ಮಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ 99.33 ಸಾಧನೆ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿಯೂ ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಸತತವಾಗಿ ಪ್ರಥಮ ಸ್ಥಾನ ಉಳಿಸಿಕೊಂಡು ಜಿಲ್ಲೆ ಸಾಧನೆ ಮಾಡಿದೆ.
ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಕೆ.ಎ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
2020ರಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ ಶೇ90.19 ಆಗಿದ್ದರೆ, 2021ರಲ್ಲಿ ಶೇ100 (ಕೋವಿಡ್ ಸಂದರ್ಭ) ಹಾಗೂ 2022ರಲ್ಲಿ ಶೇ88.02ರಷ್ಟಾಗಿತ್ತು.
‘ಪರೀಕ್ಷೆಗೆ ಸಾಕಷ್ಟು ಮುಂಚಿತವಾಗಿ ಕೈಗೊಳ್ಳುವ ಸಿದ್ಧತೆ, ಪಿಯು ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರ ಕಾಳಜಿಯಿಂದ ಈ ಸಾಧನೆ ಸಾಧ್ಯವಾಗಿದೆ. ಡಿಸೆಂಬರ್‌ನಿಂದ ಎಲ್ಲ ಕಾಲೇಜುಗಳಲ್ಲಿ ಪರೀಕ್ಷೆ ಸಿದ್ಧತೆ ಪ್ರಾರಂಭಿಸುತ್ತಾರೆ. ಉಪನ್ಯಾಸಕರ ಸಂಘದಿಂದ ವಿಷಯವಾರು ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸುವುದು ಹೆಚ್ಚು ಸಹಕಾರಿಯಾಗಿದೆ’ ಎಂದು ಡಿಡಿಪಿಯು ಜಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರಾಂಶುಪಾಲರ ಜತೆ ನಿರಂತರ ಸಭೆ, ಚರ್ಚೆ ನಡೆಸುತ್ತೇವೆ. ಈ ಬಾರಿ ಪ್ರಶ್ನೆಪತ್ರಿಕೆಯಲ್ಲಿ ಬದಲಾವಣೆ ಇದ್ದಿದ್ದರಿಂದ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ಪಡೆದು ಅವರನ್ನು ಪರೀಕ್ಷೆಗೆ ಸಿದ್ಧಪಡಿಸುವುದು ಸವಾಲಿನ ಕೆಲಸವಾಗಿತ್ತು. ಉಪನ್ಯಾಸಕರು ಆ ಕೆಲಸಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ನಾನು ಕೂಡ ಕಾಲೇಜುಗಳಿಗೆ ಭೇಟಿ ನೀಡುತ್ತ, ವಿದ್ಯಾರ್ಥಿಗಳ ಜತೆ ಸಂವಹನ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದೆ. ವಿದ್ಯಾರ್ಥಿಗಳ ಅಭಿಪ್ರಾಯ ಆಧರಿಸಿ, ಅವುಗಳನ್ನು ಪರಿಹರಿಸುವ ಬಗ್ಗೆ ಸಭೆಗಳಲ್ಲಿ ಚರ್ಚಿಸುತ್ತಿದ್ದೆವು’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.