ಮಂಗಳೂರು: ‘ದೇಶದಲ್ಲಿ ನಿತ್ಯವೂ ರಸ್ತೆ ಅಫಘಾತಗಳಲ್ಲಿ ನೂರಾರು ಜನರು ಪ್ರಾಣ ಬಿಡುತ್ತಾರೆ. ಮಂಗಳೂರು ನಗರದಲ್ಲಿ ಪ್ರತಿ ವರ್ಷ ಸುಮಾರು 800ರಿಂದ 900 ಅಪಘಾತಗಳು ಸಂಭವಿಸಿ 100ರಿಂದ 125 ರಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಇದನ್ನು ತಡೆಯಲು ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ’ ಎಂದು ಮಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಬಿ.ಪಿ. ದಿನೇಶ್ ಕುಮಾರ್ ಹೇಳಿದರು.
ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ, ಪೊಲೀಸ್ ಇಲಾಖೆ ಮತ್ತು ಮಾಂಡವಿ ಮೋಟರ್ಸ್‍ನ ಸಹಯೋಗದಲ್ಲಿ ನಗರದ ಹಂಪನಕಟ್ಟೆಯ ಮಾಂಡವಿ ಮೋಟರ್ಸ್ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಕೆಂಪು ಗುಲಾಬಿ ಅಭಿಯಾನ’ ಮತ್ತು ರಸ್ತೆ ಸುರಕ್ಷಾ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಅಭಿಯಾನದ ಅಂಗವಾಗಿ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನ ಚಾಲಕರಿಗೆ ಕೆಂಪು ಗುಲಾಬಿ ಹೂವನ್ನು ನೀಡಿ ಸುರಕ್ಷಿತವಾಗಿ ವಾಹನಗಳನ್ನು ಓಡಿಸುವಂತೆ ಜಾಗೃತಿ ಮೂಡಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ. ಮುರಲೀಮೋಹನ ಚೂಂತಾರು, ‘ರಸ್ತೆ ಸಂಚಾರ ನಿಯಮಗಳನ್ನು ಪೊಲೀಸರಿಗಾಗಿ ಅಲ್ಲ, ನಮ್ಮ ಸುರಕ್ಷತೆಗಾಗಿ ಪಾಲಿಸಬೇಕು. ದಂಡ ಶುಲ್ಕ ಪಡೆಯುವ ಉದ್ದೇಶದಿಂದಲ್ಲ, ಜೀವಕ್ಕೆ ಹಾನಿಯಾಗಬಾರದು ಎಂಬ ಉದ್ದೇಶದಿಂದ ರಸ್ತೆ ಸುರಕ್ಷತಾ ನಿಯಮವನ್ನು ರೂಪಿಸಲಾಗಿದೆ. ಅಪಘಾತಗಳನ್ನು ತಡೆಯಲು ನಿಯಮಗಳ ಪಾಲನೆಯೊಂದೇ ಸರಿಯಾದ ದಾರಿ’ ಎಂದರು.
ಮಾಂಡೋವಿ ಮೋಟರ್ಸ್‍ನ ಉಪಾಧ್ಯಕ್ಷ ಪಾರ್ಶ್ವನಾಥ್, ಸಂಚಾರಿ ಎಸಿಪಿ ಗೀತಾ ಕುಲಕರ್ಣಿ, ಸಂಚಾರಿ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಭಟ್, ಮಾಂಡೋವಿ ಮೋಟರ್ಸ್‍ನ ಡಿಜಿಎಂ ಶಶಿಧರ್ ಕಾರಂತ್, ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್‍ಶೇರಾ, ಮಾಂಡೋವಿ ಮೋಟರ್ಸ್‍ನ ಸಿಬ್ಬಂದಿ, ಗೃಹರಕ್ಷಕರಾದ ಸುನಿಲ್ ಕುಮಾರ್, ಜ್ಞಾನೇಶ್, ದಿವಾಕರ್, ಮಂಜುನಾಥ, ಬಬಿತಾ, ಸಂಜಯ್ ಶೆಣೈ, ರಾಜೇಶ್ ಗಟ್ಟಿ, ಮಲ್ಲಿಕಾ ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.