ಪುತ್ತೂರು: ಮಹಾಲಿಂಗೇಶ್ವರ ದೇವಳದಲ್ಲಿ ಲಕ್ಷದೀಪೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ದೇವಳದಲ್ಲಿ ಬೆಳಿಗ್ಗೆ ಲಕ್ಷ ಬಿಲ್ವಾರ್ಚನೆ ಸೇವೆ ನಡೆಯಿತು. ಬೆಳಿಗ್ಗೆಯಿಂದ ಸಂಜೆ ವರೆಗೆ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಿತು. ಸಂಜೆ ರಾಮಕೃಷ್ಣ ಕಾಟುಕುಕ್ಕೆ ನೇತೃತ್ವದಲ್ಲಿ ಸಾಮೂಹಿಕ ಭಜನೆ ನಡೆಯಿತು. ಬಳಿಕ ಲಲಿತ ಸಹಸ್ತ್ರನಾಮ ಪಠಣದೊಂದಿಗೆ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.
ದೇವಳ ಎದುರಿನ ರಥಬೀದಿಯಲ್ಲಿ ಸಂಜೆ ಭಕ್ತರು ರಂಗೋಲಿ ಬಿಡಿಸಿ, ರಥಬೀದಿಯ ಎರಡೂ ಬದಿಗಳಲ್ಲಿ ಹಣತೆ ದೀಪಗಳ ಜೋಡಣೆ ಮಾಡಿದರು. ದೇವಳಕ್ಕೆ ಸೇರಿದ 17.76 ಎಕರೆಯ ಪೂರ್ಣ ರಥಬೀದಿ, ಪುಷ್ಕರಣಿ ಸುತ್ತ, ಧ್ಯಾನರೂಢ ಶಿವಮೂರ್ತಿ, ಮೂಲನಾಗನ ಕಟ್ಟೆ ಮತ್ತು ಅಯ್ಯಪ್ಪ ಗುಡಿ ವಠಾರದಲ್ಲಿ, ಗೋಶಾಲೆ, ರಥಮಂದಿರದ ಒಳಗೆ ಮತ್ತು ಸುತ್ತಮುತ್ತ, ಮಹಾರುದ್ರಯಾಗ ಶಾಲೆ ಮೊದಲಾದ ಕಡೆಗಳಲ್ಲಿ ರಂಗೋಲಿ ಬಿಡಿಸಿ, ಹಣತೆ ದೀಪಗಳನ್ನು ಇಟ್ಟರು. ಮಸ್ಸಂಜೆ ಹಣತೆಗಳನ್ನು ಬೆಳಗಲಾಯಿತು.
ರಾತ್ರಿ ಪೂಜೆಯ ಬಳಿಕ ದೇವರ ಬಲಿ ಹೊರಟು ಒಳಾಂಗಣ ಹಾಗೂ ಹೊರಾಂಗಣದಲ್ಲಿ ತಂತ್ರ ಸುತ್ತು, ರಾಜಾಂಗಣದಲ್ಲಿ ಉಡಿಕೆ, ಬೆಂಡೆ ಸುತ್ತುಗಳ ಬಲಿ ಉತ್ಸವ ನಡೆಯಿತು. ಖಂಡನಾಯಕನ ಕಟ್ಟೆಯಲ್ಲಿ ಕಟ್ಟಪೂಜೆ ನಡೆದ ಬಳಿಕ ವಾದ್ಯ, ಭಜನೆ, ಬ್ಯಾಂಡ್, ಸರ್ವ ವಾದ್ಯ ಸ್ತುತಿಗಳ ಬಳಿಕ ಚಂದ್ರಮಂಡಲ ಉತ್ಸವ ನಡೆಯಿತು. ಬಳಿಕ ತೆಪ್ಪೋತ್ಸವ ಆರಂಭಗೊಂಡಿತು.
ಶ್ರೀಧರ ತಂತ್ರಿ, ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್.ಭಟ್ ಅವರು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು, ಬಿ.ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಡಾ.ಸುಧಾ ಶ್ರೀಪತಿ ರಾವ್, ವೀಣಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.