ADVERTISEMENT

ಮಂಗಳೂರು | ರಸ್ತೆಯೇ ಚರಂಡಿಯಾಗುವ ಬಗೆ...

ಜೆಪ್ಪು–ಕುಡ್ಪಾಡಿ: ಮೇಲಿನ ಭಾಗದಲ್ಲಿ ಅಪಾರ್ಟ್‌ಮೆಂಟ್‌ಗಳು; ಕೆಳಪ್ರದೇಶದಲ್ಲಿ ರೈಲ್ವೆಯ ಜಾಗ

ವಿಕ್ರಂ ಕಾಂತಿಕೆರೆ
Published 22 ಜೂನ್ 2024, 6:54 IST
Last Updated 22 ಜೂನ್ 2024, 6:54 IST
ಜೆಪ್ಪು–ಕುಡ್ಪಾಡಿ ರಸ್ತೆಯಲ್ಲಿ ಚರಂಡಿ ನೀರು ಹರಿದಾಗ...
ಜೆಪ್ಪು–ಕುಡ್ಪಾಡಿ ರಸ್ತೆಯಲ್ಲಿ ಚರಂಡಿ ನೀರು ಹರಿದಾಗ...   

ಮಂಗಳೂರು: ನಗರದ ಜೆಪ್ಪು ವಾರ್ಡ್‌ನ ಕುಟ್ಪಾಡಿ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಚರಂಡಿಯ ನೀರು ಉಕ್ಕಿ ಹರಿಯುತ್ತಿತ್ತು. ಓಡಾಟ ಮತ್ತು ದುರ್ವಾಸನೆ ಸಹಿಸಲು ಅಸಾಧ್ಯವಾದಾಗ ಸ್ಥಳೀಯರು ಪಾಲಿಕೆಗೆ ಕರೆ ಮಾಡಿದರು. ಸಕ್ಕಿಂಗ್ ಮಷಿನ್ ಬಂತು. ನೀರು ಹರಿಯುವ ದಾರಿಯಲ್ಲಿ ಏನೋ ಕಟ್ಟಿನಿಂತು ತೊಂದರೆ ಆಗಿರಬಹುದು ಎಂದುಕೊಂಡು ನೋಡುತ್ತ ನಿಂತವರಿಗೆ ಅಚ್ಚರಿ ಕಾದಿತ್ತು.

ಸಕ್ಕಿಂಗ್ ಮಷಿನ್‌ಗೆ ಸಿಲುಕಿದ್ದು ಸಾಮಾನ್ಯ ವಸ್ತುಗಳಲ್ಲ. ಪ್ಲಾಸ್ಟಿಕ್‌ ಚೀಲಗಳು ದೊಡ್ಡ ಪ್ರಮಾಣದಲ್ಲಿ ಅದರಲ್ಲಿ ಇದ್ದವು. ಬಳಸಿ ಎಸೆದ ಬಟ್ಟೆಗಳು, ಸ್ಯಾನಿಟರಿ ಪ್ಯಾಡ್‌ಗಳು ಇತ್ಯಾದಿ ಅನೇಕ ವಸ್ತುಗಳೂ ಇದ್ದವು. ಎಲ್ಲವನ್ನೂ ತೆಗೆದು ರಸ್ತೆಯನ್ನು ಸಂಚಾರಯೋಗ್ಯ ಮಾಡುವಷ್ಟರಲ್ಲಿ ತಾಸುಗಳೇ ಕಳೆದವು. ಆದರೂ ಇಲ್ಲಿನ ನಿವಾಸಿಗಳ ಚಿಂತೆ ದೂರವಾಗಲಿಲ್ಲ. ಯಾಕೆಂದರೆ ಇದು ಇಲ್ಲಿನವರಿಗೆ ಹೊಸತೇನೂ ಅಲ್ಲ. ಮಳೆಗಾಲದಲ್ಲಂತೂ ನಿತ್ಯದ್ದು ಎಂಬಂಥ ಗೋಳು.

