ADVERTISEMENT

ನದಿ ಅಭಿಮುಖ ಯೋಜನೆ–ಸಭೆ ಅರ್ಧದಲ್ಲೇ ಮೊಟಕು

ಸ್ಮಾರ್ಟ್‌ಸಿಟಿ ಅಧಿಕಾರಿಗೆ ಪರಿಸರ ಕಾರ್ಯಕರ್ತರಿಂದ, ಸ್ಥಳೀಯರಿಂದ ಪ್ರಶ್ನೆಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 5:53 IST
Last Updated 1 ಫೆಬ್ರುವರಿ 2024, 5:53 IST
ಸಭೆಯಲ್ಲಿ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು – ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು – ಪ್ರಜಾವಾಣಿ ಚಿತ್ರ   

ಮಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ನದಿ ಅಭಿಮುಖ ( ರಿವರ್ ಫ್ರಂಟ್) ಯೋಜನೆ ಕುರಿತು ಮಂಗಳಾದೇವಿಯಲ್ಲಿ ಬುಧವಾರ ಏರ್ಪಡಿಸಿದ್ದ ಮಾಹಿತಿ ಸಭೆ ಸಾರ್ವಜನಿಕರ ಪ್ರತಿರೋಧದಿಂದಾಗಿ ಅರ್ಧದಲ್ಲೇ ಮೊಟಕುಗೊಂಡಿತು.

ಈ ಯೋಜನೆ ಅನುಷ್ಠಾನದಲ್ಲಿ ಆಗಿರುವ ಲೋಪಗಳನ್ನು ಒಂದೊಂದಾಗಿ ಪ್ರಶ್ನಿಸಿದ ಸ್ಥಳೀಯರು ಹಾಗೂ ಪರಿಸರ ಕಾರ್ಯಕರ್ತರು ಜಿಲ್ಲಾಧಿಕಾರಿ, ಮೇಯರ್‌, ಶಾಸಕ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಅಹವಾಲು ಆಲಿಸಬೇಕು ಎಂದು ಆಗ್ರಹಿಸಿದರು.

‘ಕಾಮಗಾರಿ ಆರಂಭಿಸಿ ಟೆಂಡರ್‌ ಪ್ರಕ್ರಿಯೆ ಮುಗಿಸಿ ಕೊನೆಯ ಹಂತದಲ್ಲಿ ಕಾಟಾಚಾರಕ್ಕೆ ಸಾರ್ವಜನಿಕರ ಜೊತೆ ಸಂವಾದ ನಡೆಸುವುದರಲ್ಲಿ ಅರ್ಥವಿದೆಯೇ’ ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಅರುಣಪ್ರಭ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

ADVERTISEMENT

ಇಲ್ಲಿನ ನೇತ್ರಾವತಿ ನದಿ ತೀರದಲ್ಲಿ ಬದುಕುಕಟ್ಟಿಕೊಂಡಿರುವವರ ಬವಣೆ ಆಲಿಸಿ, ಪರಿಹಾರ ರೂಪಿಸಿದ ನಂತರವೇ ಕಾಮಗಾರಿ ಕೈಗೆತ್ತಿಕೊಳ್ಳಬೇಕಿತ್ತು. ಯೋಜನೆಯಿಂದ ನಿರ್ವಸಿತರಾಗುವವರ ಪುನರ್ವಸತಿ ಕುರಿತು ನಿರ್ಣಯ ಕೈಗೊಳ್ಳುವ ಅಧಿಕಾರಿಗಳೂ ಬಂದಿಲ್ಲ. ಸಾರ್ವಜನಿಕರ ಅಭಿಪ್ರಾಯಗಳಿಗೆ ಬೆಲೆ ಇಲ್ಲದ ಮೇಲೆ ಇಂತಹ ಸಭೆ ನಡೆಸುವುದು ಏಕೆ ಎಂದು ಪ್ರಶ್ನಿಸಿದರು.

‘ನೂರಾರು ವರ್ಷಗಳಿಂದ ನೆಲೆಸಿರುವ ನಾವು ಎಲ್ಲಿ ಹೋಗಬೇಕು. ಇಲ್ಲಿನ ಮೀನಿನ ಬಲೆ ಹೆಣೆಯುವ ನೂರಾರು ಕಾರ್ಮಿಕರು ಏನು ಮಾಡಬೇಕು. ಈ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ನಮ್ಮ ಸಮಸ್ಯೆ ಆಲಿಸಬೇಕೆಂದು ನಿಮಗೇಕೆ ಅನಿಸಲಿಲ್ಲ’ ಎಂದು ಮೀನುಗಾರರೊಬ್ಬರು ಪ್ರಶ್ನಿಸಿದರು. 

ಸಾರ್ವಜನಿಕರ ತೀಕ್ಷ್ಣವಾದ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡಿದ ಅರುಣಪ್ರಭ, ‘ಈ ಯೋಜನೆ ಅನುಷ್ಠಾನದ ವಿಚಾರದಲ್ಲಿ ತಪ್ಪುಗಳು ಆಗಿರುವುದನ್ನು ಒಪ್ಪಿಕೊಳ್ಳುತ್ತೇನೆ. ಅದನ್ನು ಸರಿಪಡಿಸಲೆಂದೇ ಸಭೆ ಕರೆದಿದ್ದೇವೆ. ದಯವಿಟ್ಟು ಸಹಕರಿಸಬೇಕು’ ಎಂದು ಕೋರಿದರು.

ಈ ಯೋಜನೆಯಿಂದ ಸ್ಥಳೀಯರು ಎದುರಿಸುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳದ ಹೊರತು ಇದರ ಅನುಷ್ಠಾನಕ್ಕೆ ಅವಕಾಶ ನೀಡಲು ಸಾಧ್ಯವೇ ಇಲ್ಲ. ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳೀಯರ ಅಹವಾಲು ಆಲಿಸಬೇಕು ಎಂದು ಜನರು ಪಟ್ಟು ಹಿಡಿದರು.

ಯೋಜನೆಯ ವಿವರಗಳನ್ನು ಮಂಡಿಸಲು ಅರುಣಪ್ರಭ ಮುಂದಾದಾಗ ಸಾರ್ವಜನಿಕರು ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಅಧಿಕಾರಿಗಳು ಅಸಹಾಯಕರಾಗಿ ಸಭೆಯಲ್ಲಿ ಮೊಟಕುಗೊಳಿಸಬೇಕಾಯಿತು.

ಪರಿಸರ ಕಾರ್ಯಕರ್ತರಾದ ಶೆರ್ಲಿನ್‌ ಜಿ.ಕೊಲಾಸೊ, ಹರೀಶ್‌ ರಾಜ್‌ಕುಮಾರ್‌, ದಿನೇಶ್‌ ಹೊಳ್ಳ, ಕಾಂಗ್ರೆಸ್‌ ಪಕ್ಷದ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್‌ ಡಿಸೋಜ, ಆಮ್‌ ಆದ್ಮಿ ಪಕ್ಷದ ಷನೋನ್‌ ಲಾರೆನ್ಸ್‌ ಪಿಂಟೊ, ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಮತ್ತಿತರರು ಭಾಗವಹಿಸಿದರು. 

ಜಿಲ್ಲಾಧಿಕಾರಿ, ಶಾಸಕ, ಮೇಯರ್‌ ಸಮ್ಮುಖದಲ್ಲಿ ಸಮಸ್ಯೆ ಆಲಿಸಲು ಆಗ್ರಹ ರಿವರ್‌ ಫ್ರಂಟ್ ಯೋಜನೆಯ ವಿವರ ಮಂಡನೆಗೆ ಅವಕಾಶ ನೀಡದ ಜನರು

ಸ್ಮಾರ್ಟ್‌ ಸಿಟಿ ಕಾಮಗಾರಿಗಳಿಗೆ ನೂರಾರು ಮರಗಳನ್ನು ಕಡಿದಿದ್ದೀರಿ. ನಯು ಸಮುದ್ರ ಸೇರುವಲ್ಲಿ ಕಾಂಕ್ರೀಟ್‌ ಹಾಕುತ್ತಿದ್ದೀರಿ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದರೆ ಯಾರು ಹೊಣೆ– ದಿನೇಶ ಹೊಳ್ಳ ಪರಿಸರ ಕಾರ್ಯಕರ್ತ

ಮಾಹಿತಿ ಹಕ್ಕಿನಡಿ ಕೇಳುವ ಯಾವುದೇ ಪ್ರಶ್ನೆಗೆ ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಸಂಸ್ಥೆ ಉತ್ತರ ನೀಡಿವುದಿಲ್ಲ. ಇಲ್ಲಿ ಸಭೆಯಲ್ಲೂ ತಪ್ಪು ಮಾಹಿತಿ ನೀಡುತ್ತಿದ್ದೀರಿ. – ಶೆರಿಲ್‌ ಜಿ.ಕುಲಾಸೊ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.