ADVERTISEMENT

ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಮೃತ ಮಹೋತ್ಸವ 24ಕ್ಕೆ

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ಕುಮಾರ್ ರೈ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 3:56 IST
Last Updated 22 ಸೆಪ್ಟೆಂಬರ್ 2022, 3:56 IST
ಅಜಿತ್‌ಕುಮಾರ್‌ ರೈ
ಅಜಿತ್‌ಕುಮಾರ್‌ ರೈ   

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ ನಡೆಸುವ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಮೃತ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮವು ಸೆ.24ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ಕುಮಾರ್ ರೈ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ವಿಬಿಎಂಎಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘವನ್ನು ರಾಜ್ಯ ಸರ್ಕಾರದ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಅದಮ್ಯ ಚೇತನ ಫೌಂಡೇಷನ್ ಸಿಇಒ ತೇಜಸ್ವಿನಿ ಅನಂತಕುಮಾರ್ ಉದ್ಘಾಟಿಸುವರು’ ಎಂದರು.

ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಇನ್‌ಡೈರೆಕ್ಟ್ ಟ್ಯಾಕ್ಸಸ್ ಕಮಿಷನರರ್ ರೀನಾ ಶೆಟ್ಟಿ, ಪ್ರಶಸ್ತಿ ಪುರಸ್ಕೃತ ಮಲ್ಲಿಕಾ ಚೌಟ, ಎಸಿಎಫ್ ಹಸ್ತಾ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ‘ವಿಶಿಷ್ಟ ಕುಡ್ಲ’ ತಂಡದಿಂದ ಕಿರು ಪ್ರಹಸನ, ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ‘ಯಕ್ಷ–ಗಾನ–ನಾಟ್ಯ–ವೈಭವ’, ದೀಪಕ್ ರೈ ಪಾಣಾಜೆ ಮತ್ತು ಮಂಜು ರೈ ತಂಡದಿಂದ ‘ಹಾಸ್ಯ ಉಲ್ಲಾಸ’ ಕಾರ್ಯಕ್ರಮ ನಡೆಯಲಿದೆ ಎಂದರು.

ADVERTISEMENT

ಸ್ತ್ರೀ ಸಬಲೀಕರಣದ ಭಾಗವಾಗಿ 1941ರಲ್ಲಿ ಬಾವುಟಗುಡ್ಡೆಯ ಬಾಡಿಗೆ ಕಟ್ಟಡವೊಂದರಲ್ಲಿ ಆರು ವಿದ್ಯಾರ್ಥಿನಿಯರೊಂದಿಗೆ ಆರಂಭವಾದ ಜಿಲ್ಲೆಯ ಪ್ರಥಮ ವಿದ್ಯಾರ್ಥಿನಿ ಭವನವು, 1948ರಲ್ಲಿ ಲಾಲ್‌ಬಾಗ್‌ನಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಇದು ಬಂಟರ ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೆ, ಎಲ್ಲ ಸಮುದಾಯಗಳ ವಿದ್ಯಾರ್ಥಿನಿಯರ ಬದುಕಿಗೆ ಬೆಳಕಾಯಿತು. 75 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿನಿಯರು ಇಲ್ಲಿ ಆಶ್ರಯ ಪಡೆದಿದ್ದಾರೆ. ಅಮೃತ ಮಹೋತ್ಸವದ ನೆನಪಿಗೆ ವರ್ಷಪೂರ್ತಿ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿ ಕಾರ್ಯಕ್ರಮ ನಡೆಸಲಾಗುವುದು ಎಂದು ವಿದ್ಯಾರ್ಥಿನಿ ಭವನ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷೆ ವೀಣಾ ಟಿ. ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ಪ್ರಮುಖರಾದ ಗೋಪಾಲಕೃಷ್ಣ ಶೆಟ್ಟಿ, ಶಾಲಿನಿ ಶೆಟ್ಟಿ, ಶಾರಿಕಾ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.