ADVERTISEMENT

ಬಜಾಲ್‌: ತಡೆಗೋಡೆ ಕುಸಿದು ಮನೆಗೆ ಹಾನಿ

ಪಂಜಿಮೊಗರು: ನಾಲ್ಕು ಕುಟುಂಬಗಳ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 16:02 IST
Last Updated 30 ಜೂನ್ 2024, 16:02 IST
ಬಜಾಲ್‌ ಪಲ್ಲಕೆರೆಯಲ್ಲಿ ತಡೆಗೋಡೆ ಕುಸಿದು ಬಿದ್ದು ಮನೆಯೊಂದು ಭಾನುವಾರ ಹಾನಿಗೊಳಗಾಗಿದೆ
ಬಜಾಲ್‌ ಪಲ್ಲಕೆರೆಯಲ್ಲಿ ತಡೆಗೋಡೆ ಕುಸಿದು ಬಿದ್ದು ಮನೆಯೊಂದು ಭಾನುವಾರ ಹಾನಿಗೊಳಗಾಗಿದೆ   

ಮಂಗಳೂರು: ನಗರದಲ್ಲಿ ಮಳೆಯ ಅಬ್ಬರ ತುಸು ಕಡಿಮೆಯಾಗಿದೆ. ಆದರೂ ಗುಡ್ಡ ಕುಸಿತ ಮುಂದುವರಿದಿದೆ. ಬಜಾಲ್‌ ಪಲ್ಲಕೆರೆಯಲ್ಲಿ ಬಡಾವಣೆ ನಿರ್ಮಾಣಕ್ಕೆ ನೆಲವನ್ನು ಸಮತಟ್ಟುಗೊಳಿಸಲು ಕಟ್ಟಿದ್ದ ತಡೆಗೋಡೆ ಕುಸಿದು, ಮನೆಯೊಂದು ಭಾನುವಾರ ಹಾನಿಗೊಳಗಾಗಿದೆ.

‘ನಮ್ಮ ಮನೆ ಪಕ್ಕದಲ್ಲಿ ಬಾಡಿಗೆ ಮನೆಯಲ್ಲಿ ಮಗು ಸೇರಿದಂತೆ ಮೂವರು ವಾಸವಿದ್ದರು. ಭಾನುವಾರ ಮಧ್ಯಾಹ್ನ ತಡೆಗೋಡೆ ಕುಸಿಯುತದ್ದಂತೆಯೇ, ಸದ್ದು ಕೇಳಿ ಅವರು ಹೊರಗೆ ಓಡಿ ಬಂದಿದ್ದರಿಂದ ಪ್ರಾಣಹಾನಿ ತಪ್ಪಿತು. ಮಲಗುವ ಕೋಣೆ ಹಾಗೂ ಸ್ನಾನದ ಕೋಣೆ ಸಂಪೂರ್ಣ ನೆಲಕಚ್ಚಿದೆ’ ಎಂದು ಮನೆಯ ಮಾಲೀಕರ ರಾಧಾಕೃಷ್ಣ ‘ಪ್ರಜಾವಾಣಿ‘ಗೆ ತಿಳಿಸಿದರು.   

‘ಸದ್ಯಕ್ಕೆ ತಡೆಗೋಡೆಯು ಭಾಗಶಃ ಬಿದ್ದಿದೆ.  ಹಾನಿಗೆ ಒಳಗಾಗಿರುವ ಮನೆಯ ಪಕ್ಕದಲ್ಲಿ ನಮ್ಮ ಮನೆ ಇದೆ. ಇನ್ನಷ್ಟು ಮಳೆಯಾದರೆ, ನಮ್ಮ ಮನೆಗೂ ಹಾನಿ ಆಗಲಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ನಮ್ಮ ಕುಟುಂಬ ಹಾಗೂ ನಮ್ಮ ಕಟ್ಟಡದಲ್ಲಿ ಬಾಡಿಗೆಗೆ ಇದ್ದ ಕುಟುಂಬದವರು ಸಮೀಪದ ಮಹದೇವ ಭಜನಾ ಮಂದಿರದ ಸಮೀಪದ ಕಟ್ಟಡವೊಂದಕ್ಕೆ ಸ್ಥಳಾಂತರಗೊಂಡಿದ್ದೇವೆ’ ಎಂದು ಅವರು ತಿಳಿಸಿದರು. 

