ADVERTISEMENT

ಗುಂಡ್ಯದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 5:49 IST
Last Updated 16 ನವೆಂಬರ್ 2024, 5:49 IST
ಕಡಬ ತಾಲ್ಲೂಕಿನ ಗುಂಡ್ಯದಲ್ಲಿ ಪ್ರತಿಭಟನಾ ಸಭೆ, ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ನಡೆಯಿತು
ಕಡಬ ತಾಲ್ಲೂಕಿನ ಗುಂಡ್ಯದಲ್ಲಿ ಪ್ರತಿಭಟನಾ ಸಭೆ, ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ನಡೆಯಿತು   

ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ, ಬೆಳ್ತಂಗಡಿ ತಾಲ್ಲೂಕಿನ ಬಾಧಿತ ಗ್ರಾಮಗಳ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಕಡಬ ತಾಲ್ಲೂಕಿನ ಗುಂಡ್ಯದಲ್ಲಿ ಶುಕ್ರವಾರ ಪ್ರತಿಭಟನಾ ಸಭೆ, ರಾಷ್ಟ್ರೀಯ ಹೆದ್ದಾರಿ ಶುಕ್ರವಾರ ನಡೆಸಿದರು.

ಅರಣ್ಯ ಇಲಾಖೆಯವರು ತಮ್ಮಲ್ಲಿರುವ ಅರಣ್ಯ ಪ್ರದೇಶದಲ್ಲಿ ಗಿಡ ನೆಟ್ಟು ಕಾಡು ಬೆಳೆಸಲಿ. ಅದು ಬಿಟ್ಟು ಕೃಷಿಕರ ಜಮೀನನ್ನು ಪಡೆಯುವ ಕೆಲಸಕ್ಕೆ ಕೈ ಹಾಕುವುದು ಖಂಡನೀಯ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ, ಗಡಿ ಗುರುತು ಮಾಡುವ ಕೆಲಸ ಮಾಡಲಿ ಎಂದ, ಅವರು ಮುಂದಿನ ಅಧಿವೇಶನದಲ್ಲಿ ಈ ಭಾಗದ ಶಾಸಕರು ಇದರ ವಿರುದ್ಧ ಧ್ವನಿ ಎತ್ತುತ್ತೇವೆ. ಕಸ್ತೂರಿ ರಂಗನ್ ವರದಿ ವಿರುದ್ಧ ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದರು.

ADVERTISEMENT

ಸಕಲೇಶಪುರ ಶಾಸಕ ಸಿಮೆಂಟ್‌ ಮಂಜು ಮಾತನಾಡಿ, ಅರಣ್ಯ, ಪರಿಸರವನ್ನು ಮಲೆನಾಡಿನ ಜನ ಉಳಿಸಿದ್ದಾರೆ. ಅರಣ್ಯ ಇಲಾಖೆ ಕೃಷಿಕರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದೆ. ಕಸ್ತೂರಿ ರಂಗನ್ ವರದಿಯನ್ನೂ ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡವುದಿಲ್ಲ. ಇದೇ ಹಕ್ಕೋತ್ತಾಯವನ್ನು ಅರಣ್ಯ ಸಚಿವರಲ್ಲೂ ಸಲ್ಲಿಸಿದ್ದೇವೆ, ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇವೆ ಎಂದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಇಂದು ನಾವು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದು, ಜ.15ರ ಮೊದಲು ಈ ಭಾಗದಲ್ಲಿ ಜಂಟಿ ಸರ್ವೆ ನಡೆಸಿ ಗಡಿ ಗುರುತು ಮಾಡಬೇಕು. ಇಲ್ಲದೆ ಇದ್ದರೆ ಗುಂಡ್ಯದಲ್ಲಿ ರಸ್ತೆ ತಡೆ ನಡೆಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಪ್ರಮುಖರಾದ ಆದರ್ಶ ಗುತ್ತಿಗಾರು, ಶಿಬಿ ಮುಂಡಾಜೆ, ಜೋಸೆಫ್ ಶಿರಾಡಿ, ವೆಂಕಪ್ಪ ಗೌಡ ಸುಳ್ಯ, ಎ.ವಿ.ತೀರ್ಥರಾಮ, ಸಯ್ಯದ್ ಮೀರಾ ಸಾಹೇಬ್, ಕೃಷ್ಣ ಶೆಟ್ಟಿ ಕಡಬ, ಪಿ.ಪಿ.ವರ್ಗಿಸ್, ಸರ್ವೋತ್ತಮ ಗೌಡ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಆಶಾ ತಿಮ್ಮಪ್ಪ ಗೌಡ, ಮಹ್ಮದ್ ಅಲಿ, ಸುಧೀರ್ ಕುಮಾರ್, ವೆಂಕಟ್ ವಳಲಂಬೆ, ಸಂಜೀವ ಮಠಂದೂರು, ವರ್ಗಿಸ್‌, ಸೋಯಿ ವರ್ಗಿಸ್‌ ಭಾಗವಹಿಸಿದ್ದರು. ಧನಂಜಯ ಕೋಡಂಗೆ ಸ್ವಾಗತಿಸಿದರು. ಹರಿಣಿ ಪುತ್ತೂರಾಯ, ವಿನಯಕುಮಾರಿ ಬಳಕ್ಕ ಕಾರ್ಯಕ್ರಮ ನಿರೂಪಿಸಿದರು.

ಮನವಿ ಸ್ವೀಕರಿಸಲು ಮೇಲಧಿಕಾರಿಗಳು ಬರಬೇಕು ಇಲ್ಲವೇ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಎಚ್ಚರಿಸಲಾಯಿತು. ಬಳಿಕ ಪ್ರತಿಭಟನಕಾರರು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಜಂಕ್ಷನ್‌ಗೆ ಬಂದು ಹೆದ್ದಾರಿಯಲ್ಲಿ ಕುಳಿತರು. ಪೊಲೀಸರು ಹೆದ್ದಾರಿ ತಡೆ ನಡೆಸದಂತೆ ಮನವಿ ಮಾಡಿದರೂ ಪ್ರತಿಭಟನಕಾರರು ಲೆಕ್ಕಿಸದೆ ಹೆದ್ದಾರಿಯಲ್ಲೇ ಕುಳಿತು ವರದಿ ವಿರುದ್ಧ ಘೋಷಣೆ ಕೂಗಿದರು.

ಸುಮಾರು 1 ಗಂಟೆ ಸಮಯ ಬೆಂಗಳೂರು– ಮಂಗಳೂರು ಹಾಗೂ ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಬಂದ ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಮನವಿ ಸ್ವೀಕರಿಸಿ, ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುವ ಭರವಸೆ ನೀಡಿದರು.  ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಜತೆಗಿದ್ದರು. ಉಪ್ಪಿನಂಗಡಿ ಸಿಪಿಐ ರವಿ ಬಿ.ಎಸ್. ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಡಬ ತಾಲ್ಲೂಕಿನ ಗುಂಡ್ಯದಲ್ಲಿ ಪ್ರತಿಭಟನಾ ಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ನಡೆಯಿತು
ಕಡಬ ತಾಲ್ಲೂಕಿನ ಗುಂಡ್ಯದಲ್ಲಿ ಪ್ರತಿಭಟನಾ ಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.