ಉಳ್ಳಾಲ:‘ತೊಕ್ಕೊಟ್ಟಿನ ಚೆಂಬುಗುಡ್ಡೆಯ ರಸ್ತೆ ಅಪಘಾತದಲ್ಲಿ ಮಹಿಳೆ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕೆಲವರು ಪ್ರತಿಭಟನೆ ನಡೆಸಿ, ಸಾವಿನ ವಿಷಯದಲ್ಲೂ ರಾಜಕೀಯ ಮಾಡಿದ್ದಾರೆ. ಕೆಲವರಿಗೆ ಬದುಕಲು ಪ್ರತಿಭಟನೆ ಅನಿವಾರ್ಯ. ಅವರಿಗೆ ಅದು ಆಹಾರವಿದ್ದಂತೆ’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು.
ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಬೈಲ್ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕೆಲವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರತಿಭಟನೆ ಮಾಡುತ್ತಾ ಇರುತ್ತಾರೆ. ಆದರೆ, ಪ್ರತಿಭಟನೆ ನೆಪದಲ್ಲಿ ರಾಜಕೀಯ ಮಾಡಬೇಡಿ. ನಿಮ್ಮ ಸಮಸ್ಯೆ ಏನಿದ್ದರೂ ನನ್ನಲ್ಲಿ ಹೇಳಿ. ಬಗೆಹರಿಸದಿದ್ದರೆ ಟೀಕಿಸಿ. ಚೆಂಬುಗುಡ್ಡೆ ರಸ್ತೆ ದುರಸ್ತಿ ಮಾಡುವಂತೆ ಮಳೆಗಾಲದ ಮುನ್ನವೇ ಅಧಿಕಾರಿಗಳಿಗೆ ಸೂಚಿಸಿದ್ದೆ. ರಸ್ತೆ ಬದಿಯಲ್ಲಿ ಮರಗಳಿರುವುದರಿಂದ ಮಳೆ ನೀರು ರಸ್ತೆಗೆ ಹರಿದು ಹೊಂಡ ಸೃಷ್ಟಿಯಾಗಿದೆ. ಇದು ಸಹಜ ಪ್ರಕ್ರಿಯೆ. ಮಳೆಗಾಲದಲ್ಲಿ ರಸ್ತೆಗೆ ಹಾಕಲು ಡಾಂಬರು ಸಿಗುವುದಿಲ್ಲ. ರಸ್ತೆ ಗುಂಡಿಗೆ ಜಲ್ಲಿಕಲ್ಲು ,ಜಲ್ಲಿ ಪುಡಿ ಹಾಕಲಾಗುತ್ತದೆ. ಮಳೆ ಸುರಿದು ಜಲ್ಲಿ ಕಲ್ಲುಗಳು ನೀರಿನಲ್ಲಿ ಕೊಚ್ಚಿ ಹೋಗಿ ರಸ್ತೆ ಹದಗೆಟ್ಟಿದೆ’ ಎಂದರು.
ವಿದೇಶ ಸುತ್ತೋದರಲ್ಲಿ ಮೋದಿ ಬಳಿಕ ನನಗೆ ಎರಡನೇ ಸ್ಥಾನವನ್ನು ಟೀಕಾಕಾರರು ಕೊಟ್ಟಿದ್ದಾರೆ. ಜನರಿಂದ ಆಯ್ಕೆಯಾಗಿ ಸ್ಪೀಕರ್ ಆಗಿ ನನ್ನ ಕ್ಷೇತ್ರ,ರಾಜ್ಯ, ದೇಶದ ಪ್ರತಿನಿಧಿಯಾಗಿ ವಿದೇಶಕ್ಕೆ ಹೋಗಿದ್ದೇನೆ. ನಿಮಗೂ ಇಷ್ಟ ಇದ್ದರೆ ಜನರಿಂದ ಆಯ್ಕೆಯಾಗಿ ವಿದೇಶಗಳಲ್ಲಿ ತಿರುಗಾಡಿ’ ಎಂದರು
ರಸ್ತೆ ಅಪಘಾತದಲ್ಲಿ ಮಹಿಳೆ ಮೃತಪಟ್ಟ ಘಟನೆಗೆ ಯು.ಟಿ ಖಾದರ್ ಅವರೇ ಕಾರಣ ಎಂದು ಆರೋಪಿಸಿ ಡಿವೈಎಫ್‌ಐ ಸಂಘಟನೆಯ ಸದಸ್ಯರು ಚೆಂಬುಗುಡ್ಡೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಮುಖಂಡ ಸುನಿಲ್ ಕುಮಾರ್ ಬಜಾಲ್ ಖಾದರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.