ಮಂಗಳೂರು: ಹೊಸ ಶಿಕ್ಷಣ ನೀತಿಯಲ್ಲಿ ಮಾಡಿರುವ ಶಿಫಾರಸುಗಳು ಮತ್ತು ಭಾಷಾ ಮಾಧ್ಯಮಕ್ಕೆ ಸಂಬಂಧಿಸಿ ನ್ಯಾಯಾಲಯ ನೀಡಿರುವ ತೀರ್ಪುಗಳು ಪರಸ್ಪರ ತಾಳೆಯಾಗುವುದಿಲ್ಲ. ಹೀಗಾಗಿ ದೇಶದಲ್ಲಿ ತಾಯ್ನುಡಿಗಳನ್ನು ಉಳಿಸಲು ಸಾಂವಿಧಾನಿಕ ನಡೆಯ ಅಗತ್ಯವಿದೆ ಎಂದು ನವದೆಹಲಿ ಜೆಎನ್‌ಯುನ ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ಅಖಿಲ ಭಾರತ ಯುವಜನ ಒಕ್ಕೂಟ, ಮಂಗಳೂರಿನ ಸಮದರ್ಶಿ ವೇದಿಕೆ ಮತ್ತು ಕರ್ನಾಟಕ ಥಿಯೊಲಾಜಿಕಲ್ ರೀಸರ್ಚ್ ಇನ್‌ಸ್ಟಿಟ್ಯೂಟ್, ನಗರದ ಸಹೋದಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ವಿಚಾರ ಸಂಕಿರಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಭಾರತೀಯ ಭಾಷೆಗಳು ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.
ದೇಶಿ ಭಾಷೆಗಳನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ಸರ್ಕಾರದ್ದು ಎಂದು ಶಿಕ್ಷಣ ನೀತಿ ಹೇಳುತ್ತದೆ. ಆದರೆ ಕೇಂದ್ರ ಸರ್ಕಾರ ಹಿಂದಿಯನ್ನು ಬೆಳೆಸಲು ಮತ್ತು ಆರ್‌ಎಸ್‌ಎಸ್‌ನವರು ಸಂಸ್ಕೃತ ವಿಜೃಂಭಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ದೇಶದ ಇತರ ಭಾಷೆಗಳೆಲ್ಲ ಮಾನವ ಸಂಪನ್ಮೂಲ ಇಲಾಖೆಯ ಅಧೀನದಲ್ಲಿದ್ದರೆ ಹಿಂದಿಗೆ ಗೃಹ ಖಾತೆಯ ಆಸರೆ. ಹೊಸ ಶಿಕ್ಷಣ ನೀತಿ ಜಾರಿಗೆ ಬಂದ ನಂತರ ಈ ತಾರತಮ್ಯ ಬೃಹದಾಕಾರವಾಗಿ ಬೆಳೆದಿದೆ ಎಂದು ಅವರು ಹೇಳಿದರು.
ಕನ್ನಡದ ಬೆಳವಣಿಗೆ ಪ್ರಮಾಣ ಶೇಕಡ 3.75!
ಭಾರತವು ಹಲವು ಭಾಷೆಗಳಿಂದ ಕಂಗೊಳಿಸುತ್ತಿರುವ ರಂಗೋಲಿ. ವೈವಿಧ್ಯಮಯ ಭಾಷೆಗಳ ನಡುವೆ ಎಲ್ಲರೂ ಬದುಕುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾಷೆಗೆ ಸಂಬಂಧಿಸಿ ಮಾಡಿರುವ ಶಿಫಾರಸುಗಳಲ್ಲಿ ಎಲ್ಲವನ್ನೂ ನಿರಾಕರಿಸುವಂತಿಲ್ಲ. ಆದರೆ ಭಾಷಾ ಗಣತಿಯ ನಿರ್ಲಕ್ಷ್ಯದಿಂದ ಉಂಟಾಗಿರುವ ಸಮಸ್ಯೆಗಳು ಬೆಳೆಯದಂತೆ ನೋಡಿಕೊಳ್ಳಬೇಕಾಗಿದೆ. ಹೊಸ ಶಿಕ್ಷಣ ನೀತಿ ಕರ್ನಾಟಕದಲ್ಲಿ ಮಾತ್ರ ಜಾರಿಗೆ ಬಂದಿರುವ ಕಾರಣ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ. 2011ರ ಗಣತಿಯ ಪ್ರಕಾರ ಹಿಂದಿ ಮಾತನಾಡುವವರ ಸಂಖ್ಯೆ 66 ಕೋಟಿ ಆಗಿದ್ದು ದೇಶದ ಶೇಕಡ 56 ಜನರು ಮಾತನಾಡುವ ಭಾಷೆಯಾಗಿದೆ. ಕನ್ನಡದ ಬೆಳವಣಿಗೆ ಅತಿ ಕಡಿಮೆಯಾಗಿದ್ದು ಶೇಕಡ 3.75 ಎಂದು ದಾಖಲಾಗಿದೆ. ಇಂಥ ಲೆಕ್ಕಗಳು ಭಾಷೆಯ ಮೇಲೆ ತೀವ್ರ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಬಿಳಿಮಲೆ ಆತಂಕ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಉಪಭಾಷೆಗಳೂ ಸೇರಿ 72 ಭಾಷೆಗಳು ಇವೆ. ಇಲ್ಲಿ ಕನ್ನಡಕ್ಕೇ ಧಕ್ಕೆಯಾಗಿರುವಾಗ ಇತರ ಸಣ್ಣ ಭಾಷೆಗಳು ಅವನತಿಯತ್ತ ಸಾಗುತ್ತಿವೆ ಎಂಬುದರಲ್ಲಿ ಸಂದೇಹವಿಲ್ಲ. ಭಾರತದಲ್ಲಿ ಮಾತೃಭಾಷೆಗಳನ್ನು ಉಳಿಸಲು ನೀತಿ ಇಲ್ಲದ ಕಾರಣ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ತ್ರಿಭಾಷಾ ಸೂತ್ರವೂ ಪರಿಣಾಮಕಾರಿಯಾಗಲಿಲ್ಲ. ಇದರ ಪರಿಹಾರಕ್ಕೆ ಸಂವಿಧಾನದ ತಿದ್ದುಪಡಿಯೊಂದೇ ದಾರಿ ಎಂದು ಅವರು ನುಡಿದರು.
ಪುಸ್ತಕ ಬಿಡುಗಡೆಯ ಮೂಲಕ ವಿಚಾರಸಂಕಿರಣ ಉದ್ಘಾಟಿಸಿದ ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಎಂ. ವಾಟ್ಸನ್, ಶತಮಾನಗಳಿಂದ ಶಿಕ್ಷಣ ಒಂದು ವರ್ಗಕ್ಕೆ ಸೀಮಿತವಾಗಿತ್ತು. ಕ್ರೈಸ್ತ ಮಿಷನರಿಗಳು ಅದನ್ನು ಎಲ್ಲರಿಗೂ ತಲುಪಿಸಿದರು ಎಂದರು. ಹೊಸತು ಪತ್ರಿಕೆಯ ಸಂಪಾದಕ ಸಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಶಾಲಾ ಶಿಕ್ಷಕ ಕುರಿತು ಶಿಕ್ಷಣ ತಜ್ಞ ನಿರಂಜನಾರಾಧ್ಯ, ರಾಷ್ಟ್ರೀಯ ಶಿಕ್ಷಣ ನೀತಿ: ಪಠ್ಯ ಹಾಗೂ ಶಿಕ್ಷಣ ಕ್ರಮ ಕುರಿತು ಪುತ್ತೂರಿನ ಡಾ. ಸುಕುಮಾರ ಗೌಡ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ವೈದ್ಯಕೀಯ ಶಿಕ್ಷಣ ಕುರಿತು ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿದರು. ಎಐವೈಎಫ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ.ಸಂತೋಷ್ ಇದ್ದರು. ಕಲ್ಲೂರು ನಾಗೇಶ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.