಕಾರಣ. ಬಿಸಿರಕ್ತದ ಎಲ್ಲ ಪ್ರಾಣಿಗಳಿಗೂ ಈ ಕಾಯಿಲೆ ಕಾಡುತ್ತದೆ. ಜೊಲ್ಲಿನಲ್ಲಿ ರೋಗಾಣು ಇರುವುದರಿಂದ ಕಾಯಿಲೆ ಬೇಗ ಹರಡುತ್ತದೆ’ ಎಂದು ಹೇಳಿದ ಅವರು ‘ನಾಯಿಗಳು ಸುಮ್ಮನೇ ಯಾರನ್ನೂ ಕಡಿಯುವುದಿಲ್ಲ. ಪ್ರಾಣಿಗಳು ಕಡಿದರೆ ಅಥವಾ ಪರಚಿದರೆ ಸೋಪ್ ಬಳಸಿ ಕನಿಷ್ಠ 10 ನಿಮಿಷ ಗಾಯವನ್ನು ತೊಳೆಯಬೇಕು. ಬಂದೂಕಿನ ಗುಂಡಿನಂತಿರುವ ರೇಬಿಸ್ ವೈರಸ್‌ ಮೇಲಿನ ಆವರಣ ಸೋಪ್‌ ನೀರು ತಾಗಿದರೆ ಬಿಟ್ಟುಬಿಡುತ್ತದೆ’ ಎಂದು ಅವರು ತಿಳಿಸಿದರು.

ಮುಖ್ಯ ಶಿಕ್ಷಕಿ ಸಿಸ್ಟರ್ ಸಿಂಥಿಯಾ ಡಿಕುನ್ನ ಮತ್ತು ‘ಪ್ರಜಾವಾಣಿ’ ಪ್ರಸರಣ ವಿಭಾಗದ ಲಾರೆನ್ಸ್ ಇದ್ದರು. ಶಿಕ್ಷಕಿ ಕವಿತಾ ನಿರೂಪಿಸಿದರು.‌ ಪ್ರಿನ್ಸಿಟಾ ನೇತೃತ್ವದ ವಿದ್ಯಾರ್ಥಿನಿಯರ ತಂಡದವರು ಪ್ರಾರ್ಥನೆ ಹಾಡಿದರು. 

ಪಠ್ಯದಲ್ಲಿ ರೋಗಗಳ ಬಗ್ಗೆ ಮತ್ತು ವೈರಾಣುಗಳ ಕುರಿತು ಮಾಹಿತಿ ಇದ್ದರೂ ತಜ್ಞರು ಶಾಲೆಗೇ ಬಂದು ವಿವರ ನೀಡುವುದರಿಂದ ವಿದ್ಯಾರ್ಥಿಗಳ ಅರಿವು ವಿಸ್ತಾರವಾಗುತ್ತದೆ. ಈ ನಿಟ್ಟಿನಲ್ಲಿ ಇದು ಅತ್ಯುತ್ತಮ ಕಾರ್ಯಕ್ರಮವಾಗಿತ್ತು.
ಸಿಸ್ಟರ್ ಸಿಂಥಿಯಾ ಡಿ’ಕುನ್ನ ಶಾಲೆಯ ಮುಖ್ಯ ಶಿಕ್ಷಕಿ
ರೇಬಿಸ್ ಕಾಯಿಲೆ ನಾಯಿಗಳಿಂದ ಮಾತ್ರ ಬರುತ್ತದೆ ಎಂಬ ತಪ್ಪು ತಿಳಿವಳಿಕೆ ನನ್ನಲ್ಲಿತ್ತು. ಬೇರೆ ಪ್ರಾಣಿಗಳಿಂದ ಇದು ಬರುತ್ತದೆ ಎಂಬುದು ವೈದ್ಯರು ನೀಡಿದ ಮಾಹಿತಿಯಿಂದ ತಿಳಿಯಿತು. ಕಾರ್ಯಕ್ರಮ ಖುಷಿ ನೀಡಿತು.
ಸೂರ್ಯ ಆರ್ 10ನೇ ತರಗತಿ ವಿದ್ಯಾರ್ಥಿ
ನಾಯಿಯನ್ನು ಕಂಡರೆ ಓಡಬಾರದು ಅಥವಾ ಕೆಣಕಬಾರದು ಎಂದು ತಿಳಿಸಿದ್ದು ಒಳ್ಳೆಯದಾಯಿತು. ಇಂಥ ವಿಷಯಗಳು ತಿಳಿದಿರುವುದಿಲ್ಲ. ರೇಬಿಸ್‌ ಇದ್ದ ಪ್ರಾಣಿ ಕಚ್ಚಿದರೆ ಹೇಗೆ ಕಾಡುತ್ತದೆ ಎಂಬ ಮಾಹಿತಿ ಉಪಯುಕ್ತವಾಗಿತ್ತು.
ಅನನ್ಯಾ 9ನೇ ತರಗತಿ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.