ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಹತ್ಯೆಗಳ ತನಿಖೆಗೆ ಎಸ್‌ಐಟಿ ರಚಿಸಿ: ರಮಾನಾಥ ರೈ

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 7:49 IST
Last Updated 17 ಜುಲೈ 2023, 7:49 IST
   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಕೋಮು ಆಧರಿತ ಹತ್ಯೆಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಸರ್ಕಾರ ರಚಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ರಮಾನಾಥ ರೈ ಒತ್ತಾಯಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ನಡೆದ ವೆಂಕಟೇಶ ಬಾಳಿಗಾ, ಪ್ರವೀಣ್‌ ನೆಟ್ಟಾರು, ಮಸೂದ್‌, ಜಲೀಲ್‌, ಫಾಝಿಲ್‌, ದೀಪಕ್ ರಾವ್‌, ಶರತ್‌ ಮಡಿವಾಳ, ಹರೀಶ್‌ ಪೂಜಾರಿಯವರ ಹತ್ಯೆಗಳ ಹಿಂದಿರುವ ಶಕ್ತಿ ಯಾರು ಎಂಬುದನ್ನು ಪತ್ತೆ ಮಾಡಲು ಎಸ್‌ಐಟಿಯ ಅಗತ್ಯ ಇದೆ. ಈ ಹತ್ಯೆಗಳ ಹಿಂದಿರುವವರಿಗೆ ಶಿಕ್ಷೆ ಆದರೆ ಮಾತ್ರ ‌ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯ ನೆಲೆಸಲಿದೆ. ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸಲು ಸಮಾನ ಮನಸ್ಕ ಸಂಘಟನೆಗಳು ಹಾಗೂ ಜಾತ್ಯತೀತ ಮನೋಭಾವದ ಪಕ್ಷಗಳ ಮುಖಂಡರು ಸೇರಿ ಸಭೆ ನಡೆಸಿದ್ದೇವೆ. ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿ ಈ ಕುರಿತು ಮನವಿ ಸಲ್ಲಿಸಲಿದ್ದೇವೆ’ ಎಂದರು.

‘ಇಂತಹ ಹತ್ಯೆಗಳ ಆರೋಪಿಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಯಾರೂ ಇಲ್ಲ. ಆದರೆ, ಬಿಜೆಪಿ ಕಾರ್ಯಕರ್ತರು ಸಾಕಷ್ಟು ಮಂದಿ ಇದ್ದಾರೆ. ಈ ರೀತಿಯ ಹತ್ಯೆ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕಿದೆ. ಹೆಣದ ಮೇಲಿನ ರಾಜಕಾರಣ ಬಿಜೆಪಿಯ ಚಾಳಿ. ಕಾಂಗ್ರೆಸ್‌ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹತ್ಯೆ ರಾಜಕಾರಣವನ್ನು ಮತ್ತೆ ಶುರು ಮಾಡಬಹುದು. ಅದಕ್ಕಾಗಿ ಜನ ಜಾಗರೂಕತೆಯಿಂದ ಇರಬೇಕು’ ಎಂದರು.

ADVERTISEMENT

'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಆಡಳಿತವಿದ್ದಾಗ ಮಾತ್ರ ರಾಜಕೀಯ ಹತ್ಯೆಗಳು ನಡೆಯುತ್ತವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳೂ ಆಗಿಲ್ಲ. ಈ ರೀತಿ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಬೇಕು’ ಎಂದರು.

‘ಕೊಲೆ ರಾಜಕೀಯ ಮಾಡುವ ಪಕ್ಷ ಬಿಜೆಪಿ. ಕೋಮು ಪ್ರಚೋದನಕಾರಿ ಭಾಷಣ ಮಾಡುವವರು ಯಾರು, ಕಡಿ, ಹೊಡಿ, ಬಡಿ ಎಂದು ಹೇಳಿಕೆ ನೀಡುವವರು ಯಾರು ಎಂದು ಜನರಿಗೆ ಗೊತ್ತು. ಕಾಂಗ್ರೆಸ್‌ ಪಕ್ಷದ ಯಾರೂ ಈ ರೀತಿ ಹೇಳಿಕೆ ನೀಡುವುದಿಲ್ಲ. ರಾಜ್ಯದ ಹತ್ಯೆಗಳಿಗೆಲ್ಲ ಸಿದ್ಧರಾಮಯ್ಯ ಹೊಣೆ ಎಂದು ಗೂಬೆ ಕೂರಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಎಂದಾದರೂ ಹೊಡಿ, ಬಡಿ, ಭಾಷೆ ಬಳಸಿದ್ದಾರಾ. ಆದರೆ, ನಳಿನ್ ಕುಮಾರ್‌ ಆ ರೀತಿ ಮಾತನಾಡಿದ್ದಾರೆ’ ಎಂದರು.

‘ ಈ ಹಿಂದೆ ಬಂಟ್ವಾಳದಲ್ಲಿ ಹರೀಶ್ ಪೂಜಾರಿಯನ್ನು ಕೊಲೆ ಮಾಡಿಸಿದವರೇ ಶ್ರದ್ಧಾಂಜಲಿ ಸಭೆಯಲ್ಲಿ ಭಾಷಣ ಮಾಡಿದ್ದರು. ಹತ್ಯೆಯನ್ನು ಬೇರೊಬ್ಬರ ತಲೆಗೆ ಕಟ್ಟುವ ಯತ್ನ ಮಾಡಿದ್ದರು. ಯಾರಾದರೂ ಸತ್ತರೆ ಬಿಜೆಪಿಯವರಿಗೆ ಸಂತೋಷ ಆಗುತ್ತದೆ. ಸಾವನ್ನು ಕಾಂಗ್ರೆಸ್‌ನವರು ಯಾವತ್ತೂ ಸಂಭ್ರಮಿಸುವುದಿಲ್ಲ. ಆದರೆ, ಶರತ್ ಮಡಿವಾಳ ಸತ್ತಾಗ ಬಿಜೆಪಿಯವರು ತಮ್ಮ ಒಬ್ಬ ನಾಯಕನನ್ನು ಎತ್ತಿಕೊಂಡು ಮೆರವಣಿಗೆ ಮಾಡಿದ್ದರು’ ಎಂದು ನೆನಪಿಸಿದರು.

‘ಕಾಂಗ್ರೆಸ್‌ನ ಭಾರಿ ಗೆಲುವಿನ ಬಳಿಕ ಹಾಗೂ ಚುನಾವಣೆಗೆ ಮುನ್ನ ನೀಡಿದ್ದ ಗ್ಯಾರಂಟಿಗಳ ಅನುಷ್ಠಾನದ ಬಳಿಕ ಬಿಜೆಪಿಯವರು ನೀರಿನಿಂದ ಹೊರತೆಗೆದ ಮೀನಿನಂತೆ ವಿಲವಿಲ ಒದ್ದಾಡುತ್ತಿದ್ದಾರೆ. ಬಡವರ ಪರವಾಗಿರುವ ಈ ಕಾರ್ಯಕ್ರಮಗಳ ಕುರಿತ ಅಪಪ್ರಚಾರವೇ ಅವರಿಗೆ ತಿರುಗುಬಾಣ ಆಗುತ್ತದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಶಶಿಧರ್ ಹೆಗ್ಡೆ, ಪಕ್ಷದ ಮುಖಂಡರಾದ ಶಾಹುಲ್ ಹಮೀದ್, ಸುರೇಂದ್ರ ಕಂಬ್ಳಿ, ಪದ್ಮನಾಭ ಕೋಟ್ಯಾನ್‌, ಜಯಶೀಲ ಅಡ್ಯಂತಾಯ, ಅಪ್ಪಿ, ಗಣೇಶ್ ಪೂಜಾರಿ, ಸಬೀರ್ ಎಸ್, ಶುಭೋದಯ ಆಳ್ವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.