ADVERTISEMENT

ಉಳ್ಳಾಲ | ಭಾರಿ ಮಳೆ: ಬಾವಿ ಕುಸಿತದ ಭೀತಿಯಲ್ಲಿ ನಾಗರಿಕರು 

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 13:47 IST
Last Updated 4 ಜುಲೈ 2024, 13:47 IST
ಕಲ್ಲಾಪು ಭಾಗದಲ್ಲಿ ಬಾವಿ ಕುಸಿದಿರುವುದು
ಕಲ್ಲಾಪು ಭಾಗದಲ್ಲಿ ಬಾವಿ ಕುಸಿದಿರುವುದು   

ಉಳ್ಳಾಲ: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ತಾಲ್ಲೂಕಿನ ಕಲ್ಲಾಪು ಬಳಿ ಕೆರೆಬೈಲ್, ಸೇವಂತಿಗುಡ್ಡೆಗೆ ಸಂಪರ್ಕಿಸುವ ರಸ್ತೆ ಬದಿಯ ಬಾವಿ ಕುಸಿದಿದ್ದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕಲ್ಲಾಪು ಬಳಿ ಇಬ್ರಾಹಿಂ ಎಂಬುವರ ಮಾಲೀಕತ್ವದ ಬಾಡಿಗೆ ಕಟ್ಟಡದಲ್ಲಿ ಐದು ಕುಟುಂಬಗಳು ವಾಸವಿದ್ದು, ಅವರ ಅನುಕೂಲಕ್ಕಾಗಿ ಬಾವಿ ಇದ್ದು, ಅದು ರಸ್ತೆ ಸಮೀಪದಲ್ಲೇ ಇದೆ. ಈ ಬಾವಿ ಗುರುವಾರ ಮುಂಜಾನೆ ಕುಸಿದಿದೆ.‌

ಶಾಲೆ, ಕಾಲೇಜು ವಾಹನಗಳು, ಭಾರಿ ವಾಹನಗಳು ಈ ರಸ್ತೆಯಾಗಿ ಸಂಚರಿಸಿದಂತೆ ಮುನ್ಸೂಚನೆ ನೀಡಲಾಗಿದೆ. ಉಳ್ಳಾಲ ನಗರ ಸಭೆ ಪೌರಾಯುಕ್ತ ವಾಣಿ ಆಳ್ವ, ಎಂಜಿನಿಯರ್ ತುಳಸಿದಾಸ್, ಕಂದಾಯ ನಿರೀಕ್ಷಕ ಚಂದ್ರಹಾಸ್ ಪರಿಶೀಲನೆ ನಡೆಸಿದ್ದಾರೆ.

ADVERTISEMENT

ರಸ್ತೆ ಸಮೀಪದಲ್ಲೇ ಇರುವ ಒಂದು ಮನೆಯ ಕಾಂಪೌಂಡ್ ಕುಸಿಯುವ ಹಂತದಲ್ಲಿ ಇದ್ದು, ಕಾಂಪೌಂಡ್ ತೆರವುಗೊಳಿಸಲು ನಗರ ಸಭೆ ಸೂಚನೆ ನೀಡಿದೆ. ಸ್ಥಳೀಯರಾದ ಯೂಸುಫ್, ಇಸ್ಮಾಯಿಲ್ ಮೊಹಮ್ಮದ್ ಹಸನ್, ಲತೀಫ್, ಶರೀಫ್ ಭೇಟಿ ನೀಡಿದ್ದರು.

ವರ್ಷದ ಹಿಂದೆ ಬಾವಿಯ ರಿಂಗ್ ಕುಸಿದಿತ್ತು. ಈ ಬಾರಿ ಮೇಲಿನಿಂದ ಬಾವಿ ಕುಸಿದಿದ್ದು, ಐದು ಕುಟುಂಬಗಳಿಗೆ ಕುಡಿಯಲು ನೀರು ಇಲ್ಲದಂತಾಗಿದೆ. ನಮಗೆ ನೀರಿನ ವ್ಯವಸ್ಥೆ ಮಾಡಬೇಕು. ಸಮೀಪದ ಮನೆಗೆ ನೀರಿಗೆ ಹೋದರೆ ನಿಮ್ಮ ಮಾಲೀಕರಿಗೆ ವ್ಯವಸ್ಥೆ ಮಾಡಲು ತಿಳಿಸಿ ಎನ್ನುತ್ತಾರೆ ಎಂದು ಕಟ್ಟಡದಲ್ಲಿ ವಾಸವಿರುವ ಬಾಗಲಕೋಟೆ ನಿವಾಸಿ ಮಹಾಂತೇಶ್ ಅಳಲು ತೋಡಿಕೊಂಡರು.

ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ: ಬಾಡಿಗೆ ಕಟ್ಟಡದಲ್ಲಿ ವಾಸವಿರುವ ಕುಟುಂಬಗಳನ್ನು ಸ್ಥಳಾಂತರಿಸಲು ಮಾಲೀಕರಿಗೆ ಸೂಚನೆ ನೀಡಲಾಗಿದೆ. ಸ್ಥಳಾಂತರ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ‌ಎಂದು ವಾಣಿ ಆಳ್ವ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.