ADVERTISEMENT

ಮಂಗಳೂರು | ರೇಬಿಸ್‌ಗೆ ಇನ್ನೂ ಬಿದ್ದಿಲ್ಲ ಕಡಿವಾಣ– ನಿಯಂತ್ರಣಕ್ಕೆ ಜಿಲ್ಲಾಡಳಿತ ಪಣ

ಸೆಪ್ಟೆಂಬರ್‌ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಲಿದೆ ರೇಬಿಸ್ ನಿರೋಧಕ ಉಚಿತ ಲಸಿಕೆ ಶಿಬಿರ

ಪ್ರವೀಣ್‌ ಕುಮಾರ್‌ ಪಿ.ವಿ
Published 16 ಸೆಪ್ಟೆಂಬರ್ 2024, 5:01 IST
Last Updated 16 ಸೆಪ್ಟೆಂಬರ್ 2024, 5:01 IST
ಡಾ. ಅರುಣ್ ಕುಮಾರ್ ಶೆಟ್ಟಿ
ಡಾ. ಅರುಣ್ ಕುಮಾರ್ ಶೆಟ್ಟಿ    

ಮಂಗಳೂರು: ಜಾನುವಾರುಗಳ ಮೂಲಕ ಮನುಷ್ಯನಿಗೂ ಹರಡುವ ಕಾಯಿಲೆ ರೇಬಿಸ್‌. ಭಾರತವನ್ನೂ 2030ರ ಒಳಗೆ ‘ರೇಬಿಸ್ ಮುಕ್ತ ಮಾಡಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಕ್ರಮ ಕೈಗೊಂಡಿದೆ.  ಪ್ರತಿವರ್ಷವೂ ರೇಬೀಸ್‌ ನಿರೋಧಕ ಉಚಿತ ಲಸಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದರ ಹೊರತಾಗಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೇಬಿಸ್ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗುತ್ತಿವೆ.

ವಾರದ ಹಿಂದಷ್ಟೇ ಕೊಲ್ಯದಲ್ಲಿ ದನವೊಂದು ಶಂಕಿತ ರೇಬಿಸ್‌ನಿಮದ ಅಸುನೀಗಿತ್ತು.ಕಳೆದ ಏಳೂವರೆ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತ್ತ ಜಾನುವಾರುಗಳ 159ರ ಮಿದುಳು ಪರೀಕ್ಷೆ ನಡೆಸಲಾಗಿದ್ದು, ಅವುಗಳಲ್ಲಿ 104ರಲ್ಲಿ ರೇಬಿಸ್ ವೈರಾಣು ಇರುವುದು ದೃಢಪಟ್ಟಿತ್ತು.

‘ಸತ್ತ ಪ್ರಾಣಿಗಳ ಮಿದುಳು ಪರೀಕ್ಷೆ ನಡೆಸಿದ ಶೇ 65.5 ಮಾದರಿಗಳಲ್ಲಿ ಈ ರೋಗ ದೃಢಪ‍ಟ್ಟಿದೆ. ಜಿಲ್ಲೆಯಲ್ಲಿ ಈಗಲೂ ರೇಬಿಸ್‌ ಸಕ್ರಿಯವಾಗಿರುವುದಕ್ಕೆ ಇದು ಉದಾಹರಣೆ’ ಎನ್ನುತ್ತಾರೆ ಪಶುರೋಗ ತಪಾಸಣಾ ಕೇಂದ್ರದ ಪ್ರಾದೇಶಿಕ ಸಂಶೋಧನಾಧಿಕಾರಿ ಡಾ.ವಸಂತ್‌ ಶೆಟ್ಟಿ ‘ಪ್ರಜಾವಾಣಿ’ಗೆ  ಮಾಹಿತಿ ನೀಡಿದರು.

ADVERTISEMENT

‘ಪ್ರಾಣಿಗಳಲ್ಲಿ ಸುಪ್ತಾವಸ್ಥೆಯಲ್ಲಿ ರೇಬಿಸ್‌ ವೈರಾಣು ಇದ್ದರೂ ಗೊತ್ತಾಗದು. ವೈರಾಣು ನರಮಂಡಲವನ್ನು ತಲುಪಿದ ಬಳಿಕ ಈ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ರೋಗ ಲಕ್ಷಣ ಕಾಣಿಸಿಕೊಂಡ ಬಳಿಕ ಜಾನುವಾರು ಅಥವಾ ವ್ಯಕ್ತಿ ಬದುಕುಳಿಯುವುದಿಲ್ಲ’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲೆಯ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ.

