ಕಾಸರಗೋಡು: ಭಾರತೀಯ ಕ್ರಿಕೆಟ್ ತಂಡ ಹೊಸ ಆಯಾಮ ಪಡೆದುಕೊಂಡು, ಹೊಸ ಆಟಗಾರರನ್ನು ಪಡೆದಿದ್ದರೂ, ಕಾಸರಗೋಡಿನಲ್ಲಿ ಸುನಿಲ್ ಗವಾಸ್ಕರ್ ಅವರಿಗೆ ಇಂದಿಗೂ ತಾರಾ ಮೆರುಗು ಇದೆ. ಇದರ ದ್ಯೋತಕವಾಗಿ ನಗರದ ನೆಲ್ಲಿಕುಂಜೆ -ಬೀಚ್ ರಸ್ತೆ ಇನ್ನುಮುಂದೆ ಗವಾಸ್ಕರ್ ಹೆಸರಲ್ಲಿ ಗುರುತಿಸಿಕೊಳ್ಳಲಿದ್ದು, ಅವರು ಶೀಘ್ರದಲ್ಲಿ ಕಾಸರಗೋಡು ನಗರಕ್ಕೆ ಬಂದು ರಸ್ತೆಗೆ ನಾಮಕರಣ ಮಾಡುವರು.
ನಗರಸಭೆ ಈ ಸಂಬಂಧ ಸಭೆ ನಡೆಸಿ ನಿರ್ಧಾರ ಕೈಗೊಂಡಿದೆ ಎಂದು ಅಧ್ಯಕ್ಷ ಅಬ್ಬಾಸ್ ಬೀಗಂ ತಿಳಿಸಿದ್ದಾರೆ.
ತಳಂಗರೆ ನಿವಾಸಿ, ಕೊಲ್ಲಿ ರಾಷ್ಟ್ರದಲ್ಲಿ ಉದ್ಯಮಿಯಾಗಿರುವ ಖಾದರ್ ತೆರುವತ್ ಅವರು ಗವಾಸ್ಕರ್ ಅವರ ಆತ್ಮೀಯರಲ್ಲಿ ಒಬ್ಬರಾಗಿದ್ದು, ಅವರ ವಿಶೇಷ ಕಾಳಜಿಯ ಕಾರಣವಾಗಿ ಈ ತೀರ್ಮಾನ ಮಾಡಲಾಗಿದೆ. ಈ ತಿಂಗಳ ಕೊನೆ ಅಥವಾ ನವೆಂಬರ್‌ನಲ್ಲಿ ಸುನಿಲ್ ಗವಾಸ್ಕರ್ ಕಾಸರಗೋಡಿಗೆ ಬರುವ ಸಾಧ್ಯತೆ ಇದೆ.
1983ರಲ್ಲಿ ಗೆದ್ದ ವಿಶ್ವಕಪ್ ಸಂಭ್ರಮದ 40ನೇ ವರ್ಷಾಚರಣೆ ಮುಂಬೈನಲ್ಲಿ ನಡೆದಾಗ ಖಾದರ್ ತೆರುವತ್ ವಿಶೇಷ ಆಮಂತ್ರಿತರಾಗಿದ್ದರು. ಅಲ್ಲಿ ಭೇಟಿಯಾದ ಗವಾಸ್ಕರ್ ಅವರಲ್ಲಿ ಈ ಬಗ್ಗೆ ವಿನಂತಿಸಿಕೊಂಡಾಗ ಮರುಮಾತಿಲ್ಲದೆ ಒಪ್ಪಿಕೊಂಡಿದ್ದಾರೆ. ವಿಶ್ವ ಪ್ರಸಿದ್ಧ ಗೆಳೆಯನನ್ನು ಹುಟ್ಟೂರಿಗೆ ಕರೆತರುವುದು ನನ್ನ ಕನಸು ಎಂದು ಖಾದರ್ ತಿಳಿಸಿದರು.
ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಗವಾಸ್ಕರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಾಸರಗೋಡಿಗೆ ಸ್ವಾಗತ ಕೋರಿದ್ದಾರೆ. ನಗರಸಭೆ ಅಧ್ಯಕ್ಷ ಅಬ್ಬಾಸ್ ಬೀಗಂ ಅವರಲ್ಲಿ ಮಾಡಿರುವ ಒತ್ತಾಯದ ಫಲವಾಗಿ ನೆಲ್ಲಿಕುಂಜೆ ರಸ್ತೆ ‘ಸುನಿಲ್ ಗವಾಸ್ಕರ್ ಬೀಚ್ ರಸ್ತೆ’ ಎನಿಸಿಕೊಳ್ಳಲಿದೆ.
ಕುಂಬಳೆ ಪಟ್ಟಣದ ಬಳಿಯ ರಸ್ತೆಯೊಂದಕ್ಕೆ ಕೆಲವು ವರ್ಷಗಳ ಹಿಂದೆ ಕ್ರಿಕೆಟ್ ಪಟು ಅನಿಲ್ ಕುಂಬಳೆ ಅವರ ಹೆಸರು ಇರಿಸಲಾಗಿದೆ. ಈ ರಸ್ತೆಯ ನಾಮಫಲಕವನ್ನೂ ಅನಿಲ್ ಕುಂಬಳೆ ಅವರೇ ಅನಾವರಣಗೊಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.