ಪುತ್ತೂರು: ಕೋವಿಡ್ ತಡೆಯಲು ಸಹಕಾರಿಯಾಗುವ ನಿಟ್ಟಿನಲ್ಲಿ, ಪರೀಕ್ಷಾ ವರದಿಯನ್ನು ಶೀಘ್ರವಾಗಿ ನೀಡುವ ಉದ್ದೇಶದಿಂದ ಜಿಲ್ಲಾಡಳಿತವು ಪುತ್ತೂರಿನಲ್ಲಿ ಕೋವಿಡ್–19 ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ.
ಪುತ್ತೂರಿನಲ್ಲಿ ಪ್ರಾರಂಭವಾಗುವ ಈ ಕೇಂದ್ರ ದಕ್ಷಿಣ ಕನ್ನಡ ಜಿಲ್ಲೆಯ 2ನೇ ಪ್ರಯೋಗಾಲಯವಾಗಿದೆ. ಪುತ್ತೂರು ಉಪ ವಿಭಾಗಕ್ಕೆ ಸಂಬಂಧಿಸಿದ ಕೋವಿಡ್ ಪರೀಕ್ಷೆಗಳನ್ನು ಈ ಕೇಂದ್ರದಲ್ಲಿ ನಡೆಸಲು ಯೋಜಿಸಲಾಗಿದೆ.
ಜಿಲ್ಲಾ ಕೇಂದ್ರದ ಮೇಲೆ ಬೀಳುವ ಒತ್ತಡವನ್ನು ತಪ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆಯಂತೆ ಒಂದು ತಿಂಗಳ ಹಿಂದೆ ಸುಳ್ಯದ ಕೆ.ವಿ.ಜಿ. ಮಹಾವಿದ್ಯಾಲಯದ ಮೂಲಸೌಕರ್ಯ ವ್ಯವಸ್ಥೆ ಬಳಸಿಕೊಂಡು ತಾತ್ಕಾಲಿಕ ಪ್ರಯೋಗಾಲಯ ಆರಂಭಿಸಲಾಗಿತ್ತು. ಪುತ್ತೂರು, ಕಡಬ, ಸುಳ್ಯ ತಾಲ್ಲೂಕುಗಳಲ್ಲಿ ಸಂಗ್ರಹಿಸಿದ ಗಂಟಲ ದ್ರವದ ಮಾದರಿಗಳನ್ನು ಅಲ್ಲಿಗೆ ಕೊಂಡೊಯ್ದು ಪರೀಕ್ಷೆ ನಡೆಸಿ ವರದಿ ನೀಡಲಾಗುತ್ತಿತ್ತು. ಆದರೆ, ಇದೀಗ ಯಂತ್ರೋಪಕರಣಗಳನ್ನು ಪುತ್ತೂರಿಗೆ ವರ್ಗಾಯಿಸಿ ಪೂರ್ಣ ಪ್ರಮಾಣದ ಸರ್ಕಾರಿ ಪ್ರಯೋಗಾಲಯ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ.
ಪುತ್ತೂರಿನ ತಾಲ್ಲೂಕು ಪಂಚಾಯಿತಿ ವಾಣಿಜ್ಯ ಸಂಕೀರ್ಣದ ಮೊದಲ ಮಹಡಿಯಲ್ಲಿ ಪ್ರಯೋಗಾಲಯ ಆರಂಭಿಸಲು ನಿರ್ಧರಿಸಲಾಗಿದೆ.
ಕೋವಿಡ್ ಪರಿಕ್ಷಾ ಕೇಂದ್ರಕ್ಕೆ ಆರಂಭದಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಯ ಸುಪರ್ದಿಯಲ್ಲಿರುವ ಉಪ ನೋಂದಣಿ ಕಚೇರಿಯ ಹಳೆ ಕಟ್ಟಡವನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಅದನ್ನು ಪ್ರಸ್ತುತ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲು ವ್ಯವಸ್ಥೆ ಮಾಡಿದ್ದರಿಂದ ಅದನ್ನು ಅಲ್ಲಿಂದ ತಾತ್ಕಾಲಿಕವಾಗಿ ನಗರಸಭೆ ಸಮುದಾಯ ಭವನಕ್ಕೆ ಸ್ಥಳಾಂತರಿಸುವುದೆಂದು ಚಿಂತಿಸಲಾಗಿತ್ತು. ಆದರೆ, ಆ ಬಳಿಕದ ಬೆಳವಣಿಗೆಯಲ್ಲಿ ಜಿಲ್ಲಾಧಿಕಾರಿ ತಾಲ್ಲೂಕು ಪಂಚಾಯಿತಿ ವಾಣಿಜ್ಯ ಸಂಕೀರ್ಣದ ಮಹಡಿಯೇ ಸೂಕ್ತ ಎಂದು ಪರಿಗಣಿಸಿದ್ದಾರೆ.
ಪುತ್ತೂರು ಉಪವಿಭಾಗ ವ್ಯಾಪ್ತಿಯ ಸುಳ್ಯ, ಪುತ್ತೂರು, ಕಡಬ ಮತ್ತು ಬೆಳ್ತಂಗಡಿ ತಾಲ್ಲೂಕುಗಳಿಗೆ ಸಂಬಂಧಿಸಿ ಸುಸಜ್ಜಿತ ಲ್ಯಾಬ್ ಪುತ್ತೂರಿನಲ್ಲಿ ₹1 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಸರ್ಕಾರಿ ಪ್ರಯೋಗಾಲಯ ಕಾರ್ಯಾರಂಭಗೊಳ್ಳಲಿದೆ. ಮುಂದೆ ಅತಿ ಶೀಘ್ರವಾಗಿ ಕೋವಿಡ್ ವರದಿ ಜನತೆಯ ಕೈಸೇರಲಿದ್ದು, ಚಿಕಿತ್ಸೆಗೆ ಬಹಳಷ್ಟು ಸಹಕಾರಿಯಾಗಲಿದೆ.
ಸೋಂಕು ನಿಯಂತ್ರಣಕ್ಕೆ ಅನುಕೂಲ
ಕೋವಿಡ್ ಪರೀಕ್ಷಾ ವರದಿ ಸಿಗುವಲ್ಲಿ ವಿಳಂಬವಾದರೆ ಚಿಕಿತ್ಸೆಗೆ ಸಮಸ್ಯೆಯಾಗುತ್ತದೆ. ಅತೀ ಶೀಘ್ರವಾಗಿ ವರದಿ ಸಿಗವಂತಾದರೆ ಚಿಕಿತ್ಸೆಯ ಜತೆಗೆ ಸೋಂಕು ನಿಯಂತ್ರಣಕ್ಕೂ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಕೋವಿಡ್ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಪುತ್ತೂರಿನಲ್ಲಿ ಹಲವು ಕಡೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಅಂತಿಮವಾಗಿ ತಾಲ್ಲೂಕು ಪಂಚಾಯಿತಿ ಕಚೇರಿ ಪಕ್ಕದ ಕಟ್ಟಡವನ್ನು ಗುರುತಿಸಲಾಗಿದೆ.
-ಸಂಜೀವ ಮಠಂದೂರು, ಶಾಸಕರು, ಪುತ್ತೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.