ಮಂಗಳೂರು: ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ಹಾಗೂ ಹಿಂಸೆ ನೀಡಿರುವ ಆರೋಪ ಹೊತ್ತಿರುವ ಬಿಜೆಪಿಯ ಸಂಸದ ಬ್ರಿಜ್ ಭೂಷಣ್ ಸಿಂಗ್ ಮತ್ತು ಹರಿಯಾಣದ ಬಿಜೆಪಿ ನೇತೃತ್ವದ ಸರ್ಕಾರದ ಸಚಿವ ಸಂದೀಪ್ ಸಿಂಗ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಇಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಲೈಂಗಿಕ ಕಿರುಕುಳ ಖಂಡಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ಮಹಿಳಾ ಕ್ರೀಡಾಪಟುಗಳನ್ನು ಬೆಂಬಲಿಸಿ ರೈತ ಕಾರ್ಮಿಕ ಕೃಷಿ ಕೂಲಿಕಾರರು, ವಿದ್ಯಾರ್ಥಿ, ಯುವಜನ, ಮಹಿಳಾ, ದಲಿತ ಆದಿವಾಸಿ ಸಂಘಟನೆಗಳ ನೇತೃತ್ವದಲ್ಲಿ ದೇಶದಾದ್ಯಂತ ಗುರುವಾರ ನಡೆದ ಪ್ರತಿಭಟನೆಯ ಅಂಗವಾಗಿ ಇಲ್ಲಿ ಸಮಾನ ಮನಸ್ಕ ಸಂಘಟನೆಗಳು ಬೀದಿಗಿಳಿದವು.
ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ‘ದೇಶದ ಘನತೆ ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ಮಹಿಳಾ ಕ್ರೀಡಾಪಟುಗಳ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ದೇಶದಲ್ಲಿ ಮಹಿಳೆಯರ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. ಬೇಟಿ ಬಚಾವೋ ಬೇಟಿ ಪಢಾವೋ ಘೋಷಣೆ ಮಾಡಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಕ್ರೀಡಾಪಟುಗಳ ಮೇಲಿನ ದೌರ್ಜನ್ಯದ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು
ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ‘ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಅನೇಕ ಪದಕಗಳನ್ನು ತಂದು ಕೊಟ್ಟ ಮಹಿಳಾ ಕುಸ್ತಿಪಟುಗಳ ಸಾಧನೆಯನ್ನು ಇಡೀ ದೇಶವೇ ಕೊಂಡಾಡಿದೆ. ಇಂತಹ ಸಾಧಕಿಯರ ಮೇಲೆಯೇ ಲೈಂಗಿಕ ಕಿರುಕುಳ ನಡೆದರೆ ಕ್ರೀಡಾ ಕ್ಷೇತ್ರದ ಮುಂದಿನ ಪರಿಸ್ಥಿತಿಯೇನು’ ಎಂದು ಪ್ರಶ್ನಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ ಸಾಲಿಯಾನ್, ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಜಯಂತಿ ಶೆಟ್ಟಿ ಮಾತನಾಡಿದರು.
ಸಿಐಟಿಯು ಪ್ರಮುಖರಾದ ಜೆ.ಬಾಲಕೃಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೋಗರು, ಸುಕುಮಾರ್, ಪದ್ಮಾವತಿ ಶೆಟ್ಟಿ, ರಾಧಾ ಮೂಡುಬಿದಿರೆ, ಯು.ಬಿ.ಲೋಕಯ್ಯ, ಜಯಂತ ನಾಯಕ್, ಮುಸ್ತಫಾ, ರೈತ ಸಂಘದ ಸದಾಶಿವದಾಸ್, ಡಿವೈಎಫ್‌ಐ ಪ್ರಮುಖರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ತಯ್ಯುಬ್ ಬೆಂಗ್ರೆ, ಮನೋಜ್ ವಾಮಂಜೂರು, ಮಹಿಳಾ ಸಂಘಟನೆಗಳ ಪ್ರಮುಖರಾದ ಭಾರತಿ ಬೋಳಾರ, ಜಯಲಕ್ಷ್ಮಿ, ಭವಾನಿ ವಾಮಂಜೂರು, ಲಕ್ಷ್ಮಿ ಮೂಡುಬಿದಿರೆ, ವಿಲಾಸಿನಿ ತೊಕ್ಕೊಟ್ಟು, ಯೋಗಿತಾ ಉಳ್ಳಾಲ, ಮುಖಂಡರಾದ ಬಿ.ಎಂ ಮಾಧವ, ವಾಸುದೇವ ಉಚ್ಚಿಲ್, ದಯಾನಂದ ಶೆಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.