ADVERTISEMENT

ಚೂರಿ ಇರಿತ ಪೂರ್ವಯೋಜಿತ ಕೃತ್ಯ: ಅಶೋಕ್‌

ಬೋಳಿಯಾರ್‌: ಸಂತ್ರಸ್ತರ ಭೇಟಿ ಮಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 3:23 IST
Last Updated 13 ಜೂನ್ 2024, 3:23 IST

ಮಂಗಳೂರು: ‘ಬೋಳಿಯಾರ್‌ನಲ್ಲಿ ಬಿಜೆಪಿಯ ಇಬ್ಬರು ಕಾರ್ಯಕರ್ತರಿಗೆ ಡ್ಯಾಗರ್‌ನಿಂದ ಇರಿದಿರುವುದು ಪೂರ್ವ ಯೋಜಿತ ಕೃತ್ಯ. ಇದು ಆಕಸ್ಮಿಕವಾಗಿ ನಡೆದ ಘಟನೆಯಾಗಿದ್ದರೆ ಕೈಯಿಂದ ಅಥವಾ ದೊಣ್ಣೆಯಿಂದ ಹಲ್ಲೆ ನಡೆಸುತ್ತಿದ್ದರು. ಕೃತ್ಯವೆಸಗಿದವರ ಕೈಯಲ್ಲಿ ಡ್ಯಾಗರ್‌ ಹೇಗೆ ಬಂತು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಪ್ರಶ್ನಿಸಿದರು.

ಚೂರಿ ಇರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರನ್ನು ಬುಧವಾರ ಭೇಟಿಯಾದ ಬಳಿಕ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಮೆರವಣಿಗೆ ವೇಳೆ ಬಿಜೆಪಿ ಕಾರ್ಯಕರ್ತರು ಪ್ರಚೋದನಕಾರಿಯಾಗಿ ಘೋಷಣೆ ಕೂಗಿದ್ದಾರೆ ಎಂದು ಪೊಲೀಸ್‌ ಕಮಿಷನರ್‌ ಹೇಳಿದ್ದಾರೆ. ಈ ಬಗ್ಗೆ ವಿಡಿಯೊ ದಾಖಲೆ ಇದ್ದರೆ ಅವರು ಬಿಡುಗಡೆ ಮಾಡಲಿ. ಘಟನೆಯ ವಿಡಿಯೊವನ್ನು ನಾನು ಪೂರ್ತಿಯಾಗಿ ನೋಡಿದ್ದೇನೆ. ಅದರಲ್ಲಿ ಕಾರ್ಯಕರ್ತರು ‘ಭಾರತ್ ಮಾತಾ ಕಿ ಜೈ’ ಎನ್ನುವುದು ಬಿಟ್ಟರೆ ಬೇರೆ ಘೋಷಣೆ ಕೂಗಿಲ್ಲ. ಪಾಕಿಸ್ತಾನ್‌, ಇನ್ನೊಂದು  ಸ್ತಾನ್‌ , ಖಬರ್‌ಸ್ತಾನ್‌  ಎಂದು ಯಾರೂ ಹೇಳಿಲ್ಲ. ಅಷ್ಟಕ್ಕೂ ಅವರು ಮಸೀದಿ ಒಳಗಡೆ ನುಗ್ಗಿ ಆ ರೀತಿ ಘೋಷಣೆ ಕೂಗಿಲ್ಲ. ಅವರು ಕೂಗಿದ್ದು ಸಾರ್ವಜನಿಕ ರಸ್ತೆಯಲ್ಲಿ. ಆ ರೀತಿ ಘೋಷಣೆ ಕೂಗಿದ್ದರಲ್ಲಿ ಕೋಪ ಬರಿಸುವಂತಹದ್ದು ಏನಿದೆ’ ಎಂದರು.

ADVERTISEMENT

‘ನರೇಂದ್ರ ಮೋದಿಯವರು ಮೂರನೇ ಸಲ ಪ್ರಧಾನಿ ಆಗಿದ್ದಕ್ಕೆ ದೇಶದಾದ್ಯಂತ ಸಂಭ್ರಮಾಚರಣೆಗಳು ನಡೆದಿವೆ. ಎಲ್ಲೂ ಗಲಾಟೆ ಆಗಿಲ್ಲ. ಆದರೆ ಮಂಗಳೂರು ಪ್ರದೇಶದಲ್ಲೇ ಏಕೆ ಈ ರೀತಿ ಆಗುತ್ತಿದೆ. ದುಷ್ಕರ್ಮಿಗಳು ದ್ವಿಚಕ್ರ ವಾಹನಗಳಲ್ಲಿ ಬೆನ್ನಟ್ಟಿ,  ಡ್ಯಾಗರ್‌ನಿಂದ ಹೊಟ್ಟೆಗೆ ಆಳವಾಗಿ ಚುಚ್ಚಿದ್ದಾರೆ. ಡ್ಯಾಗರ್ ಬಳಸುವುದು ವೃತ್ತಿಪರರು. ಇದೊಂದು ಕೊಲೆ ಪ್ರಯತ್ನ’ ಎಂದು ಅವರು ಆರೋಪಿಸಿದರು.

‘ಚೂರಿ ಇರಿತ ಪ್ರಕರಣ ನಡೆದ ಒಂದು ದಿನ ಬಳಿಕ, ಆಸ್ಪತ್ರೆಯಲ್ಲಿದ್ದವರ ಮೇಲೂ ಎಫ್‌ಐಆರ್‌ ದಾಖಲಾಗಿದೆ. ಪೊಲೀಸರು ಅಷ್ಟು ಹೊತ್ತು ಮಣ್ಣು ತಿನ್ನುತ್ತಿದ್ದರೇ. ಅಮಾಯಕರ ವಿರುದ್ಧ ಪ್ರಕರಣ ದಾಖಲಿಸಿ ಮುಖ್ಯ ಪ್ರಕರಣವನ್ನು ದುರ್ಬಲಗೊಳಿಸುವ ಪ್ರಯತ್ನವಿದು. ಅಮಾಯಕರ ಮೇಲೆ ದಾಖಲಿಸಲಾದ ಪ್ರಕರಣವನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಬ್ಬರನ್ನೂ ಭೇಟಿ ಮಾಡಿದ್ದೇನೆ, ಅವರಲ್ಲಿ ಹರೀಶ್‌ ಅವರ ಸ್ಥಿತಿ ಈಗಲೂ ಚಿಂತಾಜನಕವಾಗಿದೆ. ಅವರಿಬ್ಬರ ಚಿಕಿತ್ಸೆ ವೆಚ್ಚವನ್ನೂ ಸರ್ಕಾರಿವೇ ಭರಿಸಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.