ADVERTISEMENT

ರೈಲು ಬೋಗಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಕಠಿಣ ಸಜೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 4:31 IST
Last Updated 29 ಅಕ್ಟೋಬರ್ 2024, 4:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಇಲ್ಲಿನ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲು ಬೋಗಿಯಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿದ ಬಂಟ್ವಾಳ ತಾಲ್ಲೂಕಿನ ಇರ್ವತ್ತೂರು ಗ್ರಾಮದ ಅಬುತಾಹಿರ್ ಅಲಿಯಾಸ್‌ ಶಾಝಿಲ್‌ಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಮತ್ತು ತ್ವರಿತಗತಿ ವಿಶೇಷ ನ್ಯಾಯಾಲಯ ಮತ್ತು ಪೊಕ್ಸೊ ವಿಶೇಷ ನ್ಯಾಯಾಲಯ (ಎಎಫ್.ಟಿ.ಎಸ್.ಸಿ–2)  20 ವರ್ಷಗಳ ಕಠಿಣ ಶಿಕ್ಷೆ ಮತ್ತು ₹ 50 ಸಾವಿರ ದಂಡ ವಿಧಿಸಿದೆ.

‘ಫೋನ್‌ನಲ್ಲಿ ಪರಿಚಯವಾಗಿದ್ದ ಅಬುತಾಹಿರ್ ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿದ್ದ. 2023ರ ಜೂನ್ 22ರಂದು ಶಾಲೆಗೆ ತೆರಳುತ್ತಿದ್ದ ಬಾಲಕಿಯನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಕರೆತಂದು, ಪ್ಲಾಟ್ ಫಾರ್ಮ್ ನಂ 3ರಲ್ಲಿ ನಿಂತಿದ್ದ ಮಂಗಳೂರು–ಮಡಗಾಂವ್ ರೈಲಿನ  ಬೋಗಿಯೊಂದರ ಸೀಟಿನಲ್ಲಿ ಆಕೆಯನ್ನು ಮಲಗಿಸಿ ರಾತ್ರಿ 11ರಿಂದ 12 ಗಂಟೆಯ ನಡುವೆ ಆತ್ಯಾಚಾರ ಮಾಡಿದ್ದ. ಮಗಳು ಕಾಣೆಯಾದ ಬಗ್ಗೆತಾಯಿ ಪುಂಜಾಲಕಟ್ಟೆ ಠಾಣೆಗೆ ಅಂದೇ ದೂರು ನೀಡಿದ್ದರು. ಬಾಲಕಿಯು ರಾತ್ರಿಯೇ ತಾಯಿಗೆ ಕರೆ ಮಾಡಿ ನಡೆದ ವಿಷಯ ತಿಳಿಸಿದ್ದಳು. ತಾಯಿ ನೀಡಿದ ಮಾಹಿತಿ ಆಧರಿಸಿ  ಪೊಲೀಸರು  ರೈಲು ನಿಲ್ದಾಣದಲ್ಲಿ ಸಂತ್ರಸ್ತ ಬಾಲಕಿಯನ್ನು ರಕ್ಷಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದರು. ‌ಪುಂಜಾಲಕಟ್ಟೆ ಠಾಣೆಯ ಆಗಿನ ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ಮತ್ತು ನಾಗೇಶ್ ಕೆ. ತನಿಖೆ ಪೂರ್ಣಗೊಳಿಸಿ  ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

‘ಅಬುತಾಹಿರ್ ಅತ್ಯಾಚಾರ ನಡೆಸಿದ್ದಕ್ಕೆ  (ಐಪಿಸಿ ಸೆಕ್ಷನ್ 376(3)) ಮತ್ತು ಪೊಕ್ಸೊ ಸೆಕ್ಷನ್‌ 4(2)ರ ಅಡಿ  20 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು ₹ 50 ಸಾವಿರ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಮತ್ತು ಎಫ್.ಟಿ.ಎಸ್.ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಮಾನು ಕೆ. ಎಸ್. ಅವರು ಸೋಮವಾರ ಆದೇಶ ಮಾಡಿದ್ದಾರೆ. ಬಾಲಕಿಯ ಅಪಹರಣ ನಡೆಸಿದ್ದಕ್ಕೆ ಐಪಿಸಿ  ಸೆಕ್ಷನ್‌ 363ರಡಿ 3 ವರ್ಷ ಸಾದಾ ಶಿಕ್ಷೆ ಮತ್ತು ₹  10 ಸಾವಿರ ದಂಡ ವಿಧಿಸಿದ್ದಾರೆ. ದಂಡದಲ್ಲಿ ₹ 50 ಸಾವಿರವನ್ನು ಸಂತ್ರಸ್ತ ಬಾಲಕಿಗೆ ಪಾವತಿಸುವಂತೆ  ಆದೇಶಿಸಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸಂತ್ರಸ್ತರ ಪರಿಹಾರ ಯೋಜನೆಯಡಿ ಹೆಚ್ಚುವರಿಯಾಗಿ ₹ 1.5 ಲಕ್ಷ  ಪರಿಹಾರವನ್ನು ಸಂತ್ರಸ್ತೆಗೆ ನೀಡುವಂತೆ ನಿರ್ದೇಶನ ನೀಡಿದ್ದಾರೆ’ ಎಂದು ಸಂತ್ರಸ್ತೆ ಪರ ವಾದಿಸಿದ್ದ ಸರ್ಕಾರಿ ವಕೀಲ ಕೆ.ಬದರಿನಾಥ ನಾಯರಿ ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.