ಮಂಗಳೂರು: ಝೀ ಕನ್ನಡ ಟಿ.ವಿ.ವಾಹಿನಿಯ 'ಡ್ರಾಮ ಜೂನಿಯರ್ಸ್' ಸ್ಪರ್ಧೆಯ ವಿಜೇತೆ ರಿಷಿಕಾ ಕುಂದೇಶ್ವರ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ಇಲ್ಲಿ ಸನ್ಮಾನಿಸಲಾಯಿತು.
ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಡಾ.ಎಂ.ಮೋಹನ ಆಳ್ವ, ‘ಬಾಲ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ತಂದೆ -ತಾಯಿಯ ಪಾತ್ರ ಮಹತ್ವದ್ದು. ರಿಷಿಕಾ ಅದ್ಭುತ ಕಲಾವಿದೆಯಾಗಿ ಬೆಳೆಯಲಿ’ ಎಂದು ಹಾರೈಸಿದರು.
ನಟ, ಸಿನಿಮಾ ನಿರ್ದೇಶಕ ದೇವದಾಸ ಕಾಪಿಕಾಡ್, ‘ಯಕ್ಷಗಾನ, ನಾಟಕ, ಸಂಗೀತ, ಛದ್ಮವೇಷಗಳೆಲ್ಲದಕ್ಕೂ ಸೈ ಎನಿಸಿರುವ ರಿಷಿಕಾ ಬಹುಮುಖ ಪ್ರತಿಭೆ. ಅಭಿನಯದ ವೇಳೆ ಭಾವಗಳ ಏರಿಳಿತ ನಿರ್ವಹಣೆ, ಚುರುಕುತನ, ಪಾತ್ರದ ಒಳಗೆ ಇಳಿದು ಅಭಿನಯಿಸುವ ರೀತಿಗೆ ಈ ಕಾರ್ಯಕ್ರಮದ ತೀರ್ಪುಗಾರರು ಮನಸೋತಿದ್ದರು. ಸಣ್ಣ ಪ್ರಾಯದಲ್ಲೇ ಆಕೆ ಮಾಡಿದ ಸಾಧನೆ ಇತರ ಚಿಣ್ಣರಿಗೂ ಸ್ಪೂರ್ತಿ. ಆಕೆ ತುಳುನಾಡಿನ ಮುತ್ತು’ ಎಂದರು.
ಸನ್ಮಾನ ಸ್ವೀಕರಿಸಿದ ರಿಷಿಕಾ, ‘ನಾನು ಪತ್ರಕರ್ತರ ಕುಟುಂಬದವಳು. ಎಲ್ಲರೂ ಮನೆ ಮಗಳ ರೀತಿ ನಡೆಸಿಕೊಂಡಿದ್ದೀರಿ. ಮನೆಯವರೇ ಸೇರಿ ನನ್ನನ್ನು ಸನ್ಮಾನಿಸಿದಂತೆ ಭಾಸವಾಗುತ್ತಿದೆ’ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಅಶೋಕನಗರ ಎಸ್‌ಡಿಎಂ ಪ್ರೌಢಶಾಲೆಯ ಸಂಚಾಲಕಿ ಶ್ರುತಾ ಜಿತೇಶ್, ರಿಷಿಕಾ ಪೋಷಕರಾದ ಪತ್ರಕರ್ತ ಜಿತೇಂದ್ರ ಕುಂದೇಶ್ವರ, ತಾಯಿ ಸಂಧ್ಯಾ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.