ಬಂಟ್ವಾಳ/ಮಂಗಳೂರು: ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಬಿ.ಸಿ.ರೋಡ್‌ನಿಂದ ಕೊಟ್ಟಿಗೆಹಾರದವರೆಗೆ ರಸ್ತೆ ವಿಸ್ತರಣಾ ಕಾಮಗಾರಿ ನಡೆಯುತ್ತಿರುವ ಕಾರಣದಿಂದ ಈ ಮಾರ್ಗದ ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‌ನಿಂದ ಜಕ್ರಿಬೆಟ್ಟುವರೆಗೆ ಶುಕ್ರವಾರದಿಂದ ಆಗಸ್ಟ್ 18ರವರೆಗೆ ವಾಹನ ಸಂಚಾರ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಆದೇಶ ಹೊರಡಿಸಿದ್ದಾರೆ.
ಈ ಮಾರ್ಗದಲ್ಲಿ ಪೇವ್ ಶೋಲ್ಡರ್‌ನೊಂದಿಗೆ ದ್ವಿಪಥ ಮತ್ತು ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಬಿ.ಸಿ.ರೋಡ್‌ನಿಂದ ಜಕ್ರಿಬೆಟ್ಟುವರೆಗೆ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಪ್ರಗತಿಯಲ್ಲಿದೆ. 3.9 ಕಿ.ಮೀ. ಉದ್ದದ ಕಾಂಕ್ರೀಟ್ ರಸ್ತೆಯ ಕ್ಯೂರಿಂಗ್‌ಗಾಗಿ ವಾಹನ ಸಂಚಾರ ನಿಷೇಧಿಸುವಂತೆ ಕೋರಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದರು.
ಬಿ.ಸಿ.ರೋಡ್‌ನಿಂದ ಜಕ್ರಿಬೆಟ್ಟುವರೆಗೆ ವಾಹನ ಸಂಚಾರ ನಿಷೇಧಿಸಿ ಶುಕ್ರವಾರ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಸೂಚನೆ ನೀಡಿದ್ದಾರೆ. ಮೂರು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
ಪರ್ಯಾಯ ಮಾರ್ಗಗಳು:
ಕಾರುಗಳು, ಜೀಪುಗಳು, ಟೆಂಪೋ, ವ್ಯಾನ್ ಎಲ್‍ಸಿವಿ (ಮಿನಿ ವ್ಯಾನ್), ದ್ವಿಚಕ್ರ ವಾಹನಗಳು ಹಾಗೂ ಆಂಬುಲೆನ್ಸ್ ಮತ್ತು ದಿನನಿತ್ಯ ಸಂಚರಿಸಬಹುದಾದ ಸಾರ್ವಜನಿಕ ಬಸ್‌ಗಳು ಮಂಗಳೂರಿನಿಂದ ಪುಂಜಾಲಕಟ್ಟೆಯ ಕಡೆಗೆ ಮಂಗಳೂರು-ಬಿ.ಸಿ.ರೋಡ್-ಬಂಟ್ವಾಳಪೇಟೆ-ಜಕ್ರಿಬೆಟ್ಟು ಮಾರ್ಗವಾಗಿ ಹಾಗೂ ಪುಂಜಾಲಕಟ್ಟೆಯಿಂದ ಮಂಗಳೂರು ಕಡೆಗೆ ಜಕ್ರಿಬೆಟ್ಟು-ಬಂಟ್ವಾಳ ಪೇಟೆ-ಬಿ.ಸಿ.ರೋಡ್-ಮಂಗಳೂರು ಮಾರ್ಗ ಸಂಚರಿಸಬಹುದು. ಮೂಡುಬಿದಿರೆ ಬಂಟ್ವಾಳ- ಬಿ.ಸಿ.ರೋಡ್ ಕಡೆಗೆ ಮೂಡುಬಿದಿರೆ-ಬಂಟ್ವಾಳ ಜಂಕ್ಷನ್- ರಾಷ್ಟ್ರೀಯ ಹೆದ್ದಾರಿ 234ರ ಮುಖಾಂತರ ಜಕ್ರಿಬೆಟ್ಟು-ಬಂಟ್ವಾಳ ಪೇಟೆ-ಬಿ.ಸಿ.ರೋಡ್ ಮಾರ್ಗವಾಗಿ ಸಂಚರಿಸಬಹುದು.
ಘನ ವಾಹನಗಳ ಸಂಚಾರವನ್ನು ಈ ಮಾರ್ಗದಲ್ಲಿ ಸಂಪೂರ್ಣ ನಿಷೇಧಿಸಲಾಗಿದೆ. ಟ್ಯಾಂಕರ್‌ಗಳು, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚೇಸಿಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಆ್ಯಕ್ಸೆಲ್ ಟ್ರಕ್ ಟ್ರೈಲರ್ಸ್, ರಾಜಹಂಸ ಬಸ್‌ಗಳು ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಾಣೆ ವಾಹನಗಳು ಮಂಗಳೂರಿನಿಂದ ಗುರುವಾಯನಕೆರೆ ಕಡೆಗೆ ಮಂಗಳೂರು-ಬಿ.ಸಿ.ರೋಡ್-ಮಾಣಿ-ಉಪ್ಪಿನಂಗಡಿ (ರಾಜ್ಯ ಹೆದ್ದಾರಿ 118) ಮುಖಾಂತರ ಕರಾಯ-ಕಲ್ಲೇರಿ-ಗುರುವಾಯನಕೆರೆ ಹಾಗೂ ಗುರುವಾಯನಕೆರೆಯಿಂದ ಮಂಗಳೂರಿನ ಕಡೆಗೆ ಗುರುವಾಯನಕೆರೆ (ರಾಜ್ಯ ಹೆದ್ದಾರಿ 118) ಮುಖಾಂತರ ಕಲ್ಲೇರಿ-ಕರಾಯ-ಉಪ್ಪಿನಂಗಡಿ-ಮಾಣಿ-ಬಿ.ಸಿ.ರೋಡ್-ಮಂಗಳೂರು ಮಾರ್ಗವಾಗಿ ಸಂಚರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.