ನಗರದ ಪಾಂಡೇಶ್ವರ, ಮಂಗಳಾದೇವಿ, ಜೆಪ್ಪು ಮುಂತಾದ ಪ್ರದೇಶಗಳ ಜನರು ಮಂಗಳೂರು– ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯನ್ನು ಸುಲಭವಾಗಿ ತಲುಪಲು ಬಳಸುವುದು ಜೆಪ್ಪು–ಕುಟ್ಪಾಡಿ ರಸ್ತೆಯನ್ನು. ಅಗಲ ಕಿರಿದಾದ ಈ ರಸ್ತೆಯ ಇಕ್ಕೆಲಗಳಲ್ಲೂ ಮನೆಗಳು ಇವೆ. ಇವರೆಲ್ಲರೂ ಚರಂಡಿ ನೀರು ಉಕ್ಕಿ ಹರಿಯುವುದನ್ನು ಕಂಡು, ಅನುಭವಿಸಿ ರೋಸಿ ಹೋಗಿದ್ದಾರೆ. ‘ಭೂಗತವಾಗಿ ಹರಿಯಬೇಕಾದ ನೀರು ಯಾವಾಗ ಮೇಲೆದ್ದು ರಸ್ತೆಯನ್ನು ಆವರಿಸಿಕೊಳ್ಳುತ್ತದೆ ಎಂದು ಹೇಳುವುದು ಕಷ್ಟ. ಅನೇಕ ವರ್ಷಗಳಿಂದ ಇದನ್ನು ಅನುಭವಿಸುತ್ತಿದ್ದೇವೆ. ಪರಿಹಾರ ಬಯಸಿ ಅಧಿಕಾರಿಗಳನ್ನು ಸಂಪರ್ಕಿಸಿ ಆಗಿದೆ. ಆದರೆ ಏನೂ ಪ್ರಯೋಜನ ಆಗಿಲ್ಲ’ ಎಂದು ಸ್ಥಳೀಯ ನಿವಾಸಿಯೊಬ್ಬರು ಬೇಸರದಿಂದ ಹೇಳಿದರು.

ADVERTISEMENT

ಜೆಪ್ಪು ಭಾಗದ ಮಾರ್ನಮಿಕಟ್ಟೆಯ ಸ್ವಲ್ಪ ಕೆಳಗಿಳಿದರೆ ಈ ರಸ್ತೆ ಸಿಗುತ್ತದೆ. ಮೇಲ್ಭಾಗ ತುಂಬ ಎತ್ತರದ ಪ್ರದೇಶವಾಗಿದ್ದು ಸುಮಾರು ಒಂದು ಕಿಲೊಮೀಟರ್ ಉದ್ದದ ರಸ್ತೆಯ ಕೆಳಭಾಗದಲ್ಲಿ ರೈಲ್ವೆಗೆ ಸೇರಿದ ಜಾಗ ಇದೆ. ಇದನ್ನು ದಾಟಿ ಹಳ್ಳಿಯಂಥ ವಾತಾವರಣದಲ್ಲಿ ಮುಂದೆ ಸಾಗಿದರೆ ರಾಷ್ಟ್ರೀಯ ಹೆದ್ದಾರಿ 66ರ ಗುಡ್ಡೆಗುತ್ತು ತಲುಪುತ್ತದೆ. ಪಂಪ್‌ವೆಲ್ ಕಡೆಯಿಂದ ಸುತ್ತು ಹಾಕಿ ಅಥವಾ ಮಾರ್ಗನ್‌ ಗೇಟ್ ಕಡೆಯಿಂದ ಪ್ರಯಾಸದಿಂದ ಸಾಗುವ ಬದಲು ಈ ದಾರಿ ಸಮೀಪ ಎಂಬ ಕಾರಣಕ್ಕೆ ಆ ಮೂಲಕ ಹೋಗವವರೇ ಹೆಚ್ಚು. ಆದರೆ ಒಳಚರಂಡಿ ಉಕ್ಕಿ ಹರಿದಾಗ ಅದರ ಮೂಲಕವೇ ವಾಹನಗಳೂ ಸಾಗಿದರೆ ಸಮೀಪದ ನಿವಾಸಿಗಳ ಸಂಕಟ ಹೇಳತೀರದು.

‘ಮೇಲ್ಭಾಗದ ಯಾವುದಾದರೂ ಒಂದು ಮ್ಯಾನ್ ಹೋಲ್ ಮೂಲಕ ನೀರು ಉಕ್ಕಿದರೂ ಸಾಕು, ಇಲ್ಲಿಯ ವರೆಗೆ ಬಂದು ತಲುಪುತ್ತದೆ. ಒಂದಲ್ಲ, ಹಲವು ಮ್ಯಾನ್‌ಹೋಲ್‌ಗಳು ಉಕ್ಕುವುದು ಇಲ್ಲಿ ಸಾಮಾನ್ಯ. ಅದರಿಂದ ನಾವು ಅನುಭವಿಸುವ ತೊಂದರೆ ಅಷ್ಟಿಷ್ಟಲ್ಲ’ ಎಂದು ಮನೆಯೊಂದರ ಯಜಮಾನರು ಹೇಳಿದರು.

