ಬೆಳ್ತಂಗಡಿ: ತಾಲ್ಲೂಕಿನಾದ್ಯಂತ ಗುರುವಾರವೂ ವ್ಯಾಪಕ ಮಳೆ ಮುಂದುವರಿದ್ದಿದ್ದು, ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ಎರಡು ವರ್ಷಗಳ ಬಳಿಕ ತಾಲ್ಲೂಕಿನಲ್ಲಿ ಭಾರಿ ಮಳೆ ಆಗಿರುವುದರಿಂದ ನೇತ್ರಾವತಿ, ಪಲ್ಗುಣಿ, ಮೃತ್ಯುಂಜಯ, ಸೋಮಾವತಿ ನದಿಗಳು ನದಿ ಮಟ್ಟ ಮೀರಿ ಹರಿಯುತ್ತಿದ್ದು, ಆಸುಪಾಸಿನ ತೋಟಗಳಿಗೆ ನೀರು ನುಗ್ಗಿದೆ.
ನೇತ್ರಾವತಿ ತುಂಬಿ ಹರಿಯುತ್ತಿರುವುದರಿಂದ ಧರ್ಮಸ್ಥಳ ಸ್ನಾನ ಘಟ್ಟದ ಮಟ್ಟ ಗುರುವಾರ ಮಧ್ಯಾಹ್ನದ ಬಳಿಕ ಮತ್ತೆ ಏರಿಕೆಯಾಗಿದೆ. ಸುರಕ್ಷತೆಯ ದೃಷ್ಟಿಯಿಂದ ನದಿಗೆ ಇಳಿದು ಸ್ನಾನ ಮಾಡದಂತೆ ಸೂಚಿಸಲಾಗಿದೆ. ಮೆಟ್ಟಿಲುಗಳವರೆಗೆ ನೀರು ಹರಿದು ಅಪಾಯ ಮಟ್ಟಕ್ಕೆ ತಲುಪಿದೆ. ಪಜಿರಡ್ಕ ಸಂಗಮಕ್ಷೇತ್ರ ಸದಾಶಿವೇಶ್ವರ ದೇವಸ್ಥಾನದಲ್ಲಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಸಂಗಮಕ್ಷೇತ್ರದ ಕೆಳಭಾಗ ನೀರಿನಲ್ಲಿ ಆವರಿಸಿದೆ. 2019ರ ಪ್ರವಾಹದ ಸಂದರ್ಭದಲ್ಲೂ ನೀರಿನ ಮಟ್ಟ ಇದೇ ರೀತಿ ಏರಿಕೆಯಾಗಿತ್ತು.
ನದಿ ನೀರು ಹೆಚ್ಚಾಗಿರುವ ಪರಿಣಾಮ ಮುಂಡಾಜೆ ಆಸುಪಾಸು ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ರಾಧಾ ಹೆಬ್ಬಾರ್ ಅವರ ಅಡಿಕೆ ತೋಟದ ನೂರಾರು ಅಡಿಕೆ ಮರಗಳು ನೀರಿನಿಂದ ಆವೃತವಾಗಿವೆ. ಮಳೆಯ ಆರ್ಭಟಕ್ಕೆ ನೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಲೋಡಿ ಬಳಿ ಕೃಷ್ಣಪ್ಪ ಮಲೆಕುಡಿಯ ಎಂಬುವರ ಮನೆ ಬಳಿ ಗುಡ್ಡ ಕುಸಿದಿದೆ. ಮನೆಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಕತ್ತರಿಗುಡ್ಡೆ ನಿವಾಸಿ ಮೊಯಿದೀನ್ ಕುಞಿ ಅವರ ವಾಸದ ಮನೆಗೆ ಭಾಗಶಃ ಹಾನಿಯಾಗಿದೆ. ಮನೆಯವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಚಿಬಿದ್ರೆ ಗ್ರಾಮದ ಉರ್ಪೆದ ಗುಡ್ಡೆ ನಿವಾಸಿಯಾದ ರಫೀಕ್ ಅವರ ಮನೆ ಭಾಗಶಃ ಹಾನಿಯಾಗಿದೆ. ನಿಟ್ಟಡೆ ಗ್ರಾಮದ ಸಂಜೀವ ಕುಂದರ್ ಅವರ ಮನೆಯ ಮಣ್ಣಿನ ಗೋಡೆ ಭಾರಿ ಮಳೆಯಿಂದ ಭಾಗಶಃ ಕುಸಿದಿದೆ.
ಗಾಳಿ, ಮಳೆಗೆ ಮರ ಬಿದ್ದ ಪರಿಣಾಮ ಮುಂಡಾಜೆಯ ದುಂಬೆಟ್ಟು ಬಳಿ ವಿದ್ಯುತ್ ಪರಿವರ್ತಕ ನೆಲಕ್ಕೆ ಬಿದ್ದಿದೆ. ನಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಂಬದ ಬಳಿ ಮಾರ್ಗಕ್ಕೆ ಮರವೊಂದು ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಮರವನ್ನು ತೆರವು ಗೊಳಿಸಿ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.