ADVERTISEMENT

ಪುತ್ತೂರು: ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಸ್ಮಾರಕ ವೃತ್ತಕ್ಕೆ ಹಸಿರುಬಟ್ಟೆ ಹೊದಿಕೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 14:22 IST
Last Updated 8 ಅಕ್ಟೋಬರ್ 2022, 14:22 IST
ಪುತ್ತೂರು ತಾಲ್ಲೂಕಿನ ಈಶ್ವರಮಂಗಲ ಪೇಟೆಯ ಜಂಕ್ಷನ್ ಭಾಗದಲ್ಲಿರುವ ‘ಮೇಜರ್ ಸಂದೀಪ್ ಉಣ್ಣಿಕೃಷ್ಣನ್’ ಸ್ಮಾರಕ ವೃತ್ತಕ್ಕೆ ಅಳವಡಿಸಿದ ಹಸಿರುಬಟ್ಟೆ
ಪುತ್ತೂರು ತಾಲ್ಲೂಕಿನ ಈಶ್ವರಮಂಗಲ ಪೇಟೆಯ ಜಂಕ್ಷನ್ ಭಾಗದಲ್ಲಿರುವ ‘ಮೇಜರ್ ಸಂದೀಪ್ ಉಣ್ಣಿಕೃಷ್ಣನ್’ ಸ್ಮಾರಕ ವೃತ್ತಕ್ಕೆ ಅಳವಡಿಸಿದ ಹಸಿರುಬಟ್ಟೆ   

ಪುತ್ತೂರು: ತಾಲ್ಲೂಕಿನ ಈಶ್ವರಮಂಗಲ ಪೇಟೆಯ ಜಂಕ್ಷನ್ ಭಾಗದಲ್ಲಿರುವ ‘ಮೇಜರ್ ಸಂದೀಪ್ ಉಣ್ಣಿಕೃಷ್ಣನ್’ ಸ್ಮಾರಕ ವೃತ್ತಕ್ಕೆ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಮರ ತಂಡ ಹಸಿರು ಬಟ್ಟೆಯನ್ನು ಹೊದಿಸಿ, ಉಣ್ಣಿಕೃಷ್ಣನ್ ಹೆಸರನ್ನು ಮರೆಮಾಚುವಂತೆ ಮಾಡಿರುವುದು ಹಿಂದುತ್ವ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಯಿತು.

ಮುಂಬೈಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಸ್ಮರಣಾರ್ಥ ಈಶ್ವರಮಂಗಲ ಜಂಕ್ಷನ್‌ನಲ್ಲಿ ವೃತ್ತ ನಿರ್ಮಿಸಿ ಅದಕ್ಕೆ ಅವರ ಹೆಸರಿಡಲಾಗಿತ್ತು. ಸರ್ಕಾರದ ಅನುದಾನದಲ್ಲಿ ಈ ವೃತ್ತ ನಿರ್ಮಾಣಗೊಂಡಿದೆ. ಇದರ ನಿರ್ವಹಣೆಯ ಜವಾಬ್ದಾರಿ ಗ್ರಾಮ ಪಂಚಾಯಿತಿಯದ್ದಾಗಿದ್ದರೂ, ಈಶ್ವರಮಂಗಲದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರೇ ಅದಕ್ಕೆ ಯೋಧರ ವಸ್ತ್ರಾಲಂಕಾರದ ಪೈಟಿಂಗ್ ರೂಪ ನೀಡುತ್ತಿದ್ದರು.

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯಕ್ಕೆ ಸೇರಿದ ಹಾಗೂ ಎಸ್‌ಡಿಪಿಐ ಸಂಘಟನೆಯಲ್ಲಿ ಗುರುತಿಸಿಕೊಂಡವರೆನ್ನಲಾದ ಯುವಕರ ತಂಡವೊಂದು ಶುಕ್ರವಾರ ತಡರಾತ್ರಿ ವೇಳೆ ವೃತ್ತಕ್ಕೆ ಸಂಪೂರ್ಣವಾಗಿ ಹಸಿರುಬಟ್ಟೆ (ಸುತ್ತಿ) ಹೊದಿಕೆ ಮಾಡಿ, ವೃತ್ತದಲ್ಲಿದ್ದ ಸಂದೀಪ್ ಉಣ್ಣಿಕೃಷ್ಣನ್ ಹೆಸರು ಹಾಗೂ ವೃತ್ತ ಕಾಣದಂತೆ ಮಾಡಿರುವುದು ವಿವಾದಕ್ಕೆ ಕಾರಣವಾಯಿತು. ಶನಿವಾರ ಬೆಳಿಗ್ಗೆ ಇದನ್ನು ಗಮನಿಸಿದ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು.

ADVERTISEMENT

ಈ ಕುರಿತು ಸಂಘಟನೆಯ ಪ್ರಮುಖರು ಡಿವೈಎಸ್ಪಿ, ಸಂಪ್ಯ ಠಾಣೆಯ ಎಸ್ಐ ಹಾಗೂ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ನೀಡಿ, ಕೂಡಲೇ ಸಂದೀಪ್ ಉಣ್ಣಿಕೃಷ್ಣನ್ ಹೆಸರನ್ನು ಮರೆಮಾಚುವಂತೆ ಅಳವಡಿಸಿರುವ ಹಸಿರು ಬಟ್ಟೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿದರು. ಬೆಳಿಗ್ಗೆ 10.30ರೊಳಗೆ ಸಂದೀಪ್ ಉಣ್ಣಿಕೃಷ್ಣನ್ ಹೆಸರು ಹಾಗೂ ವೃತ್ತ ಕಾಣದಂತೆ ಅಳವಡಿಸಿರುವ ಹಸಿರುಬಟ್ಟೆಯನ್ನು ತೆರವುಗೊಳಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು.