ವಾಹನಗಳ ಓಡಾಟವೂ ಕಷ್ಟ

ಇದು ಹೆಚ್ಚು ಅಗಲವಿಲ್ಲದ ರಸ್ತೆ. ದ್ವಿಚಕ್ರ ವಾಹನ ಬಿಟ್ಟು ಬೇರೆ ಯಾವುದೇ ವಾಹನ ಎದುರು ಬದುರಾದರೂ ಒಂದು ರಿವರ್ಸ್‌ ಹೋಗಿ ಯಾರದಾದರೂ ಮನೆಯ ಗೇಟ್ ಬಳಿ ಜಾಗ ಮಾಡಿಕೊಡಬೇಕಾದ ಅನಿವಾರ್ಯ ಸ್ಥಿತಿ. ಹೀಗಾಗಿ ‘ಟ್ರಾಫಿಕ್‌ ಜಾಮ್‌’ ಇಲ್ಲಿ ಪ್ರತಿ ಕ್ಷಣವೂ ನಡೆಯುತ್ತಲೇ ಇರುತ್ತದೆ. ವಾಹನಗಳು ಸಾಲುಗಟ್ಟಿ ನಿಂತಾಗ ಹಾರನ್ ಕಿರಿಕಿರಿ ಸಮೀಪದ ನಿವಾಸಿಗಳಿಗೆ ತಪ್ಪಿದ್ದಲ್ಲ. 

ನಾಗರಿಕ ಪ್ರಜ್ಞೆ ಬೆಳೆಯಬೇಕು

ಚರಂಡಿ ಇರುವುದು ಮಲಿನ ನೀರು ಅಥವಾ ಮಳೆನೀರು ಹರಿಯುವುದಕ್ಕೆ. ಆದರೆ ಈ ಚರಂಡಿಯಲ್ಲಿ ಪ್ಲಾಸ್ಟಿಕ್‌ ಮತ್ತಿತರ ವಸ್ತುಗಳು ತುಂಬಿ ಆಗಾಗ ಸಮಸ್ಯೆ ಆಗುತ್ತದೆ. ಮೇಲ್ಭಾಗದ ಮಳೆನೀರಿನ ಬಹುಪಾಲು ಈ ರಸ್ತೆಯ ಚರಂಡಿ ಮೂಲಕವೇ ಹರಿಯುತ್ತದೆ. ಆದ್ದರಿಂದ ಮಳೆ ಬಂದಾಗಲೆಲ್ಲ ಭಾರಿ ಪ್ರಮಾಣದ ನೀರು ತುಂಬಿ ಉಕ್ಕುತ್ತದೆ. ಜನರು ಮನೆ ಛಾವಣಿಯ ನೀರನ್ನು ಚರಂಡಿಗೆ ಬಿಡುವುದನ್ನು ನಿಲ್ಲಿಸಬೇಕು, ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನೂ ನಿಲ್ಲಿಸಬೇಕು. ಇದು ಅಸಾಧ್ಯವಾದ ಕೆಲಸವೇನೂ ಅಲ್ಲ. ಸ್ವಲ್ಪ ಶಿಸ್ತು, ನಾಗರಿಕ ಪ್ರಜ್ಞೆ ಬೆಳೆಸಿಕೊಂಡರೆ ಸಾಕು ಎಂದು ಮಹಾನಗರಪಾಲಿಕೆ ಜೆಪ್ಪು ವಾರ್ಡ್‌ನ ಸದಸ್ಯ ಭರತ್ ಕುಮಾರ್ ಎಸ್‌ ಹೇಳಿದರು.

ಜೆಪ್ಪು–ಕುಡ್ಪಾಡಿ ರಸ್ತೆಯಲ್ಲಿ ಚರಂಡಿ ಉಕ್ಕಿ ಹರಿದಾಗ ವಾಹನ ಸಂಚಾರ ದುಸ್ತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.