ADVERTISEMENT

ಸಾವರ್ಕರ್‌ ಪೋಟೊ ಹಾಕಿ, ಯಾರು ಕಿತ್ತು ಹಾಕುತ್ತಾರೆ ನೋಡೋಣ: ಚಕ್ರವರ್ತಿ ಸೂಲಿಬೆಲೆ

ಚಕ್ರವರ್ತಿ ಸೂಲಿಬೆಲೆ ಸವಾಲು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 16:12 IST
Last Updated 23 ಆಗಸ್ಟ್ 2022, 16:12 IST
ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು
ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು   

ಮಂಗಳೂರು: ‘ದೇಶಕ್ಕಾಗಿ ಜೀವನವನ್ನೇ ಸಮರ್ಪಿಸಿದ್ದ ವಿನಾಯಕ ದಾಮೋದರ ಸಾವರ್ಕರ್‌ ಭಾವಚಿತ್ರವನ್ನು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆ ಹಾಕಬೇಡಿ ಎಂದು ಸಿದ್ದರಾಮಯ್ಯ ಹೇಳುತ್ತಾರಲ್ಲಾ. ಎಷ್ಟು ದಾರ್ಷ್ಟ್ಯ ಇರಬೇಕು ಅವರಿಗೆ. ಸಾವರ್ಕರ್‌ ಕುರಿತ ಕೃತಿಯನ್ನು ಮನೆ ಮನೆ ಹಂಚೋಣ. ಅವರ ಭಾವಚಿತ್ರವನ್ನು ಎಲ್ಲೆಡೆ ಹಾಕೋಣ. ಅದನ್ನು ಯಾರು ಕಿತ್ತು ಹಾಕುತ್ತಾರೆ ನೋಡೋಣ’ ಎಂದು ಚಕ್ರವರ್ತಿ ಸೂಲಿಬೆಲೆ ಸವಾಲು ಹಾಕಿದರು.

ಇಲ್ಲಿ ಮಂಗಳವಾರ ಆಯೋಜಿಸಿದ್ದ ಚಿಂತನ ಗಂಗಾ ಕಾರ್ಯಕ್ರಮದಲ್ಲಿ ಅವರು ಸಾವರ್ಕರ್‌ ಜೀವನ ಗಾಥೆ ಕುರಿತು ಮಂಗಳವಾರ ಮಾತನಾಡಿದರು.

‘ಸಾವರ್ಕರ್‌ ಬ್ರಿಟಿಷರಲ್ಲಿ ಕ್ಷಮಾಪಣೆ ಕೇಳಿದ್ದಾರೆ. ಅವರು ದೇಶದ್ರೋಹಿ, ಬ್ರಿಟಿಷರ ಏಜೆಂಟ್‌ ಎಂದು ಅವಮಾನ ಮಾಡಲಾಗುತ್ತಿದೆ. ಬ್ರಿಟಿಷರ ಏಜೆಂಟ್‌ ಆಗಿದ್ದರೆ ಅವರನ್ನು ಅಂಡಮಾನ್‌ ಜೈಲಿನಿಂದ 1922ರಲ್ಲಿ ಬಿಡುಗಡೆ ಮಾಡಿದ ಬಳಿಕವೂ ರತ್ನಗಿರಿ ಜಿಲ್ಲೆ ಬಿಟ್ಟುಹೋಗದಂತೆ 1927ರವರೆಗೆ ಏಕೆ ನಿರ್ಬಂಧ ಹೇರಲಾಯಿತು. ಗೃಹಬಂಧನದಿಂದ ಅವರು ಪೂರ್ಣ ಪ್ರಮಾಣದಲ್ಲಿ ಮುಕ್ತರಾಗಲು 1937ರವರೆಗೆ ಕಾಯಬೇಕಾಗಿ ಬಂದಿದ್ದೇಕೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಸಾವರ್ಕರ್‌ ತಮಗೆ ತಾವೇ ವೀರ ಎಂಬ ಬಿರುದು ಕೊಟ್ಟುಕೊಂಡರು ಎಂದು ಆರೋಪ ಮಾಡುತ್ತಾರೆ. ಆದರೆ, ಅವರಿಗೆ ಸಾರ್ವಜನಿಕ ಸಮಾರಂಭದಲ್ಲೇ ಸ್ವಾತಂತ್ರ್ಯ ವೀರ ಸಾವರ್ಕರ್‌ ಎಂಬ ಬಿರುದು ನೀಡಲಾಗಿದೆ. ತನಗೆ ತಾನೆ ಕೊಟ್ಟುಕೊಂಡ ಬಿರುದು ಇದ್ದರೆ, ಅದು ‘ಚಾಚಾ’ನೇ ಹೊರತು ವೀರ ಸಾವರ್ಕರ್‌ ಅಲ್ಲ’ ಎಂದು ವ್ಯಂಗ್ಯವಾಗಿ ಹೇಳಿದರು.

‘ಮಹಾತ್ಮ ಗಾಂಧಿಜಿಯನ್ನು ವಿರೋಧಿಸಿದ್ದ ಏಕೈಕ ಕಾರಣಕ್ಕೆ ಕಾಂಗ್ರೆಸ್‌ ಸಾವರ್ಕರ್‌ ಅವರನ್ನು ಕೊನೆಗಾಲದಲ್ಲಿ ಹೀನಾಯವಾಗಿ ನಡೆಸಿಕೊಂಡಿತು. ನಾಥೂರಾಮ್‌ ಗೋಡ್ಸೆಯು ಗಾಂಧಿಜಿ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ಸಾವರ್ಕರ್‌ ಭಾಗಿ ಆಗಿದ್ದಕ್ಕೆ ಪುರಾವೆಯೇ ಇರಲಿಲ್ಲ. ಆದರೂ ಅವರನ್ನು ಪ್ರಕರಣದ ಆರೋಪಿಯನ್ನಾಗಿಸಲಾಯಿತು. ಲಂಡನ್‌ನ ಸ್ಕಾಟ್ಲೆಂಡ್‌ ಯಾರ್ಡ್‌ ಜೈಲಿನಲ್ಲಿ ಬ್ರಿಟಿಷರು ನಡೆಸಿಕೊಂಡಿದ್ದಕ್ಕಿಂತಲೂ ಕೆಟ್ಟದಾಗಿ ಸಾವರ್ಕರ್‌ ಅವರನ್ನು ಸ್ವತಂತ್ರ ಭಾರತದ ಜೈಲಿನಲ್ಲಿ ನಡೆಸಿಕೊಳ್ಳಲಾಯಿತು. ಬ್ರಿಟಿಷರ ಕಾಲಪಾನಿ ಶಿಕ್ಷೆಯ ವೇಳೆಯೂ ಆತ್ಮಹತ್ಯೆ ಆಲೋಚನೆಗಳನ್ನು ಮೆಟ್ಟಿ ನಿಂತಿದ್ದ ಸಾವರ್ಕರ್‌ ಮುಂಬೈನ ಜುಹೂ ಕಿನಾರೆಯಲ್ಲಿ 21 ದಿನ ಅನ್ನ, ನೀರು, ಔಷಧ ತೆಗೆಸಿ ಆತ್ಮಾಹುತಿ ಮಾಡಿಕೊಂಡರು’ ಎಂದರು.

'ಸಾವರ್ಕರ್‌ಗೆ ಬ್ರಿಟಿಷರು 50 ವರ್ಷಗಳ ಕಾಲಾಪಾನಿ ಶಿಕ್ಷೆ ವಿಧಿಸಿದ್ದರು. ಆ ಶಿಕ್ಷೆ ಪೂರ್ತಿ ಅನುಭವಿಸುತ್ತಿದ್ದರೆ, ಅವರು 1960ರಲ್ಲಿ ಬಿಡುಗಡೆ ಆಗಬೇಕಿತ್ತು. ಅದರ ನೆನಪಿನಾರ್ಥ 1960ರಲ್ಲಿ ಅವರ ಅಭಿಮಾನಿಗಳು ‘ಮೃತ್ಯುಂಜಯ ದಿನ’ ಆಚರಿಸಲು ಮುಂದಾದಾಗ, ಸರ್ಕಾರದಿಂದ ಯಾವುದೇ ನೆರವು ನೀಡಲು ಸಾಧ್ಯವಿಲ್ಲ ಎಂದು ನೆಹರೂ ಹೇಳಿದರು. ಈ ಕಾರ್ಯಕ್ರಮದ ಸುದ್ದಿ ರೇಡಿಯೊದಲ್ಲಿ ಬಿತ್ತರ ಆಗದಂತೆಯೂ ತಡೆಯಲಾಯಿತು. ಸತ್ತ ಬಳಿಕವೂ ಕಾಂಗ್ರೆಸ್‌ ಅವರ ಮೇಲೆ ದ್ವೇಷ ಸಾಧಿಸಿತು. ಸಂಸತ್ತಿನಲ್ಲಿ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಸೋನಿಯಾ ಗಾಂಧಿ ಅವರು, ‘ದೇಶದ್ರೋಹಿಯ ಕಾರ್ಯಕ್ರಮದಲ್ಲಿ ಭಾಗವಹಿಸಲಾರೆ’ ಎಂದರು‘ ಎಂದು ಭೇಸರ ವ್ಯಕ್ತಪಡಿಸಿದರು.

‘ದೇಶ ವಿಭಜನೆಯ ಸುಳಿವು ಸಾವರ್ಕರ್‌ ಅವರಿಗೆ ಇತ್ತು. ಹಾಗಾಗಿಯೇ ಬ್ರಿಟಿಷರ ಸೇನೆಗೆ ಸೇರುವಂತೆ ಅವರು ಹಿಂದೂ ಯುವಕರನ್ನು ಹುರಿದುಂಬಿಸಿದ್ದರು. ಇಲ್ಲದಿದ್ದರೆ ದೇಶ ವಿಭಜನೆ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಹಿಂದೂ ಸೈನಿಕರ ಸಂಖ್ಯೆ ಶೇ 3ರಷ್ಟು ಇರುತ್ತಿರಲಿಲ್ಲ’ ಎಂದರು.

‘ಸಾವರ್ಕರ್‌ ಅಂಡಮಾನ್‌ ಜೈಲಿನಲ್ಲಿದ್ದಾಗ ಏಳು ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರಗಳನ್ನು ಬರೆದಿದ್ದು ನಿಜ. ಆ ಜೈಲಿನಲ್ಲಿದ್ದ ಅನೇಕ ಹೋರಾಟಗಾರರು ಈ ರೀತಿ ಕ್ಷಮಾಪಣಾ ಪತ್ರ ಬರೆದಿದ್ದಾರೆ. ಇದು ಒಂದು ರೀತಿ ನ್ಯಾಯಾಲಯದಲ್ಲಿ ವಾದ ಮಂಡಿಸುವ ಪ್ರಕ್ರಿಯೆ ಇದ್ದಂತೆ. ಜೈಲಿನಲ್ಲಿದ್ದರೆ ಏನನ್ನೂ ಸಾಧಿಸಲಾಗದು ಎಂಬ ಕಾರಣಕ್ಕೆ ಹಾಗೆ ಮಾಡಿದ್ದಾಗಿ ಅವರೇ ಹೇಳಿಕೊಂಡಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.