ಈ ವಿದ್ಯಮಾನಗಳ ಬೆನ್ನಲ್ಲೇ ಪೊಲೀಸರ ಸೂಚನೆಯಂತೆ ಹಸಿರುಬಟ್ಟೆ ಅಳವಡಿಸಿದ ತಂಡದ ಕೆಲವರು ಬಂದು ಸಂದೀಪ್ ಉಣ್ಣಿಕೃಷ್ಣನ್ ವೃತ್ತಕ್ಕೆ ಅಳವಡಿಸಿದ್ದ ಹಸಿರು ಬಟ್ಟೆಯನ್ನು ತೆರವುಗೊಳಿಸಿದ್ದು, ಇದರಿಂದಾಗಿ ಗೊಂದಲ ಬಗೆಹರಿದಿದೆ. ವೃತ್ತದಲ್ಲಿ ಅಳವಡಿಸಿರುವ ಬಾವುಟಗಳು ಹಾಗೆಯೇ ಇದ್ದು, ಇದಕ್ಕೆ ನಮ್ಮ ಆಕ್ಷೇಪಗಳಿಲ್ಲ ಎಂದು ಹಿಂದುತ್ವ ಪರ ಸಂಘಟನೆಯವರು ತಿಳಿಸಿದ್ದಾರೆ.

ತೋರಣ, ಧ್ವಜಕ್ಕೆ ವಿರೋಧ ಇಲ್ಲ: ಸೈನಿಕರ ವಸ್ತ್ರದ ರೂಪದಲ್ಲಿ ಬಣ್ಣ ಹಚ್ಚಲಾಗಿದ್ದ ವೃತ್ತಕ್ಕೆ ಸಂಪೂರ್ಣವಾಗಿ ಹಸಿರುಬಟ್ಟೆ ಅಳವಡಿಸಿ ವೃತ್ತ ಮತ್ತು ಹೆಸರು ಕಾಣದಂತೆ ಮಾಡಿರುವುದಕ್ಕೆ ಮಾತ್ರ ನಮ್ಮ ಆಕ್ಷೇಪ. ವೃತ್ತದಲ್ಲಿ ಬಾವುಟ, ತೋರಣ ಅಳವಡಿಸಿರುವುದಕ್ಕೆ ಆಕ್ಷೇಪಗಳಿಲ್ಲ. ಹೊದಿಕೆ ತೆರವು ಮಾಡಲು ಗಡುವು ನೀಡಲಾಗಿತ್ತು. ಅಷ್ಟರಲ್ಲಿ ತೆರವು ಮಾಡಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಮುಖಂಡ ಚಿನ್ಮಯ್ ರೈ ಈಶ್ವರಮಂಗಲ ತಿಳಿಸಿದರು.

ಅಚಾತುರ್ಯದ ಘಟನೆ: ಸ್ಪಷ್ಟನೆ
‘ಈಶ್ವರಮಂಗಲ ಮಿಲಾದ್ ಕಮಿಟಿ ವತಿಯಿಂದ ಈದ್ ಮೀಲಾದ್ ಪ್ರಯುಕ್ತ ಈಶ್ವರಮಂಗಲ ಪೇಟೆಯನ್ನು ಅಲಂಕರಿಸಲಾಗಿತ್ತು. ಆ ಸಂದರ್ಭದಲ್ಲಿ ಅಚಾತುರ್ಯದಿಂದ ವೀರ ಯೋಧ ಮೇಜರ್‌ ಸಂದೀಪ್ ಉಣ್ಣಿಕೃಷ್ಣನ್ ವೃತ್ತದಲ್ಲಿ ಅವರ ಹೆಸರು ಕಾಣಿಸದ ರೀತಿಯಲ್ಲಿ ಹಸಿರು ಬಟ್ಟೆ ಹೊದಿಸಲಾಗಿತ್ತು. ಇದು ನಮ್ಮ ಗಮನಕ್ಕೆ ಬಂದ ಕೂಡಲೇ ಅದನ್ನು ತೆರವುಗೊಳಿಸಿರುತ್ತೇವೆ. ಮುಸ್ಲಿಮರು ಸೈನಿಕರನ್ನು ಅವಮಾನಿಸುವವರಲ್ಲ. ದೇಶಕ್ಕಾಗಿ ಹೋರಾಡಿದವರಿಗೆ ಗೌರವವನ್ನು ನೀಡುತ್ತಾ ಬಂದವರು. ಅದನ್ನು ಯಾರ ಮುಂದೆಯೂ ಪುರಾವೆಗೊಳಿಸುವ ಅಗತ್ಯವಿಲ್ಲ’ ಎಂದು ಮಿಲಾದ್ ಸಮಿತಿ ಸ್ಪಷ್ಟನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.