ಬೆಳ್ತಂಗಡಿ: ಚಾರ್ಮಾಡಿ ಘಾಟಿ ರಸ್ತೆ ಪರಿಸರದಲ್ಲಿ ನಿರಂತರವಾಗಿ ಕಾಡಾನೆ ಕಂಡು ಬರುತ್ತಿರುವುದರಿಂದ ಅರಣ್ಯ ಇಲಾಖೆಯು ರಾತ್ರಿ ಗಸ್ತು ಆರಂಭಿಸಿದೆ.
ಕೆಲವು ದಿನಗಳಿಂದ ಕಾಡಾನೆ ಪ್ರತಿದಿನ ಘಾಟಿಯ ಒಂದನೇ ತಿರುವಿನಿಂದ ಒಂಬತ್ತನೇ ತಿರುವಿನವರೆಗೆ ಸಂಚರಿಸುತ್ತಿದ್ದು, ರಸ್ತೆಯಲ್ಲಿ ನಿಂತು ಈಚಲ ಮರ ತಿನ್ನುತ್ತಿತ್ತು. ಹಲವು ಬಾರಿ ಹಗಲಲ್ಲೂ ಕಾಣಿಸಿಕೊಳ್ಳುತ್ತಿದ್ದರಿಂದ ವಾಹನ ಸವಾರರು ಭಯಗೊಂಡಿದ್ದರು.
ಈ ಸಂಬಂಧ ಪರಿಶೀಲನೆ ನಡೆಸಿದ ಬೆಳ್ತಂಗಡಿ ಆರ್‌ಎಫ್‌ಒ ಮೋಹನ್ ಕುಮಾರ್ ಅವರ ತಂಡ, ಡಿಎಫ್‌ಒ ಆಂಟನಿ ಮರಿಯಪ್ಪ ಅವರ ನಿರ್ದೇಶನದಂತೆ ರಾತ್ರಿ ಗಸ್ತು ಆರಂಭಿಸಿದೆ. ಗಸ್ತು ತಂಡವು ಚಾರ್ಮಾಡಿ ಪೇಟೆಯಿಂದ ಘಾಟಿ ಪರಿಸರದವರೆಗೆ ರಾತ್ರಿ ಸಂಚರಿಸುತ್ತದೆ. ಆನೆ ಕಂಡು ಬಂದರೆ ಅಗತ್ಯ ಸಂದರ್ಭ ಸಿಬ್ಬಂದಿಗೆ ಸ್ವ- ರಕ್ಷಣೆಗಾಗಿ ಬಂದೂಕು, ಆನೆ ಓಡಿಸಲು ಬೇಕಾದ ಪಟಾಕಿ, ವಾಹನ, ಟಾರ್ಚ್ ಒದಗಿಸಲಾಗಿದೆ. ಎರಡು ದಿನಗಳಿಂದ ಘಾಟಿ ಪರಿಸರದಲ್ಲಿ ಕಾಡಾನೆ ಕಂಡು ಬಂದಿಲ್ಲ. ಘಾಟಿ ಸಮೀಪದ ನೆರಿಯ ಗ್ರಾಮದ ಬಾಂಜಾರು ಮಲೆ ಪರಿಸರಕ್ಕೆ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.