ಮಂಗಳೂರು: ಕಂಕನಾಡಿಯಲ್ಲಿ ಮಸೀದಿಯ ಹೊರಗೆ ಪ್ರಾರ್ಥನೆ ಮಾಡಿದ್ದಕ್ಕೆ ಸುಮೊಟೊ ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಎಲ್ಲ ಧರ್ಮಗಳ ಕಾರ್ಯಕ್ರಮಗಳು ಕೆಲವೊಮ್ಮೆ ರಸ್ತೆಯಲ್ಲಿ ನಡೆಯುತ್ತವೆ. ಮಸೀದಿಯಲ್ಲಿ ಸ್ಥಳಾವಕಾಶ ಇಲ್ಲದಾಗ ಹೊರಗೆ ನಮಾಜ್ ಮಾಡಿರಬಹುದು. ಅದನ್ನು ತಪ್ಪು ಎಂದು ಹೇಳಲು ಆಗದು. ಅಲ್ಲಿ ನಡೆದಿರುವುದು ಪ್ರಾರ್ಥನೆ, ದೇವರು ಎಲ್ಲರಿಗೂ ಒಬ್ಬನೇ ಎಂದರು.
ಜಿಲ್ಲೆಯಲ್ಲಿ ಅನೇಕ ಬಾರಿ ಬೇರೆ ಬೇರೆಯವರಿಂದ ಪ್ರಚೋದನಕಾರಿ ಮಾತು ವ್ಯಕ್ತವಾದಾಗಲೂ ಈ ರೀತಿ ಸುಮೊಟೊ ಪ್ರಕರಣ ದಾಖಲಿಸಿರಲಿಲ್ಲ. ಈಗ ಇಂತಹ ಸಣ್ಣ ವಿಷಯವನ್ನು ರಂಪಾಟ ಮಾಡುವ ಅಗತ್ಯ ಇರಲಿಲ್ಲ. ಪ್ರಾರ್ಥನೆಯ ವಿಡಿಯೊ ಮಾಡಿ, ಅದನ್ನು ಪ್ರಚಾರ ಮಾಡುವ ಮೂಲಕ ಸೌಹಾರ್ದಕ್ಕೆ ಧಕ್ಕೆ ತರುವ ಕಾರ್ಯ ಮಾಡಿದವರ ಮೇಲೆ ಕ್ರಮ ಆಗಬೇಕು ಎಂದು ಹೇಳಿದರು.
ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕಿಳಿಸಿದೆ. ಅವರಿಗೆ ಮತದಾರರು ಬೆಂಬಲ ನೀಡಬೇಕು ಎಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪದ್ಮರಾಜ್ ಆರ್, ಅಶ್ರಫ್ ಕೆ., ಅಪ್ಪಿ, ಇಬ್ರಾಹಿಂ ಕೋಡಿಜಾಲ್, ಶುಭೋದಯ ಆಳ್ವ, ಶಶಿಕಲಾ, ದೀಪಕ್ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.