ರೇಬಿಸ್‌ ರೋಗಕ್ಕೆ ಚಿಕಿತ್ಸೆಇ‌‌ಲ್ಲ. ಆದರೆ, ರೇಬಿಸ್ ನಿರೋಧಕ ಲಸಿಕೆ ತೆಗೆದುಕೊಳ್ಳುವ ಮೂಲಕ ಅದರಿಂದ ರಕ್ಷಣೆ ಪಡೆಯಬಹುದು. ಈ ರೋಗಕ್ಕೆ ಮೊದಲು ಲಸಿಕೆ ಕಂಡು ಹುಡುಕಿದ ವಿಜ್ಞಾನಿ ಲೂಯಿಸ್ ಪ್ಯಾಶ್ಚರ್ ಮರಣ ಹೊಂದಿದ್ದ ದಿನವನ್ನು (ಸೆ 28) ವಿಶ್ವ ರೇಬಿಸ್‌ ದಿನ ಎಂದು ಆಚರಿಸಲಾಗುತ್ತದೆ.

‘ಸದ್ದಿಲ್ಲದೇ ಜೀವಕ್ಕೇ ಎರವಾಗಬಲ್ಲ ಈ ಮದ್ದಿಲ್ಲದ ಕಾಯಿಲೆಯ ನಿರ್ಮೂಲನೆಗೆ ಇಲಾಖೆ ಪಣ ತೊಟ್ಟಿದೆ. ಸೆಪ್ಟೆಂಬರ್ ತಿಂಗಳೂ ಪೂರ್ತಿ ನಾವು ಜಿಲ್ಲೆಯಾದ್ಯಂತ  ರೇಬಿಸ್ ನಿರೋಧಕ ಉಚಿತ ಲಸಿಕೆ ಶಿಬಿರಗಳನ್ನು ಹಮ್ಮಿಕೊಳ್ಳುತ್ತೇವೆ. ಈ ಸೆಪ್ಟೆಂಬರ್‌ನಲ್ಲಿ ಇದುವರೆಗೆ ವಿವಿಧ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಒಟ್ಟು 12,532 ನಾಯಿಗಳಿಗೆ ಉಚಿತವಾಗಿ ರೇಬಿಸ್ ನಿರೋಧಕ ಲಸಿಕೆ ನೀಡಿದ್ದೇವೆ. ಈ ವರ್ಷದಲ್ಲಿ ಇದುವರೆಗೆ 46,248 ನಾಯಿಗಳಿಗೆ ಲಸಿಕೆ ನೀಡಲಾಗಿದೆ’ ಎಂದು ಡಾ. ಅರುಣ್ ಕುಮಾರ್ ಶೆಟ್ಟಿ ತಿಳಿಸಿದರು. 

‘ಬೀದಿ ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ರೇಬಿಸ್‌ ನಿರೋಧಕ ಲಸಿಕೆಯನ್ನೂ ಹಾಕಲಾಗುತ್ತದೆ. ಮನೆಯಲ್ಲಿ ನಾಯಿ ಅಥವಾ ಬೆಕ್ಕು ಸಾಕುವವರು ಸುರಕ್ಷತೆ ದೃಷ್ಟಿ‌‌ಯಿಂದ ವರ್ಷಕ್ಕೊಮ್ಮೆ ಈ ಲಸಿಕೆ ಹಾಕಿಸುವುದು ಒಳ್ಳೆಯದು. ನಮ್ಮಲ್ಲಿ ಲಸಿಕೆಯ ಕೊರತೆ ಇಲ್ಲ. ಉಚಿತವಾಗಿ ಇದನ್ನು ನೀಡುತ್ತೇವೆ’ ಎಂದರು.

ನಾಯಿ ಕಚ್ಚಿದರೆ ಕಡೆಗಣಿಸದಿರಿ:

ಮನುಷ್ಯರು ನಾಯಿ ಅಥವಾ ಇತರ ಜಾನುವಾರು ಕಚ್ಚಿದಾಗ ರೇಬಿಸ್‌ ನಿರೋಧಕ ಚುಚ್ಚುಮದ್ದು (ಪೋಸ್ಟ್‌ ಎಕ್ಸ್‌ಪೋಷರ್‌ ಪ್ರೊಫಿಲ್ಯಾಕ್ಸಿಸ್) ಪಡೆಯಬೇಕು. ರೇಬಿಸ್‌ ರೋಗವು ವ್ಯಾಪಕವಾಗಿರುವ ನಮ್ಮಂತಹ ದೇಶದಲ್ಲಿ ನಾಯಿ ಕಚ್ಚಿದ ತಕ್ಷಣ ರೋಗ ನಿರೋಧಕ ಚುಚ್ಚುಮದ್ದು ಪಡೆಯುವುದು ಸೂಕ್ತ. ಆ ಬಳಿಕವೂ ಕಚ್ಚಿನ ನಾಯಿ  ಬಗ್ಗೆ 10 ದಿನ ನಿಗಾ ಇಡಬೇಕು. ಅವುಗಳಿಗೆ ರೇಬಿಸ್ ಇಲ್ಲ ಎಂಬುದು ಖಚಿತವಾದರೆ ರೇಬಿಸ್‌ ನಿರೋಧಕ ಲಸಿಕೆ ಹಾಕಿಸಿಕೊಳ್ಳಬಹುದು.  ಕಚ್ಚಿದ ನಾಯಿಗೆ ವರ್ಷದಿಂದೀಚೆಗೆ ರೇಬಿಸ್ ನಿರೋಧಕ ಲಸಿಕೆ ಹಾಕಿಸಿದ್ದರೆ, ಚುಚ್ಚುಮದ್ದು ಪಡೆಯುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದರು.

ಜೀವನ ಪರ್ಯಂತ ರೇಬಿಸ್‌ನಿಂದ ರಕ್ಷಣೆ ನೀಡುವ ಯಾವುದೇ ಲಸಿಕೆ ಲಭ್ಯ ಇಲ್ಲ.  ಲಸಿಕೆ ನಿರ್ದಿಷ್ಟ ಅವಧಿಯವರೆಗೆ ಮಾತ್ರ ರಕ್ಷಣೆ ಒದಗಿಸಬಲ್ಲುದು. ಪಶುವೈದ್ಯರು ವರ್ಷಕ್ಕೊಮ್ಮೆ ಈ ಲಸಿಕೆ ಪಡೆಯುತ್ತಾರೆ ಎಂ‌ದರು.

‘ಹಿಂದೆ ರೇಬಿಸ್‌ ಪೀಡಿತ ನಾಯಿ ಕಚ್ಚಿದರೆ 14 ಇಂಜೆಕ್ಷನ್‌ಗಳನ್ನು ಹೊಕ್ಕಳ ಸುತ್ತ ನೀಡಲಾಗುತ್ತಿತ್ತು. ಈಗ ಹೊಸ ರೀತಿಯ ಚುಚ್ಚುಮದ್ದು ಬಂದಿದ್ದು, ಈಗ  ನಾಲ್ಕು ಡೋಸ್‌ ಪಡೆದರೆ ಸಾಕು. ರೇಬಿಸ್‌ ಇಮ್ಯುನೋಗ್ಲೋಬ್ಯುಲಿನ್‌  ಚುಚ್ಚುಮದ್ದನ್ನು ನಾಯಿ ಕಚ್ಚಿದ ಆದಷ್ಟು ಬೇಗ ಪಡೆಯಬೇಕು. ನಂತರ ಮೂರನೇ ದಿನ, ಏಳನೇ ದಿನ ಹಾಗೂ 28ನೇ ದಿನ ಮತ್ತೆ ಚುಚ್ಚುಮದ್ದು ಪಡೆಯಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ  ಡಾ.ಎಚ್‌.ಆರ್‌.ತಿಮ್ಮಯ್ಯ ತಿಳಿಸಿದರು.

ಜಿಲ್ಲೆಯ ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮನುಷ್ಯರಿಗೆ ನೀಡುವ ರೇಬಿಸ್ ರೋಗ ನಿರೋಧಕ ಚುಚ್ಚುಮದ್ದು ಲಭ್ಯ

-ಡಾ.ಎಚ್‌.ಆರ್‌.ತಿಮ್ಮಯ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಆಯಾ ಗ್ರಾಮ ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ರೇಬಿಸ್ ನಿರೋಧಕ ಉಚಿತ ಲಸಿಕೆ ಶಿಬಿರ ನಡೆದಾಗ ತಪ್ಪದೇ ಮನೆಯ ನಾಯಿಗೆ ಲಸಿಕೆ ಹಾಕಿಸಿ

-ಡಾ.ಅರುಣ್ ಕುಮಾರ್‌ ಶೆಟ್ಟಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ದ.ಕ.

ರೇಬಿಸ್ ಹರಡುವುದು ಹೇಗೆ?

ರೋಗಪೀಡಿತ ಸಸ್ತನಿಗಳ ಜೊಲ್ಲಿನ ಮೂಲಕ ರೇಬಿಸ್‌ ವೈರಾಣು ಮಾನವನ ದೇಹವನ್ನು ಸೇರಿಕೊಳ್ಳುತ್ತದೆ. ನಮ್ಮಲ್ಲಿ ಶೇ 95ಕ್ಕೂ ಹೆಚ್ಚು ರೇಬಿಸ್‌ ಪ್ರಕರಣಗಳು ರೋಗಪೀಡಿತ ನಾಯಿ ಕಚ್ಚುವುದರಿಂದ ಪರಚುವುದರಿಂದ ಬಂದಿವೆ.  ರೋಗಪೀಡಿತ ಬೆಕ್ಕು ಕುದುರೆ ಕತ್ತೆ ದನದ ಜೊಲ್ಲಿನ ಸಂಪರ್ಕದಿಂದಲೂ ರೇಬಿಸ್‌ ಬರುವ ಸಾಧ್ಯತೆ ಇದೆ. ಮುಂಗುಸಿ ನರಿ ತೋಳ ಹಾಗೂ ರಕ್ತ ಹೀರುವ ಬಾವಲಿಗಳ ಮೂಲಕವೂ ಈ ಕಾಯಲೆ ಹರಡುವ ಸಾಧ್ಯತೆ ಇದೆ.  ಪ್ರಥಮ ಚಿಕಿತ್ಸೆ ಏನು? ಸಾಬೂನು ಹಾಕಿ ನಾಯಿ ಅಥವಾ ಜಾನುವಾರು ಕಡಿತಕ್ಕೆ ಒಳಗಾದ ಗಾಯವನ್ನು ಹರಿಯುವ ನೀರಿನಿಂದ ಚೆನ್ನಾಗಿ ಸುಮಾರು 15 ನಿಮಿಷ ತೊಳೆಯಬೇಕು. ಆ ಗಾಯವನ್ನು ಶೇ 70ರಷ್ಟು ಆಲ್ಕೊಹಾಲ್‌ / ಇಥೆನಾಲ್‌ ಟಿಂಚರ್‌ ಪೊವೊಡಿನ್–ಐಯೋಡಿನ್ ಹಚ್ಚಬಹುದು. ಆದಷ್ಟು ಬೇಗ ವೈದ್ಯರನ್ನು ಕಾಣಬೇಕು. ರೇಬಿಸ್‌ ಲಕ್ಷಣಗಳೇನು? ಹೆಚ್ಚಿನ ಪ್ರಕರಣಗಳಲ್ಲಿ ನಾಯಿ/ ಜಾನುವಾರು ಕಚ್ಚಿದ ಜಾಗದಲ್ಲಿ ವಿಪರೀತ ನೋವು ತುರಿಕೆ ಕಾಣಿಸಿಕೊಳ್ಳುತ್ತದೆ. ಎರಡರಿಂದ ನಾಲ್ಕು ದಿನಗಳವರೆಗೆ ಜ್ವರ ತಲೆನೋವಿನಂತಹ ಅನಾರೋಗ್ಯದ ಲಕ್ಷಣ ಕಾಣಿಸಿಕೊಳ್ಳಬಹುದು. ನೀರನ್ನು ಕಂಡಾಗ ಭಯ/ ಸ್ನಾಯುಸೆಳೆತ ಉಂಟಾಗಬಹುದು. ಶಬ್ದಗಳು ಅಥವ ಅತಿ ಬೆಳಕು ಅಸಹನೀಯ ಎನಿಸಬಹುದು. ಅವರು ಅತಿರೇಕದ ವರ್ತನೆ ತೋರಬಹುದು. ರೇಬಿಸ್ ಪೀಡಿತ ನಾಯಿ ಅಥವಾ ಜಾನುವಾರು ಕಚ್ಚಿದ ಬಳಿಕ ರೇಬಿಸ್‌ ಲಕ್ಷಣ ಕಾಣಿಸಿಕೊಳ್ಳಲು ಕೆಲವೇ ದಿನಗಳಿಂದ ಹಿಡಿದು ತಿಂಗಳುಗಳು ಹಿಡಿಯಬಹುದು. ಆದರೆ ರೋಗ ಪೀಡಿತ ಪ್ರಾಣಿ ಅಥವಾ ಮನುಷ್ಯ ಅದರ ಲಕ್ಷಣ ಕಾಣಿಸಿಕೊಂಡ ಏಳು ದಿನಗಳ ಒಳಗೆ ಸಾವಿಗೀಡಾಗುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.