ADVERTISEMENT

ರಿಯಲ್ ಎಸ್ಟೇಟ್‌ ಉದ್ಯಮಿಯೊಬ್ಬರು ಮೂರು ವರ್ಷಗಳಿಂದ ಬಡಾವಣೆ ನಿರ್ಮಾಣಕ್ಕಾಗಿ ಇಲ್ಲಿ ನೆಲವನ್ನು ಸಮತಟ್ಟು ಮಾಡುತ್ತಿದ್ದಾರೆ. ಇದಕ್ಕಾಗಿ ವರ್ಷದ ಹಿಂದೆಯೇ ತಡೆಗೋಡೆ ನಿರ್ಮಿಸಿದ್ದರು. ಅದಕ್ಕೆ ಸೂಕ್ತ ತಳಪಾಯವನ್ನು ಕಟ್ಟಿಲ್ಲ. ಈ ವರ್ಷದ ಅದರ ಮೇಳೆ ಮತ್ತೆ ಮೂರು ಸಾಲು ಕೆಂಪುಕಲ್ಲಿನ ಇಟ್ಟಿಗೆ ಕಟ್ಟಿದ್ದಾರೆ. ಈ ಸಲದ ಮಳೆಯಲ್ಲಿ ಇಟ್ಟಿಗೆಯ ಭಾರಕ್ಕೆ ತಡೆಗೋಡೆಯೇ ಕುಸಿದಿದೆ ಎಂದು ಸ್ಥಳೀಯರು ತಿಳಿಸಿದರು.

‘ಈ ಬಡಾವಣೆ ನಿರ್ಮಾಣದಿಂದ ಸಮಸ್ಯೆ ಆಗುತ್ತಿರುವುದು ಇದು ಮೊದಲೇನಲ್ಲ. ಈ ಬಡಾವಣೆಯಿಂದ ಮಳೆ ನೀರು ಹರಿವಿಗೆ ಸೂಕ್ತ ವ್ಯವಸ್ಥೆ ಇಲ್ಲ. ಆರೇಳು ತಿಂಗಳ ಹಿಂದೆ ಮಳೆಯಾದಾಗ ನೆಲ ಸಮತಟ್ಟು ಮಾಡಿದ್ದ ಪ್ರದೇಶದ ಮಣ್ಣು ಹಾಗೂ ಕೆಸರು ಹರಿದು ಬಂತು  ಇಲ್ಲಿನ ಮನೆಗಳ ಒಳಗೆ ಹಾಗೂ ಅಂಗಳದಲ್ಲಿ ನಿಂತಿತ್ತು. ಬಡಾವಣೆಯ ಮಣ್ಣು ಸಾಗಿಸುವಾಗಲೂ ಇಲ್ಲಿನ ರಸ್ತೆಗಳೆಲ್ಲವೂ ಕೆಸರುಮಯವಾಗುತ್ತವೆ. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಈ ಹಿಂದೆಯ ದೂರು ನೀಡಿದ್ದರೂ ಕ್ರಮವಾಗಿಲ್ಲ’ ಎಂದು ಸ್ಥಳೀಯರು ಆರೋಪಿಸಿದರು.

ಪಾಲಿಕೆಯ ಪಂಜಿಮೊಗರು ವಾರ್ಡ್‌ನ ವಿದ್ಯಾನಗರ  ಕಳಗುಡ್ಡೆಯ ನಾಲ್ಕು ಮನೆಗಳ ಮೇಲೆ ಗುಡ್ಡ ಕುಸಿತ ಉಂಟಾಗುವ ಅಪಾಯ ಎದುರಾಗಿದೆ. ಇಲ್ಲಿ ವಾಸವಿದ್ದ ಮೇರಿ ವರ್ಗೀಸ್‌, ಗೌರಿ  ಭಾಸ್ಕರ್‌ಶಿವ ನಾಯ್ಕ್‌ ಹಾಗೂ ಚಂದ್ರ ನಾಯಕ್‌  ಕುಟುಂಬಗಳನ್ನು ಸಮೀಪದ ಪಂಜಿಮೊಗರು ಸರ್ಕಾರಿ ಶಾಲೆಯ ಕಟ್ಟಡದಲ್ಲಿ ಆರಂಭಿಸಲಾದ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಒಟ್ಟು 19 ಮಂದಿ ಈ ಕೇಂದ್ರದಲ್ಲಿ  ಆಶ್ರಯ ಪಡೆದಿದ್ದಾರೆ.  

ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ 8.30ರವರೆಗೆ ಸರಾಸರಿ 3.26 ಸೆಂ.ಮೀ ಮಳೆಯಾಗಿದೆ. ಮಂಗಳೂರು ತಾಲ್ಲೂಕಿನಲ್ಲಿ ಸರಾಸರಿ 6.7 ಸೆಂ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಗರಿಷ್ಠ.

ಪ್ರಾಕೃತಿಕ ವಿಕೋಪ– ಅಪಾಯ ತಪ್ಪಿಸಲು ಆ್ಯಪ್‌

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಹಾಗೂ  ಸಂಭವನೀಯ  ಅಪಾಯ ತಪ್ಪಿಸಲು ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಜೊತೆ ಸೇರಿ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸುದ್ದಿಗಾರರಿಗೆ ತಿಳಿಸಿದರು. ‘ಸದ್ಯಕ್ಕೆ ಜಿಲ್ಲಾ ಸಹಾಯವಾಣಿಗೆ ಬರುವ ದೂರುಗಳನ್ನು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಬರುವ ದೂರುಗಳನ್ನು ಈ ಆ್ಯಪ್‌ನಲ್ಲಿ ದಾಖಲಿಸಿ ಸಮಸ್ಯೆ ನೀಗಿಸಲು ಕೈಗೊಂಡ ಕ್ರಮಗಳ ಬಗ್ಗೆ ಉಲ್ಲೇಖಿಸುತ್ತಿದ್ದೇವೆ. ಕ್ರಮೇಣ ಸಾರ್ವಜನಿಕರೂ ಈ ಬಗ್ಗೆ ದೂರು ಅಥವಾ ಮಾಹಿತಿ ನೀಡಲು ಅವಕಾಶ ಕಲ್ಪಿಸಲಿದ್ದೇವೆ’ ಎಂದು ಅವರು ವಿವರಿಸಿದರು.  ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ತಡೆ ಕ್ರಮಗಳ ಪರಿಶೀಲನೆ ನಡೆಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗ್ರಾಮ ಮಟ್ಟಕ್ಕೆ ಪ್ರಕೃತಿ ವಿಕೋಪ ನಿರ್ವಹಣೆ  ಯೋಜನೆ ರೂಪಿಸುವಂತೆ ಸೂಚನೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ಜಿಲ್ಲೆಯಲ್ಲಿ ಸಂಭವನೀಯ ಅಪಾಯ ಎದುರಿಸುವ ಒಟ್ಟು 292 ಪ್ರದೇಶಗಳಿಗೆ ಪ್ರಕೃತಿ ವಿಕೋಪ ನಿರ್ವಹಣೆ ಯೋಜನೆ ರೂಪಿಸಿ ತುರ್ತು ಪರಿಸ್ಥಿತಿ ನಿಭಾಯಿಸಲು ಕ್ರಮವಹಿಸಲಾಗಿದೆ. ಪ್ರತಿ ಘಟಕಕ್ಕೂ ಇನ್ಸಿಡೆಂಟ್‌ ಕಮಾಂಡರ್‌ ನೇಮಿಸಲಾಗಿದ್ದು ಪ್ರಕೃತಿ ವಿಕೋಪ ನಿರ್ಹವಣೆ ಕಾಯ್ದೆಯಡಿ ಜಿಲ್ಲಾಧಿಕಾರಿಗೆ ಇರುವ ಅಧಿಕಾರವನ್ನು ಅವರಿಗೆ ವಹಿಸಲಾಗಿದೆ. ಅಭಿವೃದ್ಧಿಪಡಿಸಲಾದ ಹೊಸ ಆ್ಯಪ್‌ ತಳ ಮಟ್ಟದ ಪ್ರಕೃತಿ ವಿಕೋಪ ನಿರ್ಹವಣೆಗೂ ಸಹಕಾರಿ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.