ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಕರ ಸಂಕ್ರಮಣದಂದು ನಡೆಯುವ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವರ ಕುಕ್ಕೆಲಿಂಗ ಜಾತ್ರೋತ್ಸವದ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯ ದೇವರ ಚಿಕ್ಕರಥೋತ್ಸವ ಜರುಗಿತು. ದೇವಳದ ಅರ್ಚಕ ರಾಮಕೃಷ್ಣ ನೂರಿತ್ತಾಯ ಅವರ ಉತ್ಸವದ ವಿಧಿವಿಧಾನ ನೆರವೇರಿಸಿದರು.
ರಥೋತ್ಸವದ ಸಂದರ್ಭದಲ್ಲಿ ಹೊಸಳಿಗಮ್ಮ ದೈವವು ದೇವರ ದರ್ಶನ ಪಡೆಯಿತು. ಮುಂಜಾನೆ ರಥಬೀದಿಗೆ ಬಂದ ದೇವರ ಪ್ರತಿಮೆಯನ್ನು ಚಿಕ್ಕರಥದಲ್ಲಿ ಇರಿಸಿ ಪೂಜೆ ನೆರವೇರಿಸಲಾಯಿತು. ನಂತರ ರಥೋತ್ಸವವವು ರಥಬೀದಿ ವೃತ್ತದ ವರೆಗೆ ನಡೆಯಿತು. ದೇವರು ಪ್ರತಿಮೆಯನ್ನು ಪಾಲಕಿಯಲ್ಲಿ ಸವಾರಿ ಮಂಟಪಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನ ಸಂಕ್ರಮಣ ಕಟ್ಟೆಯಲ್ಲಿ ಪೂಜೆ ನೆರವೇರಿತು.
ರಥೋತ್ಸವದ ಬಳಿಕ ದೇವರಿಗೆ ಗೋಪುರದ ಬಳಿ ನಿವಾಳಿ ಸಮರ್ಪಿಸಲಾಯಿತು. ದೇವಳದ ಅಧಿಕಾರಿಗಳಿಗೆ ಪ್ರಸಾದ ನೀಡಲಾಯಿತು. ದೇವಳದ ಹೊರಾಂಗಣದ ದ್ವಾದಶಿ ಮಂಟಪದಲ್ಲಿ ಮಯೂರ ವಾಹನ ಕುಕ್ಕೆಸುಬ್ರಹ್ಮಣ್ಯನಿಗೆ ಪೂಜೆ ನೆರವೇರಿತು.
ದೇವಳದ ಪ್ರಧಾನ ಅರ್ಚಕ ಸೀತಾರಾಮ ಯಡಪಡಿತ್ತಾಯ ಅವರ ನೇತೃತ್ವದಲ್ಲಿ 108ಕಾಯಿ ಗಣಪತಿ ಹೋಮ ದೇವಳದ ಒಳಾಂಗಣದಲ್ಲಿ ನೆರವೇರಿತು. ಭಾನುವಾರ ರಾತ್ರಿ ಕುಕ್ಕೆಲಿಂಗ ದೇವರ ಜಾತ್ರೋತ್ಸವದ ಪ್ರಯುಕ್ತ ದೇವರ ಉತ್ಸವಗಳು ಹೊರಾಂಗಣದಲ್ಲಿ ನೆರವೇರಿದವು. ಈ ಸಂದರ್ಭ ಕಾಚುಕುಜುಂಬ ದೈವದ ನಡಾವಳಿ ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ದೇವಳದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿಜಿಎಸ್ಎನ್ ಪ್ರಸಾದ್, ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಲೋಕೇಶ್ ಮುಂಡೋಕಜೆ, ವನಜಾ ವಿ.ಭಟ್, ಶೋಭಾ ಗಿರಿಧರ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್